ಕರಾವಳಿಯಲ್ಲಿ ಮಳೆ ಚುರುಕು: ಕೃಷಿ ಕಾರ್ಯ ಚುರುಕು
* ಕಾರವಾರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 4 ಗಂಟೆ ತನಕ ಮೋಡ ಕವಿದ ವಾತಾವರಣದೊಂದಿಗೆ ಜಿಟಿಜಿಟಿ ಮಳೆ *
* ಶಿರಸಿಯಲ್ಲಿ ದಿನವಿಡೀ ಸಾಧಾರಣ ಮಳೆ ಇದ್ದರೆ, ಆಗಾಗ ಭಾರಿ ಮಳೆ ಸುರಿಯಿತು
* ಭಟ್ಕಳದಲ್ಲಿ ಬಿಸಿಲು ಮಳೆಯ ಕಣ್ಣುಮುಚ್ಚಾಲೆ
ಕಾರವಾರ(ಜೂ.11): ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಳೆ ಚುರುಕುಗೊಂಡಿದೆ. ಕೆಲವೆಡೆ ದಿನವಿಡೀ ಜಿಟಿಜಿಟಿ ಮಳೆ ಸುರಿದಿದೆ. ಸೆಕೆಯಿಂದ ಬಸವಳಿದಿದ್ದ ಜನತೆಗೆ ಹಿತಾನುಭವ ಉಂಟಾಯಿತು.
ಕಾರವಾರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 4 ಗಂಟೆ ತನಕ ಮೋಡ ಕವಿದ ವಾತಾವರಣದೊಂದಿಗೆ ಜಿಟಿಜಿಟಿ ಮಳೆ ಸುರಿಯಿತು. ಶಿರಸಿಯಲ್ಲಿ ದಿನವಿಡೀ ಸಾಧಾರಣ ಮಳೆ ಇದ್ದರೆ, ಆಗಾಗ ಭಾರಿ ಮಳೆ ಸುರಿಯಿತು. ಭಟ್ಕಳದಲ್ಲಿ ಬಿಸಿಲು ಮಳೆಯ ಕಣ್ಣುಮುಚ್ಚಾಲೆ ನಡೆಯಿತು.
ಹೊನ್ನಾವರ, ಕುಮಟಾ ಹಾಗೂ ಅಂಕೋಲಾದಲ್ಲಿ ಸಾಧಾರಣ ಮಳೆಯಾಗಿದೆ. ಜೋಯಿಡಾದಲ್ಲಿ ಗಾಳಿಯೊಂದಿಗೆ ಆಗಾಗ ಮಳೆ ಸುರಿದಿದೆ. ಮುಂಡಗೋಡದಲ್ಲಿ ಕೆಲ ಸಮಯ ಮಳೆಯಾಯಿತು.
ಹಾವೇರಿ ಜಿಲ್ಲಾದ್ಯಂತ ವರುಣನ ಅಬ್ಬರ: ಸಿಡಿಲಿಗೆ ಮಹಿಳೆ ಸಾವು, 7 ಜನರಿಗೆ ಗಾಯ
ಭಟ್ಕಳದಲ್ಲಿ ದಿನವಿಡಿ ಸುರಿದ ಮಳೆ: ಕೃಷಿ ಕಾರ್ಯ ಚುರುಕು
ಭಟ್ಕಳ: ತಾಲೂಕಿನಲ್ಲಿ ಶುಕ್ರವಾರ ಭಾರಿ ಮಳೆ ಸುರಿದಿದ್ದು, ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ. ಶಿರಾಲಿ, ಕಾಯ್ಕಿಣಿ, ಬೇಂಗ್ರೆ, ಮಾವಳ್ಳಿ, ಬೈಲೂರು, ಕೊಪ್ಪ ಮುಂತಾದ ಭಾಗದಲ್ಲಿ ಬೀಜ ಬಿತ್ತನೆ ಕಾರ್ಯ ಬಿರುಸಿನಿಂದ ಸಾಗಿದ್ದು, ಮಳೆಯ ಅವಶ್ಯಕತೆ ಇತ್ತು.
ಕಳೆದೊಂದು ವಾರದಿಂದ ಮಳೆ ಬರುತ್ತಿದ್ದರೂ ಅಷ್ಟೊಂದು ಜೋರಾಗಿ ಸುರಿಯುತ್ತಿರಲಿಲ್ಲ. ಆದರೆ ಶುಕ್ರವಾರ ಬೆಳಿಗ್ಗೆಯಿಂದ ಸಂಜೆವರೆಗೂ ಮಳೆ ಸುರಿದಿದೆ. ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ವೇಗ ಪಡೆದಿದೆ.
ಅಡಕೆ ಬೆಳೆಗೆ ಕೊಳೆ ರೋಗ ಬರದಂತೆ ಔಷಧಿ ಸಿಂಪಡಿಸುವ ಕಾರ್ಯಕ್ಕೂ ಚಾಲನೆ ಸಿಕ್ಕಿದೆ. ಮಳೆಗಾಲ ಆರಂಭವಾದರೂ ಗ್ರಾಮಾಂತರ ಭಾಗದಲ್ಲಿ ಚರಂಡಿ ಸ್ವಚ್ಛಗೊಳಿಸುವ ಕೆಲಸಕ್ಕೆ ಇನ್ನೂ ಆರಂಭಿಸಿದಂತಿಲ್ಲ. ಈಗ ಸುರಿದ ಮಳೆಗೆ ಎಷ್ಟೋ ರಸ್ತೆಗಳಲ್ಲಿ ಹೊಂಡ ಬಿದ್ದಿದೆ. ಇದಕ್ಕೆ ಗಟಾರ ಸ್ವಚ್ಛ ಮಾಡದೇ ಇರುವುದೇ ಕಾರಣವಾಗಿದೆ. ಇನ್ನಾದರೂ ಸಂಬಂಧಿಸಿದ ಇಲಾಖೆ ಗಟಾರ ಸ್ವಚ್ಛತೆಗೆ ಮುಂದಾಗಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.