ಬೆಂಗಳೂರು(ಆ.13):  ರಾಜ್ಯದಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮ ಹಾಗೂ ಪಟ್ಟಣಗಳಲ್ಲಿ ಅಗತ್ಯ ಜಮೀನು ಮಂಜೂರು ಮಾಡುವಂತೆ ಸೂಚಿಸಿ ಹೊರಡಿಸಿದ ಆದೇಶ ಪಾಲಿಸದ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿಗೊಳಿಸಿದೆ.

ಈ ಕುರಿತು ಬೆಂಗಳೂರು ನಿವಾಸಿ ಮಹಮ್ಮದ್‌ ಇಕ್ಬಾಲ್‌ ಎಂಬುವರು ಸಲ್ಲಿಸಿದ್ದ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿತು.

ಬೆಂಗಳೂರು: ಹಸಿ ಕಸ ಸಂಗ್ರಹಕ್ಕೆ ಟೆಂಡರ್‌ ಅನಿವಾರ್ಯ

ರಾಜ್ಯದಲ್ಲಿ ಶವ ಸಂಸ್ಕಾರಕ್ಕೆ ಜಾಗ ಇಲ್ಲದ ಸುಮಾರು ಆರು ಸಾವಿರಕ್ಕೂ ಹೆಚ್ಚು ಕಂದಾಯ ಗ್ರಾಮಗಳು, ಜನವಸತಿ ಪ್ರದೇಶಗಳು ಹಾಗೂ 218 ಪಟ್ಟಣ ಪ್ರದೇಶಗಳಲ್ಲಿ ಸ್ಮಶಾನಕ್ಕೆ ಅಗತ್ಯ ಜಮೀನು ಮಂಜೂರು ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿ ಮಹಮ್ಮದ್‌ ಇಕ್ಬಾಲ್‌ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

2019ರ ಆಗಸ್ಟ್‌ 20ರಂದು ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣಗಳಿಗೆ ಅಗತ್ಯ ಜಮೀನು ಒದಗಿಸಲು ಆರು ತಿಂಗಳಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆದೇಶ ಮಾಡಿತ್ತು.

ಹೈಕೋರ್ಟ್‌ ಆದೇಶದಂತೆ ಆರು ತಿಂಗಳು ಮುಗಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಕೋರ್ಟ್‌ ಆದೇಶದ ಉಲ್ಲಂಘನೆಯಾಗಿದ್ದು, ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸಬೇಕು ಹಾಗೂ ಈ ಹಿಂದೆ ಹೈಕೋರ್ಟ್‌ ನೀಡಿರುವ ಆದೇಶ ಪಾಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮಹಮ್ಮದ್‌ ಇಕ್ಬಾಲ್‌ ಅರ್ಜಿಯಲ್ಲಿ ಕೋರಿದ್ದಾರೆ.