ತನಿಖೆ ಪೂರ್ಣಗೊಂಡ ವೇಳೆ ಎಫ್‌ಐಆರ್‌ ರದ್ದು ಬೇಡವೆಂಬ ಲೋಕಾ ಮನವಿಗೆ ಮನ್ನಣೆ

ಬೆಂಗಳೂರು(ಮಾ.29): ಅಕ್ರಮ ಅಸ್ತಿ ಗಳಿಕೆ ಆರೋಪ ಸಂಬಂಧ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಮತ್ತು ದಾವಣಗೆರೆಯ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್‌ ಮತ್ತು ಲೋಕಾಯುಕ್ತ ಕೋರ್ಟ್‌ ವಿಚಾರಣೆ ರದ್ದುಪಡಿಸುವಂತೆ ಕೋರಿ ಶಾಸಕ ರೇಣುಕಾಚಾರ್ಯ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಕೆ.ನಟರಾಜನ್‌ ಅವರ ಏಕ ಸದಸ್ಯ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಮಂಗಳವಾರ ಆದೇಶಿಸಿದೆ.

Karnataka assembly election: ಎಂ.ಪಿ.ರೇಣುಕಾಚಾರ್ಯ ಗೆಲುವು ನಿಶ್ಚಿತ: ಬಿಎಸ್‌ವೈ

ವಿಚಾರಣೆ ವೇಳೆ ಲೋಕಾಯುಕ್ತ ಪರ ವಕೀಲ ಬಿ.ಎಸ್‌. ಪ್ರಸಾದ್‌ ವಾದ ಮಂಡಿಸಿ, ಪ್ರಕರಣ ಸಂಬಂಧ ರೇಣುಕಾಚಾರ್ಯ ವಿರುದ್ಧ 2015ರಲ್ಲಿ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿ,ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಿದ್ಧಪಡಿಸಿದ್ದಾರೆ. ಆದರೆ, ಅರ್ಜಿದಾರರು ಜನಪ್ರತಿನಿಧಿಯಾಗಿದ್ದಾರೆ. ಅಂತಿಮ ವರದಿ ಸಲ್ಲಿಕೆಗಾಗಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಅಗತ್ಯ. ಸಕ್ಷಮ ಪ್ರಾಧಿಕಾರವಾದ ವಿಧಾನಸಭೆ ಸಭಾಧ್ಯಕ್ಷರ ಅನುಮತಿ ಕೋರಲಾಗಿದೆ. ಅವರು ಅನುಮತಿ ನೀಡಿದ ಕೂಡಲೇ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ಈ ಹಂತದಲ್ಲಿ ಪ್ರಕರಣದ ಎಫ್‌ಐಆರ್‌ ರದ್ದುಪಡಿಸಬಾರದು ಎಂದು ಕೋರಿದ್ದರು. ಈ ಮನವಿ ಪುರಸ್ಕರಿಸಿರುವ ಹೈಕೋರ್ಟ್‌, ರೇಣುಕಾಚಾರ್ಯ ಅವರ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಇದರೊಂದಿಗೆ ಶಾಸಕ ರೇಣುಕಾಚಾರ್ಯರಿಗೆ ಸಂಕಷ್ಟ ಎದುರಾಗಿದೆ.

ಹೊನ್ನಾಳಿ: ರೇಣುಕಾಚಾರ್ಯ ಎದುರು ತೊಡೆ ತಟ್ಟೋರು ಯಾರು?

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತು ಅವರ ಸಹೋದರರು ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಗುರುಪಾದಯ್ಯ ಮಠದ್‌ ಎಂಬುವರು ದಾವಣಗೆರೆಯ ಲೋಕಾಯುಕ್ತ ನ್ಯಾಯಾಲಯಕ್ಕೆ 2015ರ ಏ.28ರಂದು ಖಾಸಗಿ ದೂರು ಸಲ್ಲಿಸಿದ್ದರು. ಪ್ರಕರಣ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ದಾವಣಗೆರೆ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕರಿಗೆ ನ್ಯಾಯಾಲಯ ಆದೇಶಿಸಿತ್ತು.

ಲೋಕಾಯುಕ್ತ ಪೊಲೀಸರು ರೇಣುಕಾಚಾರ್ಯ ವಿರುದ್ಧ 2015ರ ಮೇ 5ರಂದು ಎಫ್‌ಐಆರ್‌ ದಾಖಲಿಸಿ, ಅವರ ಮತ್ತು ಕುಟುಂಬದ ಸದಸ್ಯರ ಮನೆ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಕ್ಕೆ ಪಡೆದುಕೊಂಡಿದ್ದರು. ಇದರಿಂದ 2017ರ ಮಾ.6ರಂದು ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದ ರೇಣುಕಾಚಾರ್ಯ, ತಮ್ಮ ವಿರುದ್ಧದ ಎಫ್‌ಐಆರ್‌ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿದ್ದರು. ಜತೆಗೆ, ಅರ್ಜಿ ಇತ್ಯರ್ಥವಾಗುವವರೆಗೆ ತನಿಖೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನ ಹೈಕೋರ್ಟ್‌ ವಜಾಗೊಳಿಸಿತ್ತು.