ಮಗ ವಿಧಿವಶವಾದ 8 ವರ್ಷ ಬಳಿಕ ವಿಳಂಬ ಕ್ಲೇಮು ಅರ್ಜಿ ಸಲ್ಲಿಸಿದ ತಾಯಿಗೆ ಪರಿಹಾರಕ್ಕೆ ಕೋರ್ಟ್‌ ನಕಾರ

ಬೆಂಗಳೂರು(ಮೇ.20): ಸಾವನ್ನಪ್ಪುವ ಮುನ್ನ ಎರಡು ತಿಂಗಳಿಂದ ಸತತವಾಗಿ ಅನಧಿಕೃತವಾಗಿ ಉದ್ಯೋಗಕ್ಕೆ ಗೈರಾಗಿದ್ದರೂ ಕಾರ್ಯದೊತ್ತಡ ಮತ್ತು ಆಯಾಸದಿಂದ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಬಿಎಂಟಿಸಿ) ಚಾಲಕ ಮೃತಪಟ್ಟಿದ್ದಾನೆ ಎಂದು ಹೇಳಿ ಆತನ ತಾಯಿಗೆ 10 ಲಕ್ಷ ರು. ಪರಿಹಾರ ಘೋಷಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಬಿಎಂಟಿಸಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎನ್‌.ಎಸ್‌. ಸಂಜಯ ಗೌಡ ಅವರ ಪೀಠ ಈ ಆದೇಶ ಮಾಡಿದೆ.

ಮೃತನ ತಾಯಿಯೇ ತನ್ನ ಪುತ್ರ ಉದ್ಯೋಗ ನಿರ್ವಹಣೆ ವೇಳೆ ಸಾವನ್ನಪ್ಪಿದ್ದಾಗಿ ಕ್ಲೇಮು ಅರ್ಜಿಯಲ್ಲಿ ತಿಳಿಸಿಲ್ಲ. ಚಾಲಕ ಮೃತಪಡುವ ಮುನ್ನ ಎರಡು ತಿಂಗಳಿಂದಲೂ ಉದ್ಯೋಗಕ್ಕೆ ಅನಧಿಕೃತವಾಗಿ ಗೈರಾಗಿರುವ ಸಂಬಂಧ ಸಾಕ್ಷ್ಯಾಧಾರ ಲಭ್ಯವಿದೆ. ಹಾಗಾಗಿ, ಉದ್ಯೋಗ ನಿರ್ವಹಣೆ ವೇಳೆ ಆತ ಸಾವನ್ನಪ್ಪಿದ್ದಾನೆ ಎಂಬುದಾಗಿ ಪರಿಗಣಿಸಲಾಗದು. ಆದ್ದರಿಂದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಲಾಗುತ್ತಿದೆ. ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯದಲ್ಲಿ ಇರಿಸಲಾಗಿರುವ ಠೇವಣಿಯನ್ನು ಬಿಎಂಟಿಸಿಗೆ ಮರು ಪಾವತಿಸಬೇಕು ಎಂದು ಆದೇಶದಲ್ಲಿ ಹೈಕೋರ್ಟ್‌ ತಿಳಿಸಿದೆ.

ಎಸ್ಸಿ ಒಳ ಮೀಸಲಾತಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಪ್ರಕರಣದ ವಿವರ: 

ಕೆ.ಟಿ.ಭೋಜರಾಜ ಎಂಬಾತ ಬಿಎಂಟಿಸಿಯಲ್ಲಿ ಚಾಲಕ ಮತ್ತು ನಿರ್ವಾಹಕ ನೌಕರಿಗೆ ನೇಮಕಗೊಂಡಿದ್ದ. ಪ್ರೊಬೆಷನರಿ ಅವಧಿ ಸಹ ಪೂರೈಸಿದ್ದ. ಆದರೆ, 2008ರಲ್ಲಿ ಮೃತಪಟ್ಟಿದ್ದ. ಇದರಿಂದ 2016 ರಲ್ಲಿ ಮೃತನ ತಾಯಿ ವಿಚಾರಣಾ ನ್ಯಾಯಾಲಯಕ್ಕೆ ಪರಿಹಾರ ಕೋರಿ ಕ್ಲೇಮು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯ, ಅರ್ಜಿದಾರೆಗೆ ಒಟ್ಟು 10,10,660 ರು. ಪಾವತಿಸುವಂತೆ ಬಿಎಂಟಿಸಿಗೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಬಿಎಂಟಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ಪುರಸ್ಕರಿಸಿರುವ ಹೈಕೋರ್ಟ್‌, ಭೋಜರಾಜ 2008ರಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಆತನ ತಾಯಿ ಪರಿಹಾರ ಕೋರಿ 2016ರಲ್ಲಿ ಅಂದರೆ 8 ವರ್ಷ ಕಾಲ ವಿಳಂಬವಾಗಿ ಕ್ಲೇಮು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಉದ್ಯೋಗ ನಿರ್ವಹಣೆ ವೇಳೆ ಕಾರ್ಯದೊತ್ತಡ ಮತ್ತು ಆಯಾಸ ಉಂಟಾಗಿ ಆತ ಸಾವನ್ನಪ್ಪಿರುವುದಾಗಿ ವಿಚಾರಣಾ ನ್ಯಾಯಾಲಯವು ತಪ್ಪಾಗಿ ಭಾವಿಸಿದ್ದು, ಆ ಆದೇಶ ಕಾನೂನು ಬಾಹಿರವಾಗಿದೆ ಎಂದು ಅಭಿಪ್ರಾಯಪಟ್ಟಿದೆ.