ಸುದೀರ್ಘ ಅವಧಿಯ ಅಧ್ಯಯನ ರಜೆಯ ಮೇಲೆ ತೆರಳಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಎಂ. ಹೇಮಂತ್‌ ನಿಂಬಾಳ್ಕರ್‌ ಅವರ ರಜೆಯನ್ನು ತಕ್ಷಣದಿಂದ ರದ್ದುಪಡಿಸಿ ಅವರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ರಾಜ್ಯ ಸರ್ಕಾರ ಮಂಗಳವಾರ ನೇಮಕ ಮಾಡಿದೆ. 

ಬೆಂಗಳೂರು (ಜೂ.07): ಸುದೀರ್ಘ ಅವಧಿಯ ಅಧ್ಯಯನ ರಜೆಯ ಮೇಲೆ ತೆರಳಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಎಂ. ಹೇಮಂತ್‌ ನಿಂಬಾಳ್ಕರ್‌ ಅವರ ರಜೆಯನ್ನು ತಕ್ಷಣದಿಂದ ರದ್ದುಪಡಿಸಿ ಅವರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ರಾಜ್ಯ ಸರ್ಕಾರ ಮಂಗಳವಾರ ನೇಮಕ ಮಾಡಿದೆ. ಈ ಹಿಂದೆ ಬೆಳಗಾವಿ ಎಸ್‌ಪಿ, ಬೆಂಗಳೂರಿನ ಜಂಟಿ ಆಯುಕ್ತ (ಸಿಸಿಬಿ), ಹೆಚ್ಚುವರಿ ಆಯುಕ್ತ (ಪೂರ್ವ), ಹೆಚ್ಚುವರಿ ಆಯುಕ್ತ (ಆಡಳಿತ) ಹಾಗೂ ಸಿಐಡಿ ಐಜಿಪಿ ಸೇರಿದಂತೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದ ಹೇಮಂತ್‌ ನಿಂಬಾಳ್ಕರ್‌ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಡೆಗಣನೆಗೆ ಒಳಗಾಗಿದ್ದರು. 

ಕಳೆದ 2022ರಲ್ಲಿ ಉನ್ನತ ಶಿಕ್ಷಣದ ಸಲುವಾಗಿ ಎರಡು ವರ್ಷಗಳ ಸುದೀರ್ಘ ರಜೆ ಪಡೆದು ತೆರಳಿದ್ದರು. ಈಗ ನಿಂಬಾಳ್ಕರ್‌ ಅವರ ರಜೆಯನ್ನು ರದ್ದುಪಡಿಸಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹುದ್ದೆ ಹೊಣೆಗಾರಿಕೆ ನೀಡಲಾಗಿದೆ. ಇದುವರೆಗೆ ಈ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ಹೊತ್ತಿದ್ದ ಐಎಎಸ್‌ ಅಧಿಕಾರಿ ವಿನೋತ್‌ ಪ್ರಿಯಾ ಅವರನ್ನು ಈ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. 1998ನೇ ಬ್ಯಾಚಿನ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿರುವ ನಿಂಬಾಳ್ಕರ್‌ ಅವರನ್ನು ನೇಮಿಸಿರುವ ಆಯುಕ್ತ ಹುದ್ದೆಯು ದಕ್ಷಿಣ ವಲಯ ಐಜಿಪಿ ಹುದ್ದೆ (ಮೈಸೂರು) ಮತ್ತು ಜವಾಬ್ದಾರಿಗಳಿಗೆ ತತ್ಸಮಾನವಾಗಿರುತ್ತವೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ನೈತಿಕ ಪೊಲೀಸ್‌ಗಿರಿ ಬಂದ್‌: ಸಿಎಂ ಸಿದ್ದರಾಮಯ್ಯ

ಸಿಸಿಬಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದ ಹೇಮಂತ್‌ ನಿಂಬಾಳ್ಕರ್‌ ಅವರು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದ ವಿಶ್ವದ ಅತ್ಯುಗ್ರ ಸಂಘಟನೆಯಾದ ಐಸಿಸ್‌ನ ಟ್ವೀಟರ್‌ ಹ್ಯಾಂಡ್ಲರ್‌ ಮೆಹದಿ ಬಿಸ್ವಾಸ್‌ನನ್ನು ಬಂಧಿಸಿದ್ದರು. ಕ್ರಿಕೆಟ್‌ ಬೆಟ್ಟಿಂಗ್‌, ಜೂಜು ಅಡ್ಡೆ ಹಾಗೂ ರಿಯಲ್‌ ಎಸ್ಟೇಟ್‌ ಮಾಫಿಯಾಗಳಿಗೆ ದುಸ್ವಪ್ನವಾಗಿ ಕಾಡಿದ್ದರು. ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತರಾಗಿದ್ದಾಗ ಕಮ್ಮನಹಳ್ಳಿಯ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗಳನ್ನು ಕೆಲವೇ ತಾಸಿನೊಳಗೆ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು. ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಒಂದಂಕಿ ಲಾಟರಿ ಪ್ರಕರಣದ ತನಿಖೆಯನ್ನು ಸಿಐಡಿ ಐಜಿಪಿಯಾಗಿದ್ದಾಗ ತನಿಖೆ ನಡೆಸಿದ್ದರು. ಅಲ್ಲದೆ ಕ್ರಿಕೆಟ್‌ ಬೆಟ್ಟಿಂಗ್‌ ದಂದೆ ವಿರುದ್ಧ ಸಹ ವಿಶೇಷ ಕಾರ್ಯಾಚರಣೆ ನಡೆಸಿ ಬಿಸಿ ಮುಟ್ಟಿಸಿದ್ದರು.