ಬೆಂಗಳೂರು [ಫೆ.07]:  ರಾಜ್ಯದಲ್ಲಿ ಈವರೆಗೂ ನೋವೆಲ್‌ ಕೊರೋನಾ ವೈರಸ್‌ ಸೋಂಕಿತ ಪ್ರಕರಣಗಳು ದೃಢವಾಗದಿದ್ದರೂ ದಿನದಿಂದ ದಿನಕ್ಕೆ ವೈರಸ್‌ ಬಗೆಗಿನ ಭೀತಿ ಹೆಚ್ಚಾಗುತ್ತಿದೆ. ಹೀಗಾಗಿ ವೈರಸ್‌ ಕುರಿತು ಭೀತಿ ನಿವಾರಿಸಲು ಹಾಗೂ ರೋಗದ ಕುರಿತು ಆರೋಗ್ಯ ಇಲಾಖೆ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಜನರಿಗೆ ಜಾಗೃತಿ ಮೂಡಿಸಲು ಮುಂದಾಗಿದೆ.

ಈಗಾಗಲೇ ಆರೋಗ್ಯ ಇಲಾಖೆಯು ‘ಆರೋಗ್ಯ ಸಹಾಯವಾಣಿ-104’ ಮೂಲಕ ಮಾಹಿತಿ ನೀಡುತ್ತಿದ್ದು, ಇದರ ಜತೆಗೆ ಮೆಟ್ರೋ ರೈಲು ನಿಲ್ದಾಣಗಳ ಎಲ್‌ಇಡಿ ಪರದೆಯಲ್ಲಿ ಕೊರೋನಾ ಮುಂಜಾಗ್ರತೆಗೆ ವ್ಯವಸ್ಥೆ ಮಾಡಿದೆ. ‘ಮುಂಜಾಗ್ರತೆ ಕೈಗೊಳ್ಳಿ ಹಾಗೂ ಭಯ ಪಡುವ ಅಗತ್ಯವಿಲ್ಲ’ ಎಂಬ ಜಾಗೃತಿ ಸಾಲುಗಳನ್ನು ಪ್ರಸಾರ ಮಾಡುತ್ತಿದೆ. ಇದಲ್ಲದೆ ರೇಡಿಯೋ ಜಿಂಗಲ್ಸ್‌ ಸಿದ್ಧಪಡಿಸಿದ್ದು, ಎಫ್‌ಎಂಗಳಿಗೆ ನೀಡಲಾಗುತ್ತಿದೆ. 104 ಆರೋಗ್ಯ ಸಹಾಯವಾಣಿಗೆ 1,000 ಕ್ಕೂ ಹೆಚ್ಚು ಮಂದಿ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

500 ಸಿನಿಮಾ ಮಂದಿರಲ್ಲಿ ಕೊರೋನಾ ಜಾಗೃತಿ:

ಆರೋಗ್ಯ ಇಲಾಖೆಯು ರಾಜ್ಯದ 500ಕ್ಕೂ ಹೆಚ್ಚು ಸಿನಿಮಾ ಮಂದಿರದಲ್ಲಿ ಕೊರೋನಾ ಸೋಂಕು ಕುರಿತು ಜಾಹೀರಾತು ನೀಡುತ್ತಿದೆ. 10 ಸೆಕೆಂಡ್‌ಗಳ ಈ ಜಾಹೀರಾತಿನಲ್ಲಿ ‘ಕೊರೋನಾ ಎಚ್ಚರವಿರಲಿ; ಭಯ ಪಡದಿರಿ. ಹೆಚ್ಚಿನ ಮಾಹಿತಿಗೆ ಆರೋಗ್ಯವಾಣಿ 104ಕ್ಕೆ’ ಕರೆ ಮಾಡಿ ಎಂಬ ಮಾಹಿತಿ ಇರಲಿದೆ.

ಕೊರೋನಾದಿಂದ ಜಗತ್ತು ರಕ್ಷಿಸಲು ಚೀನಾದ ಒಂದು ಇಡೀ ಪ್ರಾಂತ್ಯವೇ ಬಲಿ.

ಕೊರೋನಾ ಸೋಂಕಿತ ದೇಶಗಳಿಂದ ಇಲ್ಲಿಯವರೆಗೂ 118 ಮಂದಿ ರಾಜ್ಯಕ್ಕೆ ಬಂದಿದ್ದಾರೆ. ಈ ಪೈಕಿ ನಾಲ್ವರು ಚೀನಾ ಮೂಲದವರು ಹಿಂದಿರುಗಿದ್ದಾರೆ. 114 ಮಂದಿಯನ್ನು ಅವರು ಭಾರತಕ್ಕೆ ಆಗಮಿಸಿದ ದಿನದಿಂದ 28 ದಿನಗಳು ಮನೆಯಲ್ಲಿಯೇ ನಿಗಾ ವಹಿಸಲಾಗುತ್ತಿದೆ. ಅನಾರೋಗ್ಯ ಕಾಣಿಸಿಕೊಂಡ 95 ಮಂದಿಯ ರಕ್ತ ಮಾದರಿಯನ್ನು ಪರೀಕ್ಷಿಸಿದ್ದು, 68 ಮಂದಿ ರಕ್ತ ಮಾದರಿ ವರದಿ ನೆಗೆಟಿವ್‌ ಬಂದಿದೆ, ಬಾಕಿ 27 ಮಂದಿ ವರದಿ ಬರಬೇಕಿದೆ.

ಶಂಕಿತರಲ್ಲಿ ಸೋಂಕು ದೃಢಪಟ್ಟಿಲ್ಲ:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈವರೆಗೂ 11,494 ವಿದೇಶಿ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ ಸೋಂಕು ಕಾಣಿಸಿಕೊಂಡ ದೇಶಗಳಿಂದ 118 ಪ್ರಯಾಣಿಕರು ಆಗಮಿಸಿದ್ದು, ಅವರಲ್ಲಿ 114 ಶಂಕಿತರನ್ನು ಮನೆಯಲ್ಲಿ ಪ್ರತ್ಯೇಕಿಸಿ ಚಿಕಿತ್ಸೆ ನೀಡುವ ಮೂಲಕ ಆರೋಗ್ಯ ಕಾರ್ಯಕರ್ತರು ಅವರ ನಿಗಾ ವಹಿಸಿದ್ದಾರೆ. ಉಳಿದಂತೆ ರೋಗ ಲಕ್ಷಣದಿಂದಾಗಿ 93 ಶಂಕಿತರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಬಂದಿರುವ 68 ವರದಿಗಳಲ್ಲೂ ರೋಗ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 .ಸ್ವಯಂ ತಪಾಸಣೆ ಮಾಡಿಸಿಕೊಳ್ಳಿ

ಚೀನಾದಿಂದ ಜ.15ರ ನಂತರ ರಾಜ್ಯಕ್ಕೆ ಆಗಮಿಸಿರುವ ವಿದ್ಯಾರ್ಥಿಗಳು ಅಥವಾ ಪ್ರವಾಸಿಗರು ತಾವಾಗಿಯೇ ಜಿಲ್ಲಾ ಆರೋಗ್ಯಾಧಿಕಾರಿಗಳು ಅಥವಾ ಇಲಾಖೆಯ ವಿಚಕ್ಷಣಾ ದಳದ ಸಿಬ್ಬಂದಿಯನ್ನು ಸಂಪರ್ಕಿಸಿ ತಪಾಸಣೆಗೆ ಒಳಗಾಗುವಂತೆ ಕೋರಿದ್ದೇವೆ ಎಂದು ಇಲಾಖೆಯ ಜಂಟಿ ನಿರ್ದೇಶಕ (ಸಿಎಂಡಿ) ಡಾ. ಬಿ.ಜಿ. ಪ್ರಕಾಶ್‌ಕುಮಾರ್‌ ತಿಳಿಸಿದರು.
 
 ಮಾರ್ಗಸೂಚಿ ಬಿಡುಗಡೆ

ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆ ಮೇರೆಗೆ ಕೊರೋನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಅ​ಧಿಕಾರಿಗಳು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾರ್ಗಸೂಚಿ ಬಿಡುಗಡೆಗೊಳಿಸಿದೆ.

ಈ ಮಾರ್ಗಸೂಚಿಯಲ್ಲಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಶಂಕಿಸಲಾದ ವ್ಯಕ್ತಿಗಳ ಹಾಗೂ ಸೋಂಕಿಗೆ ಒಳಗಾದವರನ್ನು ಹೇಗೆ ತಪಾಸಣೆ ಮಾಡಬೇಕು, ಚಿಕಿತ್ಸೆ ನೀಡಬೇಕು ಹಾಗೂ ಎಷ್ಟುದಿನಗಳವರೆಗೆ ನಿಗಾ ಇರಿಸಬೇಕೆಂಬ ಮಾಹಿತಿ ಇದೆ. ಈ ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆಯ ಅ​ಕಾರಿಗಳು, ವೈದ್ಯಕೀಯ ಶಿಕ್ಷಣ ಇಲಾಖೆ, ವೈದ್ಯರ ಸಂಘಟನೆಗಳಿಗೆ ಕಳುಹಿಸಲಾಗಿದೆ.