Asianet Suvarna News Asianet Suvarna News

ಶೀಘ್ರ ಅಂಗನವಾಡಿ ಫ್ಯಾನ್‌, ಟಾಯ್ಲೆಟ್‌ ಕಲ್ಪಿಸಿ : ಕೋರ್ಟ್

  •  ರಾಜ್ಯದಲ್ಲಿರುವ ಅಂಗನವಾಡಿಗಳಿಗೆ ಈ ವರ್ಷದ ಡಿ. 31ರೊಳಗೆ ವಿದ್ಯುತ್‌ ಸಂಪರ್ಕ
  • ಫ್ಯಾನ್‌ ಸೌಲಭ್ಯ ಹಾಗೂ 2022ರ ಜೂ. 30ರೊಳಗೆ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ತಾಕೀತು
  • ರಾಜ್ಯದಲ್ಲಿ ಅಂದಾಜು 14 ಸಾವಿರ ಅಂಗನವಾಡಿ ಕೇಂದ್ರ
High court Directs to Electricity And Fan  For Anganwadi Before dec 31 snr
Author
Bengaluru, First Published Jul 6, 2021, 7:23 AM IST

  ಬೆಂಗಳೂರು (ಜು.06):  ರಾಜ್ಯದಲ್ಲಿರುವ ಅಂಗನವಾಡಿಗಳಿಗೆ ಈ ವರ್ಷದ ಡಿ. 31ರೊಳಗೆ ವಿದ್ಯುತ್‌ ಸಂಪರ್ಕ, ಫ್ಯಾನ್‌ ಸೌಲಭ್ಯ ಹಾಗೂ 2022ರ ಜೂ. 30ರೊಳಗೆ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು ಮಾಡಿದೆ.

ರಾಜ್ಯದ ಅಂದಾಜು 14 ಸಾವಿರ ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್‌ ಸಂಪರ್ಕವಿಲ್ಲ ಹಾಗೂ 13 ಸಾವಿರಕ್ಕೂ ಅಧಿಕ ಅಂಗನವಾಡಿಗಳಲ್ಲಿ ಶೌಚಗೃಹಗಳು ಇರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಈ ಎಲ್ಲ ಅಂಗನವಾಡಿಗಳಿಗೆ ಸೌಲಭ್ಯ ಕಲ್ಪಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತು.

ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿತು.

ಅಂಗನವಾಡಿಗಳ ಉದ್ಧಾರಕ್ಕೆ ಸರ್ಕಾರದ ಬಳಿ ದುಡ್ಡಿಲ್ವಂತೆ: ನ್ಯಾಯಾಲಯಕ್ಕೇ ಆಶ್ಚರ್ಯ..!

ರಾಜ್ಯದಲ್ಲಿ 65,911 ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ 14,948 ಅಂಗನವಾಡಿ ಕೇಂದ್ರಗಳಲ್ಲಿ ವಿದ್ಯುತ್‌ ಸಂಪರ್ಕವೇ ಇಲ್ಲ. 52,221 ಅಂಗನವಾಡಿಗಳಲ್ಲಿ ಮಾತ್ರ ಶೌಚಗೃಹಗಳಿದ್ದು, 13,690 ಕೇಂದ್ರಗಳಲ್ಲಿ ಈ ವ್ಯವಸ್ಥೆ ಇಲ್ಲ. ಶೌಚಗೃಹವಿಲ್ಲದ 3,524 ಅಂಗನವಾಡಿ ಕೇಂದ್ರಗಳು ಸರ್ಕಾರಿ ಕಟ್ಟಡಗಳಲ್ಲಿದೆ ಎಂದು ರಾಜ್ಯ ಸರ್ಕಾರವೇ ಮಾಹಿತಿ ನೀಡಿದೆ. ಹೀಗಾಗಿ, ಮೂಲ ಸೌಕರ್ಯ ಇಲ್ಲದೇ ಅಂಗನವಾಡಿ ಕೇಂದ್ರಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಅಲ್ಲದೆ, ವಿದ್ಯುತ್‌ ಮತ್ತು ಫ್ಯಾನ್‌ಗಳು ಇಲ್ಲದ ಅಂಗನವಾಡಿ ಕೇಂದ್ರಗಳಿಗೆ 2021ರ ಡಿ.31ರೊಳಗೆ ಈ ಸೌಲಭ್ಯ ಕಲ್ಪಿಸಬೇಕು. ಶೌಚಾಲಯಗಳಿಲ್ಲದ ಅಂಗನವಾಡಿಗಳಿಗೆ 2022 ಜೂ.30ರೊಳಗೆ ಶೌಚಾಲಯ ನಿರ್ಮಿಸಿಕೊಡಬೇಕು. ಸರ್ಕಾರಿ ಜಾಗದಲ್ಲಿರುವ 3524 ಅಂಗನವಾಡಿ ಕೇಂದ್ರಗಳಲ್ಲಿ 2021ರ ಡಿ.31ರೊಳಗೆ ಶೌಚಾಲಯ ನಿರ್ಮಿಸಬೇಕು ಎಂದು ನಿರ್ದೇಶಿಸಿತು.

ಅಂಗನವಾಡಿಗಳ ಮೂಲಸೌಕರ್ಯ ಅಭಿವೃದ್ಧಿ ಸಂಬಂಧ ನ್ಯಾ.ಎ.ಎನ್‌.ವೇಣುಗೋಪಾಲಗೌಡ ಅವರ ನೇತೃತ್ವದ ಸಮಿತಿ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಅನೇಕ ಸಲಹೆ ನೀಡಿದೆ. ಅವುಗಳನ್ನು ಜಾರಿಗೊಳಿಸುವ ಬಗ್ಗೆ ಮುಂದಿನ ವಿಚಾರಣೆ ವೇಳೆ ಸರ್ಕಾರ ತನ್ನ ನಿಲುವು ತಿಳಿಸಬೇಕು. ಜೊತೆಗೆ ಕೋವಿಡ್‌ ಸೋಂಕಿನ ಅಲೆ ತಗ್ಗಿರುವ ಹಿನ್ನೆಲೆಯಲ್ಲಿ ಮುಚ್ಚಲಾಗಿರುವ ಅಂಗನವಾಡಿ ಕೇಂದ್ರಗಳನ್ನು ಪುನಃ ಯಾವಾಗ ತೆರೆಯಲಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ನೀಡಬೇಕೆಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಆ.4ಕ್ಕೆ ಮುಂದೂಡಿತು.

Follow Us:
Download App:
  • android
  • ios