ಕರಾವಳಿ, ಒಳನಾಡಿನಲ್ಲಿ ಯೆಲ್ಲೋ ಅಲರ್ಟ್‌, ನಾಳೆಯಿಂದ ಗುರುವಾರದವರೆಗೆ ಮಳೆ ಸಕ್ರಿಯ, ಗಣೇಶ ಹಬ್ಬದ ವೇಳೆ ವರುಣನ ಅಬ್ಬರ ಸಾಧ್ಯತೆ

ಬೆಂಗಳೂರು(ಆ.28): ರಾಜ್ಯದಲ್ಲಿ ಇಂದಿನಿಂದ(ಭಾನುವಾರ) ಭಾರಿ ಮಳೆಯಾಗುವ ಸಂಭವವಿದ್ದು, ಕರಾವಳಿ ಜಿಲ್ಲೆಗಳು ಮತ್ತು ಒಳನಾಡಿನ ಹಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ (6.5 ಸೆಂ.ಮೀ ನಿಂದ 11.5 ಸೆಂ. ಮೀ ಮಳೆ) ಎಚ್ಚರಿಕೆ ನೀಡಲಾಗಿದೆ. ಭಾನುವಾರ ಬೆಳಗ್ಗೆ 8.30ರವರೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಹಾಸನ, ದಾವಣಗೆರೆ, ಕೊಪ್ಪಳ, ಬಳ್ಳಾರಿ, ರಾಯಚೂರು, ಬಾಗಲಕೋಟೆ, ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ.

ಸೋಮವಾರ ಬೆಳಗ್ಗೆ 8.30ರ ತನಕ ಮಳೆಯ ವ್ಯಾಪಕತೆ ಸೀಮಿತವಾಗಿರಲಿದ್ದು ಚಿಕ್ಕಮಗಳೂರು, ಚಾಮರಾಜನಗರ ಮತ್ತು ಕೋಲಾರಕ್ಕೆ ಯೆಲ್ಲೋ ಅಲರ್ಟ್‌ ಪ್ರಕಟಿಸಲಾಗಿದೆ. ಆದರೆ ಸೋಮವಾರದಿಂದ ಗುರುವಾರದ (ಗಣೇಶ ಹಬ್ಬದ ವರೆಗೆ) ತನಕ ರಾಜ್ಯದಲ್ಲಿ ಮಳೆ ಹೆಚ್ಚು ಸಕ್ರಿಯವಾಗಿರಲಿದೆ. ಮಂಗಳವಾರ ಬೆಳಗ್ಗೆ 8.30ರವರೆಗೆ ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ.

ಬೊಂಬೆನಗರಿ ಚನ್ನಪಟ್ಟಣದಲ್ಲಿ ಮಳೆ ಅವಾಂತರ: 200ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

ಮಂಗಳವಾರದಿಂದ ಬುಧವಾರ ಬೆಳಗ್ಗೆ 8.30ರವರೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೊಡಗು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಕೊಪ್ಪಳ, ಗದಗ, ರಾಯಚೂರು, ಬಾಗಲಕೋಟೆ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗೆ ಯೆಲ್ಲೋ ಅಲರ್ಟ್‌ ಪ್ರಕಟಿಸಲಾಗಿದೆ.

ಮಾನ್ವಿಯಲ್ಲಿ ಅತ್ಯಧಿಕ 19 ಸೆಂ.ಮೀ. ಮಳೆ:

ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ರಾಯಚೂರಿನ ಮಾನ್ವಿಯಲ್ಲಿ 19 ಸೆಂ.ಮೀ., ಮಂಡ್ಯದ ಮದ್ದೂರು 10, ತುಮಕೂರಿನ ಸಿರಾ, ರಾಮನಗರ ತಲಾ 9, ರಾಯಚೂರಿನ ದೇವದುರ್ಗ, ಬಳ್ಳಾರಿಯ ಕೊಟ್ಟೂರು, ಕೋಲಾರ, ಮಂಡ್ಯದ ಶ್ರೀರಂಗಪಟ್ಟಣ, ಮೈಸೂರಿನ ಸುತ್ತೂರು, ಬೆಂಗಳೂರಿನ ಎಚ್‌ಎಎಲ್‌ನಲ್ಲಿ ತಲಾ 7 ಸೆಂ.ಮೀ ಮಳೆಯಾಗಿದೆ.