Asianet Suvarna News Asianet Suvarna News

ರಾಜ್ಯದಲ್ಲಿ ಹರ್ಡ್‌ ಇಮ್ಯುನಿಟಿ ಪ್ರಯತ್ನ ಡೇಂಜರ್: ತಜ್ಞರ ಸಲಹೆ, ಚಿಂತನೆ ಕೈಬಿಟ್ಟ ಸರ್ಕಾರ!

ರಾಜ್ಯದಲ್ಲಿ ಹರ್ಡ್‌ ಇಮ್ಯುನಿಟಿ ಪ್ರಯತ್ನ ಅಪಾಯಕಾರಿ| ಕೊರೋನಾ ಮಣಿಸಲು ಹರ್ಡ್‌ ಇಮ್ಯುನಿಟಿ ಪ್ರಯೋಗ ಬೇಡವೇ ಬೇಡ| ತಜ್ಞರ ಸಲಹೆ: ಚಿಂತನೆ ಕೈಬಿಟ್ಟ ಸರ್ಕಾರ

herd immunity experiment is dangerous karnataka govt drop the plan after getting experts feedback
Author
Bangalore, First Published Jun 16, 2020, 7:29 AM IST

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಜೂ.16): ರಾಜ್ಯದಲ್ಲಿ ಕೊರೋನಾ ಸೋಂಕಿನ ವಿರುದ್ಧ ಸಮುದಾಯ ಪ್ರತಿರೋಧಕ ಶಕ್ತಿ (ಹರ್ಡ್‌ ಇಮ್ಯುನಿಟಿ) ವೃದ್ಧಿಸುವಂತೆ ಮಾಡುವ ಪ್ರಯತ್ನಕ್ಕೆ ಕೈಹಾಕಿದರೆ ಭಾರೀ ಅನಾಹುತ ಎದುರಿಸಬೇಕಾಗುತ್ತದೆ ಎಂದು ತಜ್ಞರು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ವೈರಸ್‌ ನಿಯಂತ್ರಿಸುವ ಲಸಿಕೆ ಹಾಗೂ ಔಷಧ ಎರಡೂ ಲಭ್ಯವಿಲ್ಲದ ಈ ಹಂತದಲ್ಲಿ ಹರ್ಡ್‌ ಇಮ್ಯುನಿಟಿ ಪ್ರಯತ್ನಕ್ಕೆ ಕೈಹಾಕಿದರೆ ಭಾರಿ ದೊಡ್ಡ ಪ್ರಮಾದವಾಗುತ್ತದೆ. ಇಷ್ಟಕ್ಕೂ ಹರ್ಡ್‌ ಇಮ್ಯುನಿಟಿಯಿಂದ ಕೊರೋನಾ ವೈರಸ್‌ ಪ್ರಭಾವ ಕುಗ್ಗಿಸಬಹುದು ಎಂಬುದು ಎಲ್ಲೂ ಸಾಬೀತಾಗಿಲ್ಲ. ಹೀಗಿರುವಾಗ ಇಂತಹ ಪ್ರಯತ್ನ ಸಲ್ಲ ಎಂದು ಅವರು ಸಲಹೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಹರ್ಡ್‌ ಇಮ್ಯುನಿಟಿಯ ಚಿಂತನೆಯನ್ನು ಕೈಬಿಟ್ಟಿದೆ. ಇಂತಹ ಪ್ರಯೋಗದ ಯಾವುದೇ ಉದ್ದೇಶವನ್ನು ಸರ್ಕಾರ ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಲೇ ಇದೆ. ನಾಲ್ಕು ಹಂತದ ಲಾಕ್‌ಡೌನ್‌ ವೇಳೆಯೂ ಏರುಗತಿಯಲ್ಲೇ ಬೆಳೆದ ಸೋಂಕು ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಹರ್ಡ್‌ ಇಮ್ಯುನಿಟಿ ಜಾರಿ ಸೂಕ್ತವೇ ಎಂಬ ವಿಚಾರದ ಚರ್ಚೆ ಮುನ್ನೆಲೆಗೆ ಬಂದಿತ್ತು.

40 ಜನ ಐಸಿಯುಗೆ: ರಾಜ್ಯದಲ್ಲಿ ತೀವ್ರ ಅಸ್ವಸ್ಥರ ಸಂಖ್ಯೆ ದಿಢೀರ್‌ ಹೆಚ್ಚಳ!

ವೈರಸ್‌ ವಿರುದ್ಧ ಸಮುದಾಯ ಪ್ರತಿರೋಧಕ ಶಕ್ತಿ ಸೃಷ್ಟಿಸಿ ಸೋಂಕು ಹರಡುವುದನ್ನು ನಿಯಂತ್ರಿಸುವುದು ಹಾಗೂ ವೈರಸ್‌ ಶಕ್ತಿ ಕುಗ್ಗಿಸುವುದನ್ನು ಹರ್ಡ್‌ ಇಮ್ಯುನಿಟಿ ಎಂದು ಕರೆಯಲಾಗುತ್ತದೆ. ರಾಜ್ಯದಲ್ಲಿನ ಸೋಂಕಿತರಲ್ಲಿ ಶೇ.3ರಷ್ಟುಮಂದಿಗೆ ಮಾತ್ರ ಚಿಕಿತ್ಸೆಯ ಅಗತ್ಯ ಕಂಡುಬರುತ್ತಿದೆ. ಜತೆಗೆ ಶೇ.1.22ರಷ್ಟುಮಾತ್ರ ಸಾವಿನ ದರ ಇದೆ. ನಾಡಿನಲ್ಲಿ ಯುವ ಜನತೆ ಹೆಚ್ಚಾಗಿದ್ದಾರೆ. ಹೀಗಾಗಿ ಚಿಕಿತ್ಸೆ ಅಗತ್ಯವಿರುವವರಿಗೆ ಮಾತ್ರ ಚಿಕಿತ್ಸೆ ನೀಡಿ ಉಳಿದವರನ್ನು ಮುಕ್ತವಾಗಿ ಬಿಡಬಹುದು ಎಂಬ ಅಭಿಪ್ರಾಯ ಕೇಳಿಬಂದಿತ್ತು.

ಹರ್ಡ್‌ ಇಮ್ಯುನಿಟಿ ಅಪಾಯಕಾರಿ ಹೆಜ್ಜೆ:

ತಜ್ಞರ ವಲಯದಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯದಲ್ಲಿ ಪ್ರಸ್ತುತ ಕೊರೋನಾ ಸೋಂಕು ನಿಯಂತ್ರಣದಲ್ಲೇ ಇದೆ. ಕಳೆದ ಐದು ದಿನಗಳ ಸೋಂಕು ಬೆಳವಣಿಗೆ ದರ ಶೇ.3.4ರಷ್ಟಿದೆ. ದೇಶದಲ್ಲಿ ಪ್ರತಿ 10 ಲಕ್ಷ ಮಂದಿ ಜನಸಂಖ್ಯೆಗೆ 73.5 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದರೆ ರಾಜ್ಯದಲ್ಲಿ ಪ್ರತಿ 10 ಲಕ್ಷ ಮಂದಿಗೆ 14 ಮಂದಿ ಮಾತ್ರ ಬಲಿಯಾಗಿದ್ದಾರೆ. ಪ್ರತಿ 10 ಲಕ್ಷ ಮಂದಿಗೆ 112 ಮಂದಿ ಮಾತ್ರ ಸೋಂಕಿತರಾಗಿದ್ದಾರೆ. ದೆಹಲಿಯಲ್ಲಿ ಈ ದರ ಸಾರಸರಿ 2,200, ಮಹಾರಾಷ್ಟ್ರದಲ್ಲಿ 900 ಇದೆ. ಆ ರಾಜ್ಯಗಳು ಮಾಡದ ಸಾಹಸ ನಾವು ಮಾಡುವುದು ಸರಿಯಲ್ಲ ಎಂದು ಈಗಾಗಲೇ ತಜ್ಞರು ತಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ?

ಅಲ್ಲದೆ, ಕರೋನಾ ಸೋಂಕು ಒಬ್ಬರಿಗೆ ಪದೇ ಪದೇ ತಗಲುತ್ತದೆಯೇ? ಸೋಂಕಿತರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದೂ ಗೊತ್ತಿಲ್ಲ. ಸೋಂಕಿತರ ಸಂಖ್ಯೆ ಮಿತಿ ಮೀರಿದರೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆಯೂ ನಮ್ಮಲ್ಲಿಲ್ಲ. ಈಗಾಗಲೇ ಇಟಲಿ ಈ ರೀತಿಯ ಪ್ರಯತ್ನಕ್ಕೆ ಮುಂದಾಗಿ ಕೈಸುಟ್ಟುಕೊಂಡಿದೆ. ಹೀಗಾಗಿ ಈ ರೀತಿ ಪ್ರಯೋಗ ಅಪಾಯಕಾರಿಯಾದದ್ದು ಎಂದು ತಜ್ಞರು ಎಚ್ಚರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಹರ್ಡ್‌ ಇಮ್ಯುನಿಟಿ ಬಗ್ಗೆ ಚಿಂತನೆ ನಡೆಸಲು ಕನಿಷ್ಠ ಶೇ.70 ಅಥವಾ 80ರಷ್ಟುಮಂದಿಗೆ ಸೋಂಕು ಉಂಟಾಗಬೇಕು. ಇದೊಂದು ಗಂಭೀರ ವಿಚಾರವಾಗಿದ್ದು, ದೀರ್ಘ ಕಾಲ ತೆಗೆದುಕೊಳ್ಳುತ್ತದೆ. ಸದ್ಯ ರಾಜ್ಯ ಸರ್ಕಾರದ ಮುಂದೆ ಅಂತಹ ಚಿಂತನೆ ಇಲ್ಲ.

- ಡಾ.ಸಿ. ನಾಗರಾಜ್‌, ನಿರ್ದೇಶಕರು, ರಾಜೀವ್‌ ಗಾಂಧಿ ಎದೆರೋಗಗಳ ಸಂಸ್ಥೆ

Follow Us:
Download App:
  • android
  • ios