ಬೆಂಗಳೂರು (ಅ.02): ಸ್ನಾತಕೋತ್ತರ ಪದವಿ ಪೂರೈಸಿದ ವೈದ್ಯ ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷ ಕಡ್ಡಾಯ ಸೇವೆ ಸಲ್ಲಿಸಬೇಕೆಂದು ನಿರ್ದೇಶಿಸಿ ಹೊರಡಿಸಲಾಗಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿಗೊಳಿಸಿದೆ.

ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಡಾ.ಎಂ.ಎನ್‌. ಸಾಧ್ವಿನಿ ಸೇರಿ 281 ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ವೈದ್ಯರು ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಈ ಅದೇಶ ಮಾಡಿತು. ಜತೆಗೆ, ಅರ್ಜಿ ಸಂಬಂಧ ಉತ್ತರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯಕ್ಕೆ (ಆರ್‌ಜಿಯುಎಚ್‌ಎಸ್‌) ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಅ.22ಕ್ಕೆ ಮುಂದೂಡಿತು.

ಕೊರೋನಾ : ಗುತ್ತಿಗೆ ವೈದ್ಯರು, ಸಿಬ್ಬಂದಿಗೆ ಇಲ್ಲಿದೆ ಗುಡ್ ನ್ಯೂಸ್

ಪ್ರಕರಣವೇನು:  ಸ್ನಾತಕೋತ್ತರ ಪದವಿ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷ ಸೇವೆ ಕಡ್ಡಾಯಗೊಳಿಸುವ ಕುರಿತು ‘ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರ ಕಡ್ಡಾಯ ಸೇವೆಗಳ ತರಬೇತಿ ಕಾಯ್ದೆ- 2012’ಕ್ಕೆ ರಾಜ್ಯ ಸರ್ಕಾರ 2017ರಲ್ಲಿ ತಿದ್ದುಪಡಿ ತಂದಿತ್ತು. ಆ ತಿದ್ದುಪಡಿ ನಿಯಮದ ಸಿಂಧುತ್ವವನ್ನು 2019ರ ಆ.30ರಂದು ಹೈಕೋರ್ಟ್‌ ಏಕಸದಸ್ಯ ಪೀಠ ಎತ್ತಿಹಿಡಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ.

ಏಕಸದಸ್ಯ ಪೀಠದ ಆದೇಶ ಜು.23ರಂದು ಮತ್ತು ಸರ್ಕಾರ ಆ.24ರಂದು ಹೊರಡಿಸಿದ ಆದೇಶಗಳನ್ನು ಮುಂದಿಟ್ಟುಕೊಂಡು ಸ್ನಾತಕೋತ್ತರ ಪದವಿ ಪೂರೈಸಿದವರಿಗೆ ಆರ್‌ಜಿಯುಎಚ್‌ಎಸ್‌ ಪ್ರಮಾಣಪತ್ರ ವಿತರಿಸುತ್ತಿಲ್ಲ. ಕರ್ನಾಟಕ ವೈದ್ಯಕೀಯ ಪರಿಷತ್‌ಗೆ ನೋಂದಣಿ ಮಾಡಿಸಿಕೊಳ್ಳುತ್ತಿಲ್ಲ. ವಾರ್ಷಿಕ 6ರಿಂದ 75 ಲಕ್ಷದವರೆಗೆ ಹಣ ಪಾವತಿಸಿ ಖಾಸಗಿ, ಮ್ಯಾನೇಜ್‌ಮೆಂಟ್‌, ಎನ್‌ಆರ್‌ಐ ಕೋಟಾ ಅಡಿ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆದಿರುವ ನಮಗೆ ಈ ಕಾಯ್ದೆ ಅನ್ವಯಿಸುವುದಿಲ್ಲ. ಆದ್ದರಿಂದ, ಸರ್ಕಾರದ ಆದೇಶ ರದ್ದುಗೊಳಿಸಬೇಕು ಎಂದು ಮೇಲ್ಮನವಿದಾರರು ಕೋರಿದ್ದಾರೆ.