ಸಂವಿಧಾನದ ಆರನೇ ಶೆಡ್ಯೂಲ್‌ನಲ್ಲಿ ಸ್ಥಳೀಯ ಮತ್ತು ಬುಡಕಟ್ಟು ಸಮೂಹದ ಹಕ್ಕುಗಳನ್ನು ಸಂರಕ್ಷಿಸಲು ಅಟಾನಮಸ್‌ ಡಿಸ್ಟ್ರಿಕ್ಟ್ ಕೌನ್ಸಿಲ್‌ (ಎಡಿಸಿ) ಸಹ ಸ್ಥಾಪಿಸಲಾಗಿದೆ. ಭಾರತದ ಈಶಾನ್ಯ ಭಾಗದ ಪ್ರದೇಶಗಳಾದ ಅಸ್ಸಾಂ, ಮಿಜೋರಾಂ, ಮೇಘಾಲಯ ಮತ್ತು ತ್ರಿಪುರ ರಾಜ್ಯಗಳಿಗೆ ಭೌಗೋಳಿಕ ರಾಜಕೀಯ ಸ್ವಾಯತ್ತತೆ ನೀಡಲಾಗಿದೆ. 

ಬೆಂಗಳೂರು(ಏ.08): ಕೊಡವರಿಗೆ ಭೌಗೋಳಿಕ ರಾಜಕೀಯ ಸ್ವಾಯತ್ತ ಸ್ಥಾನಮಾನ ಕಲ್ಪಿಸುವಂತೆ ಕೊಡವ ನ್ಯಾಷನಲ್‌ ಕೌನ್ಸಿಲ್‌ (ಸಿಎನ್‌ಸಿ) ಸಲ್ಲಿಸಿರುವ ಬೇಡಿಕೆಯ ಬಗ್ಗೆ ಪರಿಶೀಲಿಸಲು ಆಯೋಗವೊಂದನ್ನು ರಚಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)ಯ ವಿಚಾರಣೆಯನ್ನು ಹೈಕೋರ್ಟ್‌ ಏ.17ಕ್ಕೆ ನಿಗದಿಪಡಿಸಿದೆ.

ಈ ಕುರಿತಂತೆ ರಾಜ್ಯಸಭಾ ಸದಸ್ಯರಾದ ಡಾ.ಸುಬ್ರಮಣಿಯನ್‌ ಸ್ವಾಮಿ ಅರ್ಜಿ ಸಲ್ಲಿಸಿದ್ದಾರೆ. ಗುರುವಾರ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಹಾಜರಾದ ಅವರು, ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸುವಂತೆ ಕೋರಿ ಮೆಮೊ ಸಲ್ಲಿಸಿದರು. ಆ ಮೆಮೊ ಸ್ವೀಕರಿಸಿದ ನ್ಯಾಯಪೀಠ, ಇದೇ 17ಕ್ಕೆ ಪಿಐಎಲ್‌ ವಿಚಾರಣೆ ನಿಗದಿಪಡಿಸಿತು.

ಕೊಡಗು: ಮಡಿಕೇರಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ..!

ಕೊಡವ ಸಮುದಾಯದವರು ವಿಭಿನ್ನ ಭೌಗೋಳಿಕ ಹಾಗೂ ಸಂಸ್ಕೃತಿ ಹಿನ್ನೆಲೆ ಹೊಂದಿದ್ದಾರೆ. ಇದರಿಂದ ಸಂವಿಧಾನದ ಪರಿಚ್ಛೇದ 242 ಅಡಿಯಲ್ಲಿ ‘ಸ್ಟೇಟ್‌ ಆಫ್‌ ಕೂಗ್‌ರ್‍’ ಎಂದು ಗುರುತಿಸಲಾಗಿದೆ. ಅದರಂತೆ ಸ್ಟೇಟ್‌ ಆಫ್‌ ಕೂಗ್‌ರ್‍ಗೆ ಲೋಕಸಭೆ ಮತ್ತು ರಾಜ್ಯಸಭೆಗೆ ತಲಾ ಓರ್ವ ಸದಸ್ಯರನ್ನು ಕಳುಹಿಸಲು ಅವಕಾಶವಿದೆ. ‘ಸಿ’ ಸ್ಟೇಟ್ಸ್‌ ಕಾಯ್ದೆ-1952ರ ಪ್ರಕಾರ ಕೂಗ್‌ರ್‍ ಎಂಬುದು ಭಾರತೀಯ ಒಕ್ಕೂಟದ ಸಿ ಸ್ಟೇಟ್‌ ಭಾಗವಾಗಿದೆ. ಕೂಗ್‌ರ್‍ ಸ್ವಯಂ ಅವಲಂಬಿತ ಸ್ಟೇಟ್‌ ಆಗಿದ್ದು, 1956ರಲ್ಲಿ ಮೈಸೂರು ರಾಜ್ಯದೊಂದಿಗೆ ವಿಲೀನ ಮಾಡಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅಲ್ಲದೆ, ಸಂವಿಧಾನದ ಆರನೇ ಶೆಡ್ಯೂಲ್‌ನಲ್ಲಿ ಸ್ಥಳೀಯ ಮತ್ತು ಬುಡಕಟ್ಟು ಸಮೂಹದ ಹಕ್ಕುಗಳನ್ನು ಸಂರಕ್ಷಿಸಲು ಅಟಾನಮಸ್‌ ಡಿಸ್ಟ್ರಿಕ್ಟ್ ಕೌನ್ಸಿಲ್‌ (ಎಡಿಸಿ) ಸಹ ಸ್ಥಾಪಿಸಲಾಗಿದೆ. ಭಾರತದ ಈಶಾನ್ಯ ಭಾಗದ ಪ್ರದೇಶಗಳಾದ ಅಸ್ಸಾಂ, ಮಿಜೋರಾಂ, ಮೇಘಾಲಯ ಮತ್ತು ತ್ರಿಪುರ ರಾಜ್ಯಗಳಿಗೆ ಭೌಗೋಳಿಕ ರಾಜಕೀಯ ಸ್ವಾಯತ್ತತೆ ನೀಡಲಾಗಿದೆ. ಅದೇ ರೀತಿ ಕೊಡವ ಸಮುದಾಯದವರು ವಿಭಿನ್ನ ಭೌಗೋಳಿಕ, ಇತಿಹಾಸ ಮತ್ತು ಸಂಸ್ಕೃತಿ ಹಿನ್ನೆಲೆ ಹೊಂದಿದ್ದಾರೆ. ಅವರ ಹಕ್ಕುಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ‘ಕೊಡವ ಸಮುದಾಯಕ್ಕೆ ಭೌಗೋಳಿಕ ರಾಜಕೀಯ ಸ್ವಾಯತ್ತತೆ’ ನೀಡಲು ಕೋರಿ ಸಿಎನ್‌ಸಿ ಮನವಿ ಸಲ್ಲಿಸಿದೆ. ಆ ಬಗ್ಗೆ ಪರಿಶೀಲಿಸಿ ಸೂಕ್ತ ಶಿಫಾರಸು ಮಾಡಲು ಆಯೋಗವೊಂದನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಕಾನೂನು ಇಲಾಖೆ ಕಾರ್ಯದರ್ಶಿ, ಕೇಂದ್ರ ಕಾನೂನು ಸಚಿವಾಲಯದ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಹಾಗೂ ಕೊಡವ ನ್ಯಾಷನಲ್‌ ಕೌನ್ಸಿಲ್‌ ಅಧ್ಯಕ್ಷ ಎನ್‌.ಯು.ನಾಚಪ್ಪ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ.