ರಾಜ್ಯದ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಂಗಳವಾರ ಭಾರಿ ಮಳೆಯಾಗಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ರಾಜ್ಯದ ಉಳಿದೆಡೆ ತುಂತುರು ಮಳೆ ಹಾಗೂ ಮೋಡ ಮುಸುಕಿದ ವಾತಾವರಣವಿತ್ತು. 

ಬೆಂಗಳೂರು (ಜು.06): ರಾಜ್ಯದ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಂಗಳವಾರ ಭಾರಿ ಮಳೆಯಾಗಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮಧ್ಯಕರ್ನಾಟಕದ ದಾವಣಗೆರೆ ಹಾಗೂ ಉತ್ತರ ಕರ್ನಾಟಕದ ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ರಾಜ್ಯದ ಉಳಿದೆಡೆ ತುಂತುರು ಮಳೆ ಹಾಗೂ ಮೋಡ ಮುಸುಕಿದ ವಾತಾವರಣವಿತ್ತು. ಬುಧವಾರ ಕೂಡ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಚ್‌ ಘೋಷಿಸಲಾಗಿದೆ.

ತತ್ತರಿಸಿದ ಕರಾವಳಿ, ಮಲೆನಾಡು: ಮಳೆಗೆ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳು ತತ್ತರಿಸಿವೆ. ಉಳ್ಳಾಲದ ಸೋಮೇಶ್ವರದ ಉಚ್ಚಿಲಗುಡ್ಡೆಯಲ್ಲಿರುವ ಅಂಗನವಾಡಿ ಕೇಂದ್ರ, ಉಚ್ಚಿಲ ಗುಡ್ಡೆಯ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಜಲಾವೃತಗೊಂಡಿದೆ. ಕೇರಳ- ಕರ್ನಾಟಕ ಗಡಿಭಾಗವಾದ ಸಾರಡ್ಕ ಎಂಬಲ್ಲಿ ಮಂಗಳವಾರ ಬೆಳಗ್ಗೆ ರಸ್ತೆಗೆ ಗುಡ್ಡ ಕುಸಿದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮುಡಿಪು- ವಿಟ್ಲದ ನಡುವೆ ಕುಡ್ತಮುಗೇರು ಎಂಬಲ್ಲಿ ರಸ್ತೆ ಮೇಲೆ ಪ್ರವಾಹದ ನೀರು ನುಗ್ಗಿ ಬೆಳಗ್ಗೆ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. 

ರಾಜ್ಯದ ಹಲವೆಡೆ ವರುಣನ ಅರ್ಭಟ: ಚಿತ್ರದುರ್ಗದಲ್ಲಿ ಮಳೆಯಿಲ್ಲದೇ ಅನ್ನದಾತ ಕಂಗಾಲು..!

ಉಳ್ಳಾಲದ ತಲಪಾಡಿ, ದೇವಿಪುರ, ಕೋಟೆಕಾರು, ವೈದ್ಯನಾಥ ನಗರ, ಒಂಬತ್ತುಕೆರೆ, ಪೆರ್ಮನ್ನೂರು ಗ್ರಾಮದ ಕಲ್ಲಾಪು ಎಂಬಲ್ಲಿ ತಗ್ಗು ಪ್ರದೇಶದಲ್ಲಿದ್ದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಉಡುಪಿ ನಗರದಲ್ಲೂ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ನಾಪೋಕ್ಲು- ಭಾಗಮಂಡಲ, ಮಡಿಕೇರಿ - ಭಾಗಮಂಡಲ ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಬೋಟ್‌ನ ಸಹಾಯದ ಮೂಲಕ ಸಾರ್ವಜನಿಕರನ್ನು ಸಾಗಿಸಲಾಗುತ್ತಿದೆ. 

ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಆರ್ಭಟ ಮಂಗಳವಾರ ತುಸು ಹೆಚ್ಚಾಗಿದೆ. ಲೋಂಡಾ-ಮಡಗಾಂವ ರೈಲು ಮಾರ್ಗದ ಕುಲೇಂ ನಿಲ್ದಾಣದ ಬಳಿ ರೈಲು ಹಳಿಯ ಮೇಲೆ ಮರವೊಂದು ಬಿದ್ದ ಪರಿಣಾಮ ಲೋಂಡಾ-ಮಡಗಾಂವ ನಿಲ್ದಾಣಗಳ ನಡುವೆ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದೆ. ದಾವಣಗೆರೆಯಲ್ಲೂ ಮಳೆಗೆ 10 ಮನೆಗಳಿಗೆ ಹಾನಿಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆ: ರಜೆ ಗೊಂದಲದಿಂದ ಪೋಷಕರಿಗೆ ಸಂಕಷ್ಟ

5 ಜಿಲ್ಲೆಗಳ ಶಾಲೆಗಳಿಗೆ ಇಂದು ರಜೆ ಘೋಷಣೆ: ಮಳೆ ಆರ್ಭಟ ತೀವ್ರಗೊಂಡಿರುವುದರಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಲೆಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಲಕ್ಯಾ, ಅಂಬಳೆ ಹೋಬಳಿಗಳ ಹೊರತುಪಡಿಸಿ ಉಳಿದೆಡೆ ಶನಿವಾರದವರೆಗೂ ರಜೆ ಘೋಷಿಸಲಾಗಿದೆ. ಧಾರವಾಡ, ಹಾವೇರಿ, ಗದಗ ಜಿಲ್ಲೆಯಲ್ಲೂ ಉತ್ತಮ ಮಳೆ ಸುರಿದಿದ್ದು ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ. ಬಳ್ಳಾರಿ, ಕೊಪ್ಪಳ ಜಿಲ್ಲೆಯಲ್ಲೂ ಸಾಧಾರಣ ಮಳೆಯಾಗಿದೆ. ರೈತರು ಖುಷಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಗೆ ಜೋಗ ಜಲಪಾತದ ವೈಭವವೂ ಮರುಕಳಿಸಿದ್ದು, ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ.