ಬೆಂಗಳೂರು(ನ.15): ಗೆಜೆಟೆಡ್‌ ಪ್ರೊಬೇಷನರಿ ಹುದ್ದೆ ಭರ್ತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವ ಕರ್ನಾಟಕ ಲೋಕಸೇವಾ ಆಯೋಗವನ್ನು(ಕೆಪಿಎಸ್‌ಸಿ) ಮುಚ್ಚುವುದೇ ಲೇಸು ಎಂದು ಹೈಕೋರ್ಟ್‌ ಚಾಟಿ ಬೀಸಿದೆ.

1998ನೇ ಸಾಲಿನ ಗೆಜಿಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕದ ಅಕ್ರಮ ಕುರಿತಂತೆ ಸಲ್ಲಿಕೆಯಾಗಿದ್ದ 10ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳನ್ನು ಇತ್ಯರ್ಥ ಮಾಡಿರುವ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ವಿಭಾಗೀಯಪೀಠ ಈ ಅಭಿಪ್ರಾಯ ಪಟ್ಟಿದೆ.

ಸರ್ಕಾರಿ ಹುದ್ದೆಗಳಿಗೆ ನಡೆಯುವ ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತವಾಗಿರಬೇಕು. ಆದರೆ, ಆಯೋಗ ನಡೆಸುತ್ತಿರುವ ಪ್ರತಿ ನೇಮಕಾತಿಯಲ್ಲಿಯೂ ಗೊಂದಲ ಸೃಷ್ಟಿಯಾಗುತ್ತಿದೆ. ಆ ಮೂಲಕ ಕೆಪಿಎಸ್ಸಿ ಆಕ್ರಮಗಳ ಕೂಪವಾಗಿ ಮಾರ್ಪಟ್ಟಿದೆ. ಇಲ್ಲಿ ನಡೆಯುವ ಅಕ್ರಮಗಳನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ರಾಜ್ಯದಲ್ಲಿ ಉನ್ನತ ಹುದ್ದೆಗಳ ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದು ಕೊಳ್ಳಬೇಕಾಗಿದ್ದು, ಕೆಪಿಎಸ್‌ಸಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಇದು ಸೂಕ್ತ ಸಮಯ ಎಂದು ಹೇಳಿದೆ. ಅಲ್ಲದೆ, ನ್ಯಾಯದ ದೃಷ್ಟಿಯಿಂದ ಕರ್ನಾಟಕ ರಾಜ್ಯದ ಘನತೆ ಮತ್ತು ಗೌರವ ಕಾಪಾಡಿಕೊಳ್ಳಲು ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಕ್ಕೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮಾದರಿಯಲ್ಲಿ ಹೊಸ ವ್ಯವಸ್ಥೆ ಜಾರಿ ಮಾಡುವುದು ಸೂಕ್ತ ಎಂದು ಪೀಠ ತಿಳಿಸಿದೆ.

ಮುಖ್ಯಮಂತ್ರಿಗಳೇ, ವಿದ್ಯಾರ್ಥಿಗಳ ನೆರವಿಗೆ ಧಾವಿಸಿ; KPSC ಟೈಂ ಟೇಬಲ್ ಬದಲಿಸಿ

ಕಳಂಕಿತರಿಂದ ನ್ಯಾಯ ನಿರೀಕ್ಷೆ ಸಾಧ್ಯವೇ?:

‘1998, 1999 ಹಾಗೂ 2004ನೇ ಸಾಲಿನ ನೇಮಕ ಕಾನೂನು ಬದ್ಧವಾಗಿಲ್ಲ ಎಂದು ಹೈಕೋರ್ಟ್‌ ಈಗಾಗಲೇ ಹೇಳಿದೆ. ಪಾರದರ್ಶಕ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯದಿರುವುದರಿಂದ ಅನರ್ಹ ವ್ಯಕ್ತಿಗಳು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್‌ ಸೇರಿದಂತೆ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ರಾಜ್ಯದ ಆಡಳಿತ ಸೇವೆಯಲ್ಲಿ ಮತ್ತು ಅರೆ ನ್ಯಾಯಾಂಗ ಅಧಿಕಾರದಲ್ಲಿ ಇರುವುದರಿಂದ ರಾಜ್ಯದ ಜನತೆಗೆ ಎಂತಹ ನ್ಯಾಯ ನಿರೀಕ್ಷಿಸಲು ಸಾಧ್ಯ?’ ಎಂದು ಪೀಠ ಪ್ರಶ್ನಿಸಿದೆ.

ಕೆಪಿಎಸ್‌ಸಿ ಇಂತಹ ಸ್ಥಿತಿ ಮುಟ್ಟಲು ರಾಜ್ಯ ಸರ್ಕಾರವೂ ಕಾರಣ. ಸಾರ್ವಜನಿಕ ಕಲ್ಯಾಣ ಮತ್ತು ಜನರ ಹಿತಾಸಕ್ತಿ ಕಾಯುವ ಆಸಕ್ತಿ ಸರ್ಕಾರಗಳಿಗೆ ಇದ್ದಿದ್ದರೆ ಪ್ರಾಮಾಣಿಕ, ದಕ್ಷ ಮತ್ತು ಅರ್ಹ ವ್ಯಕ್ತಿಗಳನ್ನು ಕೆಪಿಎಸ್ಸಿಗೆ ನೇಮಕ ಮಾಡಬೇಕಿತ್ತು. ಆದರೆ, ಅದನ್ನು ಮಾಡದೇ ಕೆಪಿಎಸ್ಸಿ ಈ ಸ್ಥಿತಿ ಮುಟ್ಟಲು ಕಾರಣವಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಒಟ್ಟಿಗೆ ಬಂದಿದೆ KPSC, UPSC ಪರೀಕ್ಷಾ ದಿನಾಂಕ: ತಯಾರಿ ನಡೆಸಲು ಅಭ್ಯರ್ಥಿಗಳಿಗೆ ಸಮಸ್ಯೆ

10 ಮಧ್ಯಂತರ ಅರ್ಜಿ ವಜಾ

ಬೆಂಗಳೂರು: ಹೊಸದಾಗಿ ನೇಮಕವಾದ 28 ಮಂದಿಗೆ ಸೇವಾ ಜ್ಯೇಷ್ಠತೆ, ಬಡ್ತಿ, ವೇತನ ನಿಗದಿ, ಷರತ್ತಿನ ಮೇಲೆ ನೀಡಲಾಗಿರುವ ಐಎಎಸ್‌ ಬಡ್ತಿಯನ್ನು ವಾಪಸ್‌ ಮಾಡಬೇಕು ಎಂಬುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ 10 ಮಧ್ಯಂತರ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಎಲ್ಲ ಅರ್ಜಿಗಳ ಸಲ್ಲಿಕೆಗೆ ವೈಯಕ್ತಿಕ ಕಾರಣಗಳಿವೆ. ಹೀಗಾಗಿ ಅವುಗಳನ್ನು ಪರಿಗಣಿಸಲಾಗದು. ಅರ್ಜಿದಾರರು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮುಂದೆ ಅರ್ಜಿ ಸಲ್ಲಿಸಿ, ಪರಿಹಾರ ಕಂಡುಕೊಳ್ಳಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.