ಗದಗದಲ್ಲಿ ಮಾಧ್ಯಮ ಪ್ರತಿನಿಗಳೊಂದಿಗೆ ಮಾತನಾಡುವಾಗ ಬಜರಂಗ ದಳವನ್ನು ಕಾಂಗ್ರೆಸ್ ಪಕ್ಷ ನಿಷೇಧಿಸಿದರೆ, ಆ ಪಕ್ಷದವರಿಗೆ ‘ಎಲ್ಲಾ ಹಿಂದೂಗಳು ಬಹಿಷ್ಕಾರ’ ಹಾಕುತ್ತಾರೆ ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಶಾಸಕ ಯತ್ನಾಳ್
ಬೆಂಗಳೂರು(ಜ.13): ಕಳೆದ ವಿಧಾನಸಭೆ ಚುನಾವಣೆಯ ವೇಳೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠ ಈ ಆದೇಶ ನೀಡಿತು. ಶಾಸಕ ಯತ್ನಾಳ್ ಗದಗದಲ್ಲಿ ಮಾಧ್ಯಮ ಪ್ರತಿನಿಗಳೊಂದಿಗೆ ಮಾತನಾಡುವಾಗ ಬಜರಂಗ ದಳವನ್ನು ಕಾಂಗ್ರೆಸ್ ಪಕ್ಷ ನಿಷೇಧಿಸಿದರೆ, ಆ ಪಕ್ಷದವರಿಗೆ ‘ಎಲ್ಲಾ ಹಿಂದೂಗಳು ಬಹಿಷ್ಕಾರ’ ಹಾಕುತ್ತಾರೆ ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.
ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು.
ಸಿದ್ದರಾಮಯ್ಯರನ್ನು ಕೆಳಗಿಳಿಸಲು ಹರಿಪ್ರಸಾದ್ ಸಂಚು: ಯತ್ನಾಳ
ಯತ್ನಾಳ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಚುನಾವಣಾ ಅಧಿಕಾರಿಯಾಗಿದ್ದ ಮಂಜುನಾಥ ಕಲಬುರಗಿ ದೂರು ನೀಡಿದ್ದರು. ಆ ದೂರು ಆಧರಿಸಿ ಗದಗ ಜಿಲ್ಲಾ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜ.20ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಯತ್ನಾಳ್ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಹಾಗಾಗಿ ಯತ್ನಾಳ್ ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಯತ್ನಾಳ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
