ಬೆಂಗಳೂರು(ಜು.24): ಕೊರೋನಾ ಸೋಂಕಿನಿಂದ ಪೌರ ಕಾರ್ಮಿಕರು ಮೃತಪಟ್ಟರೆ, ಅವರಿಗೆ ಗರೀಬ್‌ ಕಲ್ಯಾಣ್‌ ಯೋಜನೆ ಅಡಿಯ ವಿಮಾ ಸೌಲಭ್ಯ ಮತ್ತು ಕೊರೋನಾ ವಾರಿಯರ್ಸ್‌ಗೆ ನೀಡುತ್ತಿರುವಂತೆ 50 ಲಕ್ಷ ರು. ಪರಿಹಾರ ಕಲ್ಪಿಸಲು ಅವಕಾಶವಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಬಿಬಿಎಂಪಿಗೆ ಹೈಕೋರ್ಟ್‌ ಸೂಚಿಸಿದೆ. 

ಕೊರೋನಾ ಸೋಂಕು ನಿಯಂತ್ರಣ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ಕೊರೋನಾ ಎಫೆಕ್ಟ್: ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಿಗೆ ಭಾರೀ ಬೇಡಿಕೆ!

ಮೆಟ್ರೋ ಕಾರ್ಮಿಕರಿಗೆ ವಿಮೆ ಒದಗಿಸಲಾಗಿದೆಯೇ?

ನಗರದ ಕಣ್ಣೂರು ಶಿಬಿರದಲ್ಲಿದ್ದ ಮೆಟ್ರೋ ಕಾರ್ಮಿಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕ್ವಾರಂಟೈನ್‌ಗೆ ಒಳಪಟ್ಟಿರುವ ಕಾರ್ಮಿಕರ ಸದ್ಯದ ಆರೋಗ್ಯ ಸ್ಥಿತಿ ಹೇಗಿದೆ ಮತ್ತು ಕಾರ್ಮಿಕರಿಗೆ ವಿಮಾ ಸೌಲಭ್ಯ ಒದಗಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್‌ ಸೂಚನೆ ನೀಡಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಮೆಟ್ರೋ ರೈಲು ಮಾರ್ಗ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರ ಸ್ಥಿತಿಗತಿಯು ಕರುಣಾಜನಕವಾಗಿದೆ ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.