36 ವರ್ಷಗಳ ಹಿಂದೆ ಸರ್ಕಾರಿ ನೌಕರನಾಗಿದ್ದಾಗ ವಿಧವಾ ವೇತನ ದುರ್ಬಳಕೆ, ವೃದ್ಧಾಪ್ಯದ ಕಾರಣ 1 ವರ್ಷದ ಜೈಲುಶಿಕ್ಷೆ 1 ದಿನಕ್ಕೆ ಇಳಿಸಿದ ಹೈಕೋರ್ಟ್.
ಬೆಂಗಳೂರು(ಏ.25): ನಲವತ್ತು ವರ್ಷ ಹಿಂದೆ ಸರ್ಕಾರಿ ಉದ್ಯೋಗಿಯಾಗಿದ್ದ ಸಮಯದಲ್ಲಿ ವಿಧವಾ ವೇತನ ದುರ್ಬಳಕೆ ಮಾಡಿದ್ದ ಪ್ರಕರಣ ಸಂಬಂಧ 80 ವರ್ಷದ ವೃದ್ಧನಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷದ ಶಿಕ್ಷೆಯನ್ನು ಹೈಕೋರ್ಟ್ ಒಂದು ದಿನಕ್ಕೆ ಇಳಿಸಿದೆ. ಪ್ರಕರಣದಲ್ಲಿ ತಮಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಅಧೀನ ನ್ಯಾಯಾಲಯದ ಆದೇಶ ರದ್ದು ಕೋರಿ ಮೈಸೂರು ಜಿಲ್ಲೆಯ ಕೆ.ಆರ್.ನಗರದ ನಿವಾಸಿ ಹನುಮಂತರಾವ್ ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜೀತ್ ಶೆಟ್ಟಿ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಅಧೀನ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದ ಹೈಕೋರ್ಚ್, ಅರ್ಜಿದಾರರಿಗೆ 80 ವರ್ಷವಾಗಿದೆ. ಅವರು ಎಸಗಿದ್ದಾರೆ ಎನ್ನಲಾದ ಅಪರಾಧ ಕೃತ್ಯ 36 ವರ್ಷಗಳ ಹಿಂದೆ ನಡೆದಿದೆ. ಇದೇ ಅವರು ಎಸಗಿದ ಮೊದಲ ಅಪರಾಧ. ಇತರೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ. ಈ ಎಲ್ಲಾ ಅಂಶ ಪರಿಗಣನೆಗೆ ತೆಗೆದುಕೊಂಡು ಶಿಕ್ಷೆ ಪ್ರಮಾಣವನ್ನು ಒಂದು ದಿನಕ್ಕೆ ಇಳಿಸಲಾಗುತ್ತಿದೆ. ಆದರೆ, ಅವರು ಎಸಗಿದ ಎರಡು ಅಪರಾಧಗಳಿಗೆ ತಲಾ 10 ಸಾವಿರ ದಂಡ ಪಾವತಿಸಬೇಕು. ತಪ್ಪಿದರೆ ಮೂರು ತಿಂಗಳ ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ.
ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ‘ಮೋದಿ’ ಮಾನನಷ್ಟ ಕೇಸಿಗೆ ಹೈಕೋರ್ಟ್ ತಡೆ
ಪ್ರಕರಣವೇನು:
1981ರ ನ.21ರಿಂದ 1987ರ ಜ.5ರ ಅವಧಿಯಲ್ಲಿ ಹನುಮಂತ ರಾವ್, ಮಂಡ್ಯದ ಕೆ.ಆರ್.ಪೇಟೆಯಲ್ಲಿ ರಾಜ್ಯ ಖಜಾನೆ ಇಲಾಖೆ ಅಧಿಕಾರಿಯಾಗಿದ್ದರು. ಈ ಅವಧಿಯಲ್ಲಿ ವಿಧವಾ ವೇತನ ಮಂಜೂರಾತಿಯಲ್ಲಿ .54,299 ದುರ್ಬಳಕೆ ಮಾಡಿದ್ದರು. ಲೆಕ್ಕ ಪರಿಶೋಧನೆ ವೇಳೆ ಈ ಅಕ್ರಮ ಬಯಲಾಗಿತ್ತು. ಆ ಸಂಬಂಧ ಹುನುಮಂತ ರಾವ್‌ಗೆ ನೋಟಿಸ್ ಜಾರಿಗೊಳಿಸಿದ್ದ ಸರ್ಕಾರ, ದುರ್ಬಳಕೆ ಮಾಡಿಕೊಂಡ ಹಣವನ್ನು 1987ರ ಜ.31ರ ಅಂತ್ಯದ ವೇಳೆಗೆ ಹಿಂದಿರುಗಿಸುವಂತೆ ಸೂಚಿಸಿತ್ತು. ನಂತರ ಆ ಮೊತ್ತವನ್ನು ರಾವ್ ವೇತನದಿಂದ ಕಡಿತ ಮಾಡಿತ್ತು.
ಈ ನಡುವೆ ಅಂದಿನ ಮಂಡ್ಯ ಜಿಲ್ಲಾ ಖಜಾನೆ ಅಧಿಕಾರಿ ಸಿ.ಎಸ್.ಮುತ್ತಣ್ಣ, ಸರ್ಕಾರಿ ಆಸ್ತಿಗೆ ಸಂಬಂಧಿಸಿದಂತೆ ನಂಬಿಕೆ ದ್ರೋಹ (ಐಪಿಸಿ ಸೆಕ್ಷನ್ 409) ಮತ್ತು ಸುಳ್ಳು ಲೆಕ್ಕ ಬರೆದ (ಐಪಿಸಿ ಸೆಕ್ಷನ್ 477ಎ) ಆರೋಪ ಸಂಬಂಧ ಕೆ.ಆರ್.ಪೇಟೆ ಪೊಲೀಸ್ ಠಾಣೆಗೆ ಕ್ರಿಮಿನಲ್ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೆ.ಆರ್.ಪೇಟೆ ಜೆಎಂಎಫ್‌ಸಿ ನ್ಯಾಯಾಲಯ, ಈ ಎರಡು ಅಪರಾಧಗಳಿಗೆ ತಲಾ ಒಂದು ವರ್ಷ ಶಿಕ್ಷೆ ಮತ್ತು .3 ಸಾವಿರ ಡಂಡ ವಿಧಿಸಿ 2009ರ ಏ.8ರಂದು ಆದೇಶಿಸಿತ್ತು. ಈ ಆದೇಶವನ್ನು ಮಂಡ್ಯದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಪುರಸ್ಕರಿಸಿತ್ತು. ಹಾಗಾಗಿ, ಹನುಮಂತ ರಾವ್ ಹೈಕೋರ್ಚ್‌ಗೆ ಮೊರೆ ಹೋಗಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಹನುಮಂತ ರಾವ್‌ಗೆ ಸದ್ಯ 80 ವರ್ಷ. ಅವರು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ದುರ್ಬಳಕೆ ಮಾಡಿಕೊಂಡಿದ್ದ ಹಣವನ್ನು 1987ರಲ್ಲಿಯೇ ಸರ್ಕಾರವು ವಸೂಲಿ ಮಾಡಿದೆ. ಸರ್ಕಾರಿ ನಿವೃತ್ತ ನೌಕರರಾದ ಅರ್ಜಿದಾರರು ಎಸಗಿದ ಮೊದಲ ಅಪರಾಧ ಕೃತ್ಯ ಇದಾಗಿದೆ. ಅವರು ಅಪರಾಧಿಕ ಹಿನ್ನೆಲೆ ಹೊಂದಿಲ್ಲ. ಆದ್ದರಿಂದ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು ಎಂದು ಕೋರಿದರು.
