ಸರ್ಕಾರದ ಉಚಿತ ಯೋಜನೆಗಳ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟವನ್ನು ಎತ್ತಿ ತೋರಿಸಿದೆ. ಹಾಲು, ತುಪ್ಪ, ಅಕ್ಕಿ ಮತ್ತು ಬಸ್ ದರ ಹೆಚ್ಚಳದ ಬಗ್ಗೆ ನ್ಯಾಯಮೂರ್ತಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ವೆಂಕಟೇಶ್‌ ಕಲಿಪಿ

ಬೆಂಗಳೂರು: ಸರ್ಕಾರದ ಯೋಜನೆಗಳು ಉಚಿತವಾದರೆ, ಅಗತ್ಯ ವಸ್ತುಗಳ ದರ ಹೆಚ್ಚುವುದು ಸಹ ಖಚಿತ, ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುತ್ತಾ ಹೋದರೆ ಮನುಷ್ಯ ಎಲ್ಲಿಗೆ ಹೋಗಬೇಕು. ಸಾಮಾನ್ಯ ಜನ ಜೀವನ ಸಾಗಿಸುವುದಾದರೂ ಹೇಗೆ..?

- ಪ್ರಕರಣವೊಂದರ ವಿಚಾರಣೆ ವೇಳೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನ ಎದುರಿಸುತ್ತಿರುವ ಸಂಕಷ್ಟವನ್ನು ಉದಾಹರಣೆ ಸಹಿತವಾಗಿ ಸರ್ಕಾರದ ವಿರುದ್ಧ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದ್ದು ಹೀಗೆ.

650 ರುಪಾಯಿ ಇದ್ದ ಒಂದು ಕೆ.ಜಿ ತುಪ್ಪ ಈಗ 850 ರು. ಆಗಿದೆ. ಪ್ರತಿ ಕೆ.ಜಿ ಅಕ್ಕಿಗೆ 103 ರುಪಾಯಿ ಆಗಿದೆ. ಹಾಲು, ಬಸ್‌ ಟಿಕೆಟ್‌ ದರ ಜಾಸ್ತಿಯಾಗಿದೆ. ಸರ್ಕಾರ ಇದೀಗ ಟನ್‌ ಕಬ್ಬಿಗೆ 3 ಸಾವಿರ ರು. ಬೆಂಬಲ ಬೆಲೆ ಘೋಷಿಸಿದೆ. ನೋಡುತ್ತಾ ಇರಿ, ದೀಪಾವಳಿ ಮುಗಿದ ಮೇಲೆ ಕೆ.ಜಿ. ಸಕ್ಕರೆ ದರ 90 ರು. ಆಗುತ್ತೆ ಎಂದು ನ್ಯಾಯಮೂರ್ತಿಗಳು ಎಚ್ಚರಿಸಿದರು.

ಅನ್ನಭಾಗ್ಯ ಯೋಜನೆಯಡಿ ಉಗ್ರಾಣದಲ್ಲಿ ದಾಸ್ತಾನು ಮಾಡಲಾಗಿದ್ದ ಅಕ್ಕಿ, ಗೋಧಿ ಪ್ರಮಾಣದಲ್ಲಿ 320 ಕ್ವಿಂಟಲ್‌ ಅಕ್ಕಿ ಮತ್ತು 85 ಕ್ವಿಂಟಲ್‌ ಗೋಧಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ಅಗತ್ಯವಸ್ತುಗಳ (ಸಾರ್ವಜನಿಕ ವಿತರಣಾ ವ್ಯವಸ್ಥೆ) ನಿಯಂತ್ರಣ ಆದೇಶ-1992 ನಿಯಮಗಳಡಿ ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣ ರದ್ದು ಕೋರಿ ಮೈಸೂರು ಉಗ್ರಾಣವೊಂದರ ಹಿರಿಯ ವ್ಯವಸ್ಥಾಪಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ ಮೌಖಿಕವಾಗಿ ಈ ರೀತಿ ಅಸಮಾಧಾನ ವ್ಯಕ್ತಪಡಿಸಿತು.

ದೀಪ ಹಚ್ಚುವುದು ಹೇಗೆ?

ಅರ್ಜಿ ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ಪೀಠ, ‘ಅಲ್ಲದೆ, ಅಕ್ಕಿ ದರ ನೋಡಿದರೆ ಕೆ.ಜಿ. 103 ರುಪಾಯಿ ಆಗಿದೆ. ಸದ್ಯ ಪ್ರತಿ ಟನ್‌ ಕಬ್ಬಿಗೆ 3 ಸಾವಿರಕ್ಕೂ ಅಧಿಕ ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ. ಹೆಚ್ಚಳ ಮಾಡಿದ ಹಣವನ್ನು ಸರ್ಕಾರ ತನ್ನ ಜೇಬಿನಿಂದೇನೂ ನೀಡಲ್ಲ. ಬದಲಾಗಿ ಜನ ಕಟ್ಟುವ ತೆರಿಗೆ ಹಣದಿಂದ ನೀಡುತ್ತದೆ. ನೋಡುತ್ತಾ ಇರಿ. ದೀಪಾವಳಿ ಹಬ್ಬ ಮುಗಿದ ನಂತರ ಪ್ರತಿ ಕೆ.ಜಿ. ಸಕ್ಕರೆ ದರ 90 ರುಪಾಯಿ ಮಾಡುತ್ತೆ ಸರ್ಕಾರ. ದಿನಸಿ ತರೋಣ ಎಂದು ಬಸ್‌ನಲ್ಲಿ ಹೋದರೆ, ಬಸ್‌ ಟಿಕೆಟ್‌ ದರ ಜಾಸ್ತಿ ಮಾಡಲಾಗಿದೆ. ಹೀಗೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುತ್ತಾ ಹೋದರೆ ಮನುಷ್ಯ ಎಲ್ಲಿಗೆ ಹೋಗಬೇಕು. ಸಾಮಾನ್ಯ ಜನ ಜೀವನ ಸಾಗಿಸುವುದಾದರೂ ಹೇಗೆ?’ ಎಂದು ಪೀಠ ಪ್ರಶ್ನಿಸಿತು.

ಹಳೇ ಮಾಲು, ಹೊಸ ಬಿಲ್ಲು

ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದ ಕೂಡಲೇ ಉಗ್ರಾಣದಿಂದ ದಾಸ್ತಾನು ಮಾಡಲಾದ ಪದಾರ್ಥಗಳ ಮೇಲೆ ಹೊಸ ದರ ಮುದ್ರಿಸಿ ಸರಬರಾಜು ಮಾಡಲಾಗುತ್ತದೆ. ಇದು ಹಳೇ ಕಲ್ಲು, ಹೊಸ ಬಿಲ್ಲು ತರ. ಹಳೇ ಮಾಲು; ಹೊಸ ಸೀಲು. ದಿನಸಿ ಪದಾರ್ಥಗಳ ಬೆಲೆ ಗಗನಕ್ಕೆ ಏರುತ್ತಿರಬೇಕಾದರೆ ಉಗ್ರಾಣದಲ್ಲಿ ದಾಸ್ತಾನು ಅಕ್ಕಿ, ಗೋದಿ, ಸಕ್ಕರೆ ಮೂಟೆಗಳನ್ನು ಈ ರೀತಿ ಲೂಟಿ ಮಾಡುವುದು ಬೇರೆ. ಸರ್ಕಾರ ಜನರಿಗೆ ಉಚಿತವಾಗಿ ನೀಡುವ ಪದಾರ್ಥಗಳನ್ನು ಕ್ವಿಂಟಲ್‌ ಕ್ವಿಂಟಲ್ ಆಗಿ ಕಳವು ಮಾಡಿ ಕಾಳ ಸಂತೆಯಲ್ಲಿ ಮಾರಾಟ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ನುಡಿದ ಪೀಠ, ಅರ್ಜಿಯ ಹೆಚ್ಚಿನ ವಿಚಾರಣೆಯನ್ನು ನ.11ಕ್ಕೆ ನಿಗದಿಪಡಿಸಿತು.

ನ್ಯಾಯಪೀಠ ಕಿಡಿ

‘ಹೇಳಲು ಬೇಜಾರಾಗುತ್ತದೆ, ಸರ್ಕಾರದ ಎಲ್ಲ ಯೋಜನೆ ಹೀಗೆಯೇ. ಎಲ್ಲ ಉಚಿತ... ಉಚಿತ... ಅಂತಾರೆ. ಒಂದೆಡೆ ಉಚಿತವಾಗಿ ನೀಡುವುದು, ಮತ್ತೊಂದಡೆ ಅಗತ್ಯ ವಸ್ತು ಬೆಲೆಯನ್ನು ಖಚಿತವಾಗಿ ಹೆಚ್ಚಿಸುವುದು. ಕಳೆದ ತಿಂಗಳು ತುಪ್ಪ ತರಲು ಹೋದಾಗ, ಕೆ.ಜಿ. ತುಪ್ಪದ ಪ್ಯಾಕೆಟ್‌ 650 ರು. ಇತ್ತು. ಆದರೆ, ಈಗ 850 ರು. ಆಗಿದೆ. ದೀಪಾವಳಿಗೆ ತುಪ್ಪದ ಯಾವುದರಿಂದ ದೀಪ ಹಚ್ಚಬೇಕು. ಇಷ್ಟು ದರ ಹೆಚ್ಚಾದರೆ ಹೇಗೆ ತುಪ್ಪದ ಯಾವ ದೀಪ ಹಚ್ಚಲು ಸಾಧ್ಯ? ಯಮದೀಪ ಹಚ್ಚುವ ಬದಲು ನನ್ನ ಕರೆದುಕೊಂಡು ಹೋಗು ಅಂತ ಯಮನನ್ನು ಕೇಳಬೇಕಷ್ಟೇ’ ಎಂದು ನ್ಯಾ। ಶ್ರೀಶಾನಂದ ವ್ಯಂಗ್ಯವಾಡಿದರು.