ರಾಜ್ಯದ ಈ ಜಿಲ್ಲೆಗಳಿಗೆ ಸುರಿಯಲಿದೆ ಭಾರೀ ಮಳೆ: ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್
ಕರಾವಳಿಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಬಳ್ಳಾಪುರ, ಬೆಳಗಾವಿ, ಬೀದರ್, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ಇದೆ. ಹೀಗಾಗಿ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಬೆಂಗಳೂರು (ಸೆ.30): ಕರಾವಳಿಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಬಳ್ಳಾಪುರ, ಬೆಳಗಾವಿ, ಬೀದರ್, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ಇದೆ. ಹೀಗಾಗಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯ ಒಂದೆರಡು ಕಡೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಕೊಡಗಿನಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾದರೆ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ ಸುರಿಯಲಿದೆ. ಉತ್ತರ ಒಳನಾಡಿನ ಬೀದರ್ ಮತ್ತು ಬೆಳಗಾವಿಯಲ್ಲಿ ವ್ಯಾಪಕ ಮಳೆಯಾಗಲಿದೆ.
ಕಲಬುರಗಿ, ರಾಯಚೂರು, ವಿಜಯಪುರ, ಧಾರವಾಡ ಮತ್ತು ಯಾದಗಿರಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರದ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ರಾಮನಗರ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಮುಸುಕಿದ ವಾತಾವರಣವಿರುತ್ತದೆ. ಸಂಜೆ ವೇಳೆಗೆ ಮಳೆಯಾಗುವ ಬಹಳ ಸಾಧ್ಯತೆ ಇವೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಸಂಕಷ್ಟ ಸೂತ್ರ ಇಲ್ಲದಿರುವುದೇ ಕಾವೇರಿ ಸಮಸ್ಯೆಗೆ ಕಾರಣವಾಗಿದೆ: ಸಚಿವ ಮಹದೇವಪ್ಪ
ಮೀನುಗಾರರಿಗೆ ಎಚ್ಚರಿಕೆ: ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ 40-45 ಕಿ.ಮೀ ವೇಗದಲ್ಲಿ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಚಂಡಮಾರುತದ ವಾತಾವರಣ ಇರುತ್ತದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದೆ.
ರೈತರ ಮುಖದಲ್ಲಿ ಮಂದಹಾಸ: ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಜಿಟಿ ಜಿಟಿ ಮಳೆ ಸುರಿಯುತಿದೆ. ಮಳೆ ಜೊತೆ ತಂಗಾಳಿಯು ಬೀಸುತ್ತಿದ್ದು ಚಳಿಯ ವಾತಾವರಣ ಸೃಷ್ಟಿ ಯಾಗಿದೆ.ಕೆಲವೆಡೆ ಗುಡುಗಿನಿಂದ ಕೂಡಿದ ಮಳೆ ಸುರಿಯುತ್ತಿದೆ. ಕಳೆದ 15 ದಿನಗಳಿಂದ ಕಾಣೆಯಾಗಿದ್ದ ಮಳೆ ರೈತರಲ್ಲಿ ಮಂದಹಾಸ ಮೂಡಿಸಿದೆ. ಇದರಿಂದ ಕೃಷಿಗೆ ಹೆಚ್ಚಿನ ಪ್ರಯೋಜನ ವಾಗಲಿದೆ. ಘಟ್ಟ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಮಾಳ ಮಲ್ಲಾರ್ ಬಳಿ ಹುಟ್ಟುವ ಸ್ವರ್ಣ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ.
ಮುಂಡ್ಲಿ ಅಣೆಕಟ್ಟಿನ ಕೆಲವು ಗೇಟ್ ತೆಗೆದಿದ್ದು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಕಾರ್ಕಳ ಎಣ್ಣೆಹೊಳೆ ಸ್ವರ್ಣ ನದಿಗೆ ಕಟ್ಟಿರುವ ಏತ ನೀರಾವರಿ ಯೋಜನೆ ಅಣೆಕಟ್ಟಿನ 12 ಗೇಟ್ ಗಳಲ್ಲಿ ಎರಡು ಗೇಟುಗಳನ್ನು ತೆರೆಯಲಾಗಿದ್ದು ಹೆಚ್ಚುವರಿ ನೀರನ್ನು ಬಿಡಲಾಗುತ್ತಿದೆ. ಅಜೆಕಾರು ಕಡ್ತಲ ಎಳ್ಳಾರೆಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ವಿದ್ಯುತ್ಮ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೆಬ್ರಿ ಭಾಗದಲ್ಲಿ ಹರಿಯುವ ಸೀತಾ ನದಿಯಲ್ಲಿ ಕೆಸರು ನೀರು ಹರಿಯುತ್ತಿದ್ದು ನೀರಿನ ಮಟ್ಟ ಏರಿಕೆ ಕಂಡಿದೆ. ಶಿವಪುರ ಕಬ್ಬಿನಾಲೆ ಜರುವತ್ತು ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಿದ್ದರಾಮಯ್ಯಗೆ ಪ್ರಯಾಸ: ಜನಾರ್ದನ ರೆಡ್ಡಿ
ಕಾರ್ಕಳ ತಾಲೂಕಿನ ನಾರಾವಿ, ಹೊಸ್ಮಾರು, ನೂರಾಲ್ಬೆಟ್ಟು, ಸೂರಾಲು, ದಿಡಿಂಬಿರಿ, ಮಾಳ, ಪಳ್ಳಿ ನಿಂಜೂರು, ರಂಗನಪಲ್ಕೆ, ದುರ್ಗ, ತೆಳ್ಳಾರು ಮುಂಡ್ಲಿ, ಕಡ್ತಲ ಶಿರ್ಲಾಲು, ಕೆರುವಾಶೆ, ಹೆಬ್ರಿ ತಾಲೂಕಿನ ರಾಮಮಂದಿರ , ಕುಚೂರು, ಶಿವಪುರ, ಕಳ್ತೂರು, ಮಡಾಮಕ್ಕಿ , ಸೋಮೇಶ್ವರ, ತಿಂಗಳೆ, ಮುದ್ರಾಡಿ, ಮುನಿಯಾಲು, ವರಂಗ , ಅಂಡಾರು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಕಾರ್ಕಳ ತಾಲೂಕಿನಲ್ಲಿ ಒಟ್ಟು ಸರಾಸರಿ 27.2 ಮಿಮೀ, ಹೆಬ್ರಿ 32.7 ಮಿಮೀ ಮಳೆ ವರದಿಯಾಗಿದೆ.