ಬೆಂಗಳೂರು (ಸೆ.22): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ವೈದ್ಯಾಧಿಕಾರಿಗಳು, ಶುಶ್ರೂಷಕರು, ಲ್ಯಾಬ್‌ ತಂತ್ರಜ್ಞರು ಸೇರಿದಂತೆ ಒಟ್ಟು 14,252 ಮಂದಿ ಆರೋಗ್ಯ ಸೇವಾ ಸಿಬ್ಬಂದಿಗೆ ಕೋವಿಡ್‌ ವಿಶೇಷ ಹೆಚ್ಚುವರಿ ಭತ್ಯೆ (ಕೋವಿಡ್‌ ರಿಸ್ಕ್‌ ಅಲೋಯನ್ಸ್‌) ನೀಡಲು ಸರ್ಕಾರ ಆದೇಶ ಹೊರಡಿಸಿದೆ. 

1,539 ಜನ ಎಂಬಿಬಿಎಸ್‌, ಆಯುಷ್‌ ವೈದ್ಯರು, 1094 ಜನ ವೈದ್ಯಾಧಿಕಾರಿಗಳು, 461 ತಜ್ಞ ವೈದ್ಯರಿಗೆ (ಅರೆವಳಿಕೆ, ಫಿಜಿಷಿಯನ್‌, ಮಕ್ಕಳ ತಜ್ಞರು) ಮಾಸಿಕ ತಲಾ 10 ಸಾವಿರ ರು., 6980 ಶುಶ್ರೂಷಕಿಯರು, 1966 ಸಹಾಯಕ ಶುಶ್ರೂಷಕರು, 1457 ಲ್ಯಾಬ್‌ ಟೆಕ್ನೀಷಿಯನ್‌ಗಳು ಹಾಗೂ 755 ಫಾರ್ಮಾಸಿಸ್ಟ್‌ಗಳಿಗೆ ತಲಾ 5 ಸಾವಿರ ರು.ನಂತೆ ಮುಂದಿನ ಆರು ತಿಂಗಳ ಅವಧಿಗೆ ವಿಶೇಷ ಹೆಚ್ಚುವರಿ ಭತ್ಯೆ ನೀಡಲು ಆದೇಶ ಮಾಡಲಾಗಿದೆ.

ಕರ್ನಾಟಕದಲ್ಲಿ ಕೊಂಚ ತಗ್ಗಿದ ಕೊರೋನಾ: ಸೋಮವಾರ ಗುಣಮುಖರಾದವರ ಸಂಖ್ಯೆಯೇ ಹೆಚ್ಚು..! . 

ಬೆಂಗಳೂರು ವ್ಯಾಪ್ತಿಯ ಆಸ್ಪತ್ರೆಗಳ ಗುತ್ತಿಗೆ ವೈದ್ಯರು, ಇತರೆ ಆರೋಗ್ಯ ಸೇವಾ ಸಿಬ್ಬಂದಿಗೆ ಸರ್ಕಾರ ಇತ್ತೀಚೆಗೆ ಆರು ತಿಂಗಳ ಅವಧಿಗೆ ವೇತನ ಹೆಚ್ಚಿಸಿತ್ತು. ಅದೇ ರೀತಿ ರಾಜ್ಯದ ಇತರೆಡೆ ಗುತ್ತಿಗೆ ಆಧಾರದ ವೈದ್ಯರು ಹಾಗೂ ಆರೋಗ್ಯ ಸೇವಾ ಸಿಬ್ಬಂದಿಗೂ ವೇತನ ಹೆಚ್ಚಿಸಲು ಆರೋಗ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆ ಪರಿಶೀಲಿಸಿದ ಸರ್ಕಾರ ವೇತನ ಹೆಚ್ಚಳದ ಬದಲಿಗೆ ವಿಶೇಷ ಹೆಚ್ಚುವರಿ ಭತ್ಯೆಗೆ ಅನುಮತಿ ನೀಡಿದೆ ಎಂದು ಸರ್ಕಾರದ ಉಪ ಕಾರ್ಯದರ್ಶಿ ಆದೇಶದಲ್ಲಿ ತಿಳಿಸಿದ್ದಾರೆ.