* ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ* ಕರಾವಳಿಯ ಜಿಲ್ಲೆಗಳಿಗೆ ಮುಂದಿನ ಜೂನ್ 15 ರವರೆಗೆ ಯೆಲ್ಲೋ ಅಲರ್ಟ್ * ಕೆಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ
ಬೆಂಗಳೂರು(ಜೂ.12): ಇಂದು(ಭಾನುವಾರ) ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಯಾದಗಿರಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಉತ್ತರಕನ್ನಡ, ಬೆಳಗಾವಿ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ನಗರ, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಿದೆ. ಇದೇ ವೇಳೆ ಕರಾವಳಿಯ ಜಿಲ್ಲೆಗಳಿಗೆ ಮುಂದಿನ ಬುಧವಾರವರೆಗೆ (ಜೂನ್ 15) ಯೆಲ್ಲೋ ಅರ್ಟ್ ಮುಂದುವರಿಯಲಿದೆ. ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ಉತ್ತರ ಕನ್ನಡದ ಮುಡಗೆರಿಯಲ್ಲಿ 10.35 ಸೆಂ.ಮೀ, ಉಡುಪಿಯ ಸಿದ್ದಾಪುರ 8.5, ಉತ್ತರ ಕನ್ನಡದ ಕಾರವಾರ 8, ಶಿರಾಲಿ, ಕುಮಟಾ, ಕದ್ರಾದಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ.
ಕರಾವಳಿಯಲ್ಲಿ ಮಳೆ ಚುರುಕು: ಕೃಷಿ ಕಾರ್ಯ ಚುರುಕು
ಕರಾವಳಿಯಲ್ಲಿ ಬಿರುಸುಗೊಂಡ ಮುಂಗಾರು
ರಾಜ್ಯದ ಕರಾವಳಿಯಲ್ಲಿ ಮುಂಗಾರು ಮಳೆ ತುಸು ಬಿರುಸು ಪಡೆದಿದ್ದು, ಶನಿವಾರ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆ ಮಳೆಯಾಗಿದೆ. ಕರಾವಳಿಯಲ್ಲಿ ಮೂರು ದಿನಗಳ ಕಾಲ ಯೆಲ್ಲೋ ಅಲರ್ಚ್ ಘೋಷಿಸಲಾಗಿದೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ, ಅಂಕೋಲಾ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಶನಿವಾರ ಬೆಳಗ್ಗೆಯಿಂದಲೇ ಮಳೆ ಸುರಿದಿದೆ. ಆಗಾಗ ರಭಸದಿಂದ ಸುರಿಯುವ ಮಳೆ, ದಿನವಿಡೀ ಮುಂದುವರಿದಿತ್ತು. ಕರಾವಳಿಯಲ್ಲಿ ರಭಸದ ಮಳೆ ಇದ್ದರೆ ಘಟ್ಟಪ್ರದೇಶದಲ್ಲಿ ತುಂತುರು ಮಳೆ ಇತ್ತು.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಜೂ.12 ರಿಂದ 15ರ ವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಚ್’ ಘೊಷಿಸಲಾಗಿದೆ. ಈ ವೇಳೆ ಗುಡುಗು ಸಿಡಿಲಿನಿಂದ ಬಿರುಸಿನ ಮಳೆಯಾಗುವ ನಿರೀಕ್ಷೆ ಇದೆ. ಈ ವೇಳೆ ಗಾಳಿಯ ವೇಗ ಮತ್ತು ಸಮುದ್ರದ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗೋಕರ್ಣದಲ್ಲಿ ಪ್ರವಾಸಿಗರಿಗೆ ನೀರಿಗಿಳಿಯದಂತೆ ಎಚ್ಚರಿಸುವ ಕೆಂಪು ಬಾವುಟವನ್ನು ಕಡಲತೀರದಲ್ಲಿ ಜೀವರಕ್ಷಕ ಸಿಬ್ಬಂದಿ ಅಳವಡಿಸಿದ್ದಾರೆ. ಇನ್ನು ಹಾವೇರಿ ಜಿಲ್ಲೆಯ ವಿವಿಧೆಡೆ ಕೂಡ ಶನಿವಾರ ಜಿಟಿಜಿಟಿ ಮಳೆಯಾಗಿದೆ.
