Asianet Suvarna News Asianet Suvarna News

ಜಾತಿ ನಿಂದನೆ, ಹಲ್ಲೆ ಆರೋಪ: ಸಚಿವ ಸುಧಾಕರ್‌ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ

ಅರ್ಜಿ ಸಂಬಂಧ ಯಲಹಂಕ ಠಾಣಾ ಪೊಲೀಸರಿಗೆ ಮತ್ತು ದೂರುದಾರೆ ಸುಬ್ಬಮ್ಮಗೆ ತುರ್ತು ನೋಟಿಸ್‌ ಜಾರಿಗೊಳಿಸಿದ ನ್ಯಾಯಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಅ.3ಕ್ಕೆ ಮುಂದೂಡಿದೆ.

High Court of Karnataka Stayed the Case against Minister D Sudhakar grg
Author
First Published Sep 16, 2023, 11:11 AM IST

ಬೆಂಗಳೂರು(ಸೆ.16):  ಜಾತಿ ನಿಂದನೆ, ಅಕ್ರಮ ಕೂಟ, ಅತಿಕ್ರಮ ಪ್ರವೇಶ ಮತ್ತು ಹಲ್ಲೆ ಆರೋಪ ಸಂಬಂಧ ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ವಿರುದ್ಧ ಯಲಹಂಕ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆ ನೀಡಿದೆ.

ಯಲಹಂಕದ ಕೆಎಚ್‌ಬಿ ಕಾಲೋನಿ ನಿವಾಸಿ ಸುಬ್ಬಮ್ಮ ದೂರು ಆಧರಿಸಿ ಪೊಲೀಸರು ತಮ್ಮ ವಿರುದ್ಧ ಅ.10ರಂದು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸೆವನ್ ಹಿಲ್ಸ್ ಡೆವಲಪರ್ಸ್‌ ಆ್ಯಂಡ್ ಟ್ರೇಡರ್ಸ್‌ ನಿರ್ದೇಶಕರೂ ಆಗಿರುವ ಸಚಿವ ಡಿ.ಸುಧಾಕರ್‌ ಹಾಗೂ ಇತರೆ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಈ ಆದೇಶ ಮಾಡಿದ್ದಾರೆ. ಅಲ್ಲದೆ, ಅರ್ಜಿ ಸಂಬಂಧ ಯಲಹಂಕ ಠಾಣಾ ಪೊಲೀಸರಿಗೆ ಮತ್ತು ದೂರುದಾರೆ ಸುಬ್ಬಮ್ಮಗೆ ತುರ್ತು ನೋಟಿಸ್‌ ಜಾರಿಗೊಳಿಸಿದ ನ್ಯಾಯಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಅ.3ಕ್ಕೆ ಮುಂದೂಡಿದೆ.

ದಲಿತರ ಭೂಮಿ ಕಬಳಿಕೆ ವಿವಾದ: ಸಚಿವ ಸುಧಾಕರ್‌ ಬೆನ್ನಿಗೆ ನಿಂತ ಸರ್ಕಾರ!

ಸೆವೆನ್ ಹಿಲ್ಸ್ ಡೆವಲಪರ್ಸ್‌ ಡ್ ಟ್ರೇಡರ್ಸ್‌ ಡಿ. ಸುಧಾಕರ್, ಜಿ. ಶ್ರೀನಿವಾಸ್ ಮತ್ತು ಭಾಗ್ಯಮ್ಮ ಎಂಬುವರು ನಮ್ಮ ಕುಟುಂಬದವರಿಗೆ ಮೋಸ ಮಾಡಿ ಜಮೀನಿನ ಕ್ರಯಪತ್ರ ಮಾಡಿಕೊಂಡಿದ್ದಾರೆ. ಈ ಕುರಿತ ಪ್ರಕರಣ ನಗರದ ಸಿವಿಲ್ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಹೀಗಿದ್ದರೂ, ಡಿ.ಸುಧಾಕರ್‌ ಮತ್ತವರ 35 ಸಹಚರರು ಬಂದು ತಾವು ನೆಲೆಸಿರುವ ಮನೆಗಳನ್ನು ತೆರವುಗೊಳಿಸಿದ್ದಾರೆ. ಅದನ್ನು ಪ್ರಶ್ನಿಸಿದಾಗ ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಮಗಳ ಮೇಲೆ ಹಲ್ಲೆ ನಡೆಸಿ ನಮ್ಮ ಜಾತಿ ಹೆಸರು ಉಲ್ಲೇಖಿಸಿ ನಿಂದನೆ ಮಾಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುಬ್ಬಮ್ಮ 2023ರ ಸೆ.10ರಂದು ಯಲಹಂಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಆ ದೂರು ಆಧರಿಸಿದ ಪೊಲೀಸರು, ಸುಧಾಕರ್‌ ಮತ್ತು ಇತರೆ ಅರ್ಜಿದಾರರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡದ (ದೌರ್ಜನ್ಯ ತಡೆ) ಕಾಯ್ದೆ-1989 ಯಡಿ ಜಾತಿ ನಿಂದನೆ, (ಅಟ್ರಾಸಿಟಿ), ಹಲ್ಲೆ, ಅತಿಕ್ರಮ ಪ್ರವೇಶ, ದೌರ್ಜನ್ಯ, ಗಲಭೆ, ಅಕ್ರಮ ಕೂಟ ಸೇರಿದಂತೆ ವಿವಿಧ ಆರೋಪಗಳ ಸಂಬಂಧ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದರು.

ದಲಿತರ ಭೂಮಿ ಕಬಳಿಕೆ ವಿವಾದ; ಡಿ.ಸುಧಾಕರ್ ಸಮರ್ಥಿಸಿಕೊಂಡ ಡಿಕೆಶಿ!

ಈ ಎಫ್‌ಐಆರ್‌ ರದ್ದು ಕೋರಿ ಆರೋಪಿಗಳಾಗಿರುವ ಸಚಿವ ಡಿ.ಸುಧಾಕರ್‌, ಜಿ.ಶ್ರೀನಿವಾಸ್‌, ಭಾಗ್ಯಮ್ಮ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ, ಅರ್ಜಿ ಇತ್ಯರ್ಥವಾಗುವರೆಗೆ ಎಫ್‌ಐಆರ್‌ಗೆ ತಡೆಯಾಜ್ಜೆ ನೀಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ.

ದೂರುದಾರೆ ಸುಬ್ಬಮ್ಮ 2021ರಲ್ಲೇ ಸೆವೆನ್ ಹಿಲ್ಸ್ ಡೆವಲಪರ್ಸ್‌ ಡ್ ಟ್ರೇಡರ್ಸ್‌ ಹೆಸರಿಗೆ ಯಲಹಂಕ ಹೋಬಳಿಯ ಗಾಂಧಿ ನಗರದ ಸರ್ವೇ ನಂ108/1ರಲ್ಲಿನ 1 ಎಕರೆ 33 ಗುಂಟೆ ಜಾಗ ಮಾರಾಟ ಮಾಡುತ್ತಿದ್ದಾರೆ. ಆ ಕುರಿತ ದಾಖಲೆಯೂ ಇದೆ. ಇದರಿಂದ ಈ ವಿವಾದಿತ ಜಮೀನು ಮೇಲೆ ಅವರಿಗೆ ಯಾವುದೇ ಹಕ್ಕು ಇಲ್ಲ. ಆದರೂ ಸುಳ್ಳು ಆರೋಪ ಮಾಡಿ ತಮ್ಮ ವಿರುದ್ಧ ದೂರು ನೀಡಿರುವ ಕಾರಣ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Follow Us:
Download App:
  • android
  • ios