ಬೆಂಗಳೂರು (ಏ.21):  ಉದ್ಯಮಿ ಬಿ.ಆರ್‌. ಶೆಟ್ಟಿ, ಮತ್ತವರ ಪತ್ನಿ ಹೊಂದಿರುವ ಬ್ಯಾಂಕ್‌ ಠೇವಣಿ, ಷೇರು, ಮ್ಯೂಚುಯಲ್‌ ಫಂಡ್‌ ಸೇರಿದಂತೆ ಯಾವುದೇ ಚರಾಸ್ತಿಯನ್ನು ವರ್ಗಾವಣೆ ಮಾಡದಂತೆ ಹೈಕೋರ್ಟ್‌ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಉದ್ಯಮಿಯ ಚರಾಸ್ತಿ ವರ್ಗಾವಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ್ದ ವಾಣಿಜ್ಯ ನ್ಯಾಯಾಧಿಕರಣ ಆದೇಶ ಪ್ರಶ್ನಿಸಿ ಬ್ಯಾಂಕ್‌ ಆಫ್‌ ಬರೋಡ ಸಲ್ಲಿಸಿರುವ ವಾಣಿಜ್ಯ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಸ್ಥಿರಾಸ್ತಿ ವರ್ಗಾವಣೆಗೆ ವಾಣಿಜ್ಯ ನ್ಯಾಯಾಧಿಕರಣ ನೀಡಿರುವ ತಡೆಯಾಜ್ಞೆ ತೆರವು ಮಾಡಲು ನಿರಾಕರಿಸಿದೆ.

ಜೊತೆಗೆ, ಚರಾಸ್ತಿಗಳ ಮಾರಾಟ, ಅಡಮಾನ ಸೇರಿದಂತೆ ಯಾವುದೇ ರೀತಿಯ ವರ್ಗಾವಣೆಗೆ ಅನುಮತಿ ಕೋರಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಲು ಶೆಟ್ಟಿದಂಪತಿಗೆ ಅವಕಾಶವಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಉದ್ಯಮಿ ಬಿ. ಆರ್‌. ಶೆಟ್ಟಿಯ ವಿಶ್ವದೆಲ್ಲೆಡೆ ಆಸ್ತಿ ಜಪ್ತಿ ಆದೇಶ!

ಪ್ರಕರಣದ ಹಿನ್ನೆಲೆ:  ಉದ್ಯಮಿ ಬಿ.ಆರ್‌. ಶೆಟ್ಟಿಅವರು ಯುಎಇಯಲ್ಲಿ ಹೊಂದಿರುವ ತಮ್ಮ ವ್ಯವಹಾರಗಳಿಗಾಗಿ ಬ್ಯಾಂಕ್‌ ಆಫ್‌ ಬರೋಡಾದಿಂದ 2,077 ಕೋಟಿ ರು. ಸಾಲ ಪಡೆದಿದ್ದರು. 2020ರ ಮೇ 5ಕ್ಕೆ 1,912 ಕೋಟಿ ರು. ಪಾವತಿಸಬೇಕಿದ್ದು, ಅದನ್ನು ಈವರೆಗೆ ಹಿಂದಿರುಗಿಸಿಲ್ಲ ಎಂದು ಬ್ಯಾಂಕ್‌ ಆಫ್‌ ಬರೋಡಾ ನಗರದ ವಾಣಿಜ್ಯ ನ್ಯಾಯಾಧಿಕರಣದಲ್ಲಿ ದಾವೆ ಹೂಡಿದೆ.

ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ಬ್ಯಾಂಕ್‌ ಕೋರಿಕೆಯಂತೆ ಶೆಟ್ಟಿದಂಪತಿಯ ಸ್ಥಿರಾಸ್ತಿಗಳ ವರ್ಗಾವಣೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದ್ದು, ಚರಾಸ್ತಿ ವರ್ಗಾವಣೆಗೆ ತಡೆ ನೀಡಲು ನಿರಾಕರಿಸಿತ್ತು. ಈ ಆದೇಶ ಪ್ರಶ್ನಿಸಿ ಬ್ಯಾಂಕ್‌ ಆಫ್‌ ಬರೋಡಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಹೈಕೋರ್ಟ್‌ ಚರಾಸ್ತಿ ವರ್ಗಾವಣೆಗೂ ತಾತ್ಕಾಲಿಕ ತಡೆ ನೀಡಿ ಆದೇಶಿಸಿದೆ.