ಜಾರಕಿಹೊಳಿ ವಿರುದ್ಧ ಮತ್ತೊಂದು ಕೇಸ್ : ಹೊಸದಾಗಿ ವಿಚಾರಣೆಗೆ ಹೈಕೋರ್ಟ್ ಸೂಚನೆ
- ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದಾಖಲಾಗಿದ್ದ ಖಾಸಗಿ ದೂರು
- ಹೊಸದಾಗಿ ವಿಚಾರಣೆ ನಡೆಸುವಂತೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ 2ನೇ ಹೆಚ್ಚುವರಿ ಜೆಎಂಎಫ್‌ಸಿ ಕೋರ್ಟ್‌ಗೆ ಹೈಕೋರ್ಟ್ ಆದೇಶ
ಬೆಂಗಳೂರು (ಆ.11): ಸಹಕಾರಿ ಬ್ಯಾಂಕಿನಿಂದ ಪಡೆದ ಸಾಲಕ್ಕೆ ಭದ್ರತೆಯಾಗಿ ನೀಡಿದ್ದ 5.02 ಕೋಟಿ ರು. ಮೊತ್ತದ ಚೆಕ್ ಬೌನ್ಸ್ ಆಗಿದ್ದ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ 2ನೇ ಹೆಚ್ಚುವರಿ ಜೆಎಂಎಫ್‌ಸಿ ಕೋರ್ಟ್‌ಗೆ ಹೈಕೋರ್ಟ್ ನಿರ್ದೇಶಿಸಿದೆ.
ಪ್ರಕರಣ ಸಂಬಂಧ ಬೀರೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ ಮೂಡಿಸಿದ ಜಾರಕಿಹೊಳಿ-ಯೋಗೇಶ್ವರ್
ಏನಿದು ಪ್ರಕರಣ?: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬೀರೇಶ್ವರ ಕ್ರಿಡಿಟ್ ಕೋ ಆಪರೇಟಿವ್ ಸೊಸೈಟಿಯಿಂದ ಸಾಲಪಡೆದಿದ್ದು, ಅದಕ್ಕೆ ಭದ್ರತೆಯಾಗಿ ನೀಡಿದ್ದ 5.02 ಕೋಟಿ ರು. ಮೊತ್ತದ ಚೆಕ್ ಬೌನ್ಸ್ ಆಗಿತ್ತು .ಇದರಿಂದ 2016ರ ಜ.28ರಂದು ರಮೇಶ್ ಜಾರಕಿಹೊಳಿ ವಿರುದ್ಧ ಸೊಸೈಟಿಯು ಖಾಸಗಿ ದೂರು ದಾಖಲಿಸಿತ್ತು. ದೂರು 2019ರ ನ.20ರಂದು ಚಿಕ್ಕೋಡಿಯ 2ನೇ ಹೆಚ್ಚುವರಿ ಜೆಎಂಎಫ್‌ಸಿ ಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು.
ಅಂದು ದೂರುದಾರರ ಪರ ವಕೀಲರು ಗೈರಾಗಿದ್ದರು. ಅದನ್ನು ಪರಿಗಣಿಸಿದ್ದ ಜೆಎಂಎಸ್‌ಫಿಸಿ ಕೋರ್ಟ್, ದೂರುದಾರರ ಪರ ವಕೀಲರು ವಿಚಾರಣೆಗೆ ಸರಿಯಾಗಿ ಹಾಜರಾಗುತ್ತಿಲ್ಲ. ನೋಟಿಸ್ ನೀಡಿದ ಹೊರತಾಗಿಯೂ ದೂರುದಾರರು ಕೋರ್ಟ್ ಶುಲ್ಕ ಪಾವತಿಸಿಲ್ಲ. ಇದರಿಂದ ದೂರನ್ನು ಮುಂದುವರಿಸಲು ದೂರುದಾರರಿಗೆ ಆಸಕ್ತಿ ಇಲ್ಲ ಎಂಬುದು ತಿಳಿಯುತ್ತದೆ ಎಂದು ಅಭಿಪ್ರಾಯಪಟ್ಟು ದೂರನ್ನು ವಜಾಗೊಳಿಸಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸೊಸೈಟಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿತ್ತು.
ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ಕಾನೂನಿಗೆ ಅನುಗುಣವಾಗಿಲ್ಲ ಎಂದು ಅಭಿಪ್ರಾಯಪಟ್ಟು ಸೊಸೈಟಿಯ ಖಾಸಗಿ ದೂರು ವಜಾಗೊಳಿಸಿದ ಜೆಎಂಎಫ್‌ಸಿ ಕೋರ್ಟ್ ಆದೇಶವನ್ನು ರದ್ದುಪಡಿಸಿತು. ಜತೆಗೆ, ದೂರನ್ನು ಹೊಸದಾಗಿ ವಿಚಾರಣೆ ನಡೆಸಿ ಕಾನೂನಿನ ಪ್ರಕಾರ ಸೂಕ್ತ ಆದೇಶ ಹೊರಡಿಸಬೇಕು ಎಂದು ಜೆಂಎಂಎಫ್‌ಸಿ ಕೋರ್ಟ್‌ಗೆ ನಿರ್ದೇಶಿಸಿತು.