ಆರೋಗ್ಯ ಸಮಸ್ಯೆಯಿಂದ ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಸಾರ್ವಜನಿಕರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಿ: ಸುಧಾಕರ್‌

ತುಮಕೂರು(ನ.17): ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ತಾಯಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣ ಮರುಕಳಿಸದಂತೆ ರಾಜ್ಯಾದ್ಯಂತ ಜಿಲ್ಲಾಸ್ಪತ್ರೆಗಳಲ್ಲಿ 24*7 ಸಹಾಯವಾಣಿ ತೆರೆಯುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ.

ತುಮಕೂರಿನ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಬುಧವಾರ ವೈದ್ಯರೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರೋಗ್ಯ ಸಮಸ್ಯೆಯಿಂದ ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಸಾರ್ವಜನಿಕರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಿ. ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ತಾಯಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣ ಮರುಕಳಿಸದಂತೆ ನಿಗಾ ವಹಿಸಿ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಸಹಾಯವಾಣಿ ತೆಗೆದು, ಈ ಸಹಾಯವಾಣಿಗೆ ಸಾಮಾಜಿಕ ಭದ್ರತೆ ಇರುವಂತಹ 4 ಸಿಬ್ಬಂದಿಯನ್ನು ನೇಮಿಸಿಕೊಳ್ಳಿ. ಈ ಸಹಾಯವಾಣಿ ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಿ. ಹಗಲು ಪಾಳಿಯಲ್ಲಿ ಇಬ್ಬರು ಹಾಗೂ ರಾತ್ರಿ ಪಾಳಿಯಲ್ಲಿ ಇಬ್ಬರು ಕೆಲಸ ನಿರ್ವಹಿಸಲಿ ಎಂದು ಅಧಿಕಾರಿಗಳಿಗೆ ಸಚಿವರು ಖಡಕ್‌ ಸೂಚನೆ ನೀಡಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಲಂಚ ಕುರಿತಾಗಿ ದೂರು ಬಂದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಎಚ್ಚರಿಸಿದರು.

ವಾಹನ ಸವಾರರಿಗೆ ಫೈನ್‌ ಹಾಕಲು ರಸ್ತೆಗಿಳಿದ ಜಡ್ಜ್: ಪೊಲೀಸರಿಗೆ ಪಾಠ

ನಿಯಮಿತವಾಗಿ ಸಭೆ ನಡೆಸಿ:

ನಿಯಮಿತವಾಗಿ ಎಆರ್‌ಎಸ್‌(ಆರೋಗ್ಯ ರಕ್ಷಾ ಸಮಿತಿ) ಸಭೆಗಳನ್ನು ನಡೆಸಿ. ಇದರಿಂದ ಪಾರದರ್ಶಕತೆ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಮತ್ತು ಜನರಿಗೆ ವೈದ್ಯಕೀಯ ವಿಷಯಗಳು ತಿಳಿಯುತ್ತವೆ. ಡ್ರಗ್‌್ಸ ಮತ್ತು ಲಾಜಿಸ್ಟಿಕ್‌ ವೇರ್‌ಹೌಸ್‌ನಿಂದ ನಿಯಮಿತವಾಗಿ ಔಷಧಗಳು ಸರಬರಾಜು ಆಗುತ್ತಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಿ. ಔಷಧಿಗಳ ಪೂರೈಕೆ ಕುರಿತು ಸರಿಯಾದ ರೀತಿಯಲ್ಲಿ ಯೋಜನೆ ರೂಪಿಸಿ, ಡೀಲರ್‌ಗಳಿಗೆ ಮುಂಚಿತವಾಗಿ ಇಂಡೆಂಟ್‌ ನೀಡಿ. ರೋಗಿಗಳಿಗೆ ಅವಶ್ಯಕತೆ ಇದ್ದಲ್ಲಿ ಮಾತ್ರ ಎಂಆರ್‌ಐ ಮತ್ತು ಸಿಟಿ ಸ್ಕ್ಯಾ‌ನ್‌ಗಳನ್ನು ಶಿಫಾರಸು ಮಾಡಿ ಎಂದು ಸಲಹೆ ನೀಡಿದರು.

ಆಸ್ಪತ್ರೆಗಳಿಗೆ ಡಯಾಲಿಸಿಸ್‌ ಮಾಡಿಸಿಕೊಳ್ಳಲು ಬರುವ ರೋಗಿಗಳಿಗೆ ಯಾವುದೇ ರೀತಿ ಸೋಂಕು ಆಗದ ರೀತಿ ವೈದ್ಯರು ಮತ್ತು ಶುಶ್ರೂಷಕರು ಎಚ್ಚರಿಕೆ ವಹಿಸಬೇಕು. ಇದರಿಂದ ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ತಪ್ಪುತ್ತದೆ. ದಂತ ಭಾಗ್ಯ ಹಾಗೂ ನೇತ್ರ ಚಿಕಿತ್ಸಾ ಕ್ಯಾಂಪ್‌ಗಳನ್ನು ರಾಜ್ಯಾದ್ಯಂತ ನಡೆಸಿ. ಜಿಲ್ಲಾಸ್ಪತ್ರೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ ಎಂದು ಡಿಎಚ್‌ಒ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು.

ಖಡಕ್‌ ಸೂಚನೆ

- ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗಬೇಕು
- ಸರ್ಕಾರಿ ಆಸ್ಪತ್ರೆಯಲ್ಲಿ ಲಂಚ ಕುರಿತು ದೂರು ಬಂದರೆ ಗಂಭೀರ ಕ್ರಮ
- ವೈದ್ಯರು, ವೈದ್ಯ ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು
- ತಾಯಿ- ಮಕ್ಕಳ ಸಾವು ಮರುಕಳಿಸದಂತೆ ಹೆಚ್ಚಿನ ನಿಗಾ ವಹಿಸಬೇಕು
- ಅವಶ್ಯಕತೆ ಇದ್ದರೆ ಮಾತ್ರ ಎಂಆರ್‌ಐ ಸ್ಕ್ಯಾನ್‌ಗೆ ಶಿಫಾರಸು ಮಾಡಿ
- ತುಮಕೂರಿನಲ್ಲಿ ವೈದ್ಯರ ಜತೆ ನಡೆದ ಸಭೆಯಲ್ಲಿ ಸುಧಾಕರ್‌ ತಾಕೀತು