ಬೆಂಗಳೂರು(ನ.07): ಅರಬ್ಬಿ ಸಮುದ್ರದ ಲಕ್ಷದ್ವೀಪ ಭಾಗದಲ್ಲಿ ಮೇಲೈ ಸುಳಿಗಾಳಿ ಎದ್ದಿರುವ ಹಿನ್ನೆಲೆಯಲ್ಲಿ ನ. 8 ರವರೆಗೆ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆ, ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಕಡೆಗಳಲ್ಲಿ ನ.7 ಮತ್ತು 8ರಂದು ಧಾರಾಕಾರ ಮಳೆ ಬೀಳಲಿದೆ. ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ನ.7 ಮತ್ತು 8 ದು ಸಾಮಾನ್ಯವಾಗಿ ಮಳೆಯಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ನ.10ರವರೆಗೆ ಹಾಗೂ ನ.9 ಮತ್ತು 10ರಂದು ರಾಜ್ಯದ ಎಲ್ಲ ಭಾಗಗಳಲ್ಲೂ ಒಣ ಹವೆ ಮುಂದುವರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉದ್ಯಾನ ನಗರಿ ಬೆಂಗಳೂರಲ್ಲಿ ಶೇ.17 ಅಧಿಕ ಮಳೆ ದಾಖಲೆ..!

ನ.6ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನಲ್ಲಿ ಬಹುತೇಕ ಎಲ್ಲ ಕಡೆಗಳಲ್ಲಿ ಹಿಂಗಾರು ಸುರಿದಿದೆ. ಚಾಮರಾಜನಗರ ಜಿಲ್ಲೆಯ ಬಂಡಿಪುರ 7 ಸೆ.ಮೀ, ಚಾಮರಾಜನಗರ 3, ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆಯಲ್ಲಿ 2 ಸೆಂ.ಮೀ ಮಳೆಯಾಗಿದೆ.