Asianet Suvarna News Asianet Suvarna News

ರಾಮನಗರಕ್ಕೆ ಜಲಪ್ರಳಯ: ಉಕ್ಕಿದ ಕೆರೆಗಳು, 300ಕ್ಕೂ ಹೆಚ್ಚು ಮನೆಗೆ ನೀರು

ಕಣ್ಣು ಹಾಯಿಸಿದಲ್ಲೆಲ್ಲ ನೀರೋ ನೀರು, ತುಂಬಿ ಹರಿದ ನೂರಾರು ಕೆರೆಗಳು, ನದಿಯಂತಾದ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿ ಪ್ರಮುಖ ರಸ್ತೆಗಳು, ನೀರಲ್ಲಿ ತೇಲಿದ 20ಕ್ಕೂ ಹೆಚ್ಚು ವಾಹನಗಳು, ಮುಳುಗಿದ ಎರಡು ಬಸ್‌ಗಳು, ರೈಲು ನಿಲ್ದಾಣ, ಆಸ್ಪತ್ರೆ, 300ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ನೀರು, ಸಾವಿರಾರು ಮನೆಗಳಿಗೆ ಜಲದಿಗ್ಬಂಧನ! 

Heavy Rain Lashes Ramanagara District gvd
Author
First Published Aug 30, 2022, 3:45 AM IST

ರಾಮ​ನ​ಗರ (ಆ.30): ಕಣ್ಣು ಹಾಯಿಸಿದಲ್ಲೆಲ್ಲ ನೀರೋ ನೀರು, ತುಂಬಿ ಹರಿದ ನೂರಾರು ಕೆರೆಗಳು, ನದಿಯಂತಾದ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿ ಪ್ರಮುಖ ರಸ್ತೆಗಳು, ನೀರಲ್ಲಿ ತೇಲಿದ 20ಕ್ಕೂ ಹೆಚ್ಚು ವಾಹನಗಳು, ಮುಳುಗಿದ ಎರಡು ಬಸ್‌ಗಳು, ರೈಲು ನಿಲ್ದಾಣ, ಆಸ್ಪತ್ರೆ, 300ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ನೀರು, ಸಾವಿರಾರು ಮನೆಗಳಿಗೆ ಜಲದಿಗ್ಬಂಧನ! 

ಇದು ಭಾನುವಾರ ರಾತ್ರಿಯಿಂದೀಚೆಗೆ ಸುರಿದ ಕಂಡುಕೇಳರಿಯದ ಕುಂಭದ್ರೋಣ ಮಳೆಗೆ ತತ್ತರಿಸಿದ ರಾಮನಗರ-ಚನ್ನಪಟ್ಟಣ ನಗರಗಳ ಚಿತ್ರಣ. ಏಳೆಂಟು ತಾಸು ಬಿಡದೆ ಸುರಿದ ಮಳೆಯಿಂದಾಗಿ ರಾಮನಗರ ಜಿಲ್ಲೆ ಅಕ್ಷರಶಃ ನಲುಗಿದೆ. ಈಗಾಗಲೇ ತುಂಬಿದ್ದ 100ಕ್ಕೂ ಹೆಚ್ಚು ಕೆರೆಗಳು ಕೋಡಿ ಬಿದ್ದು ಸುತ್ತಮುತ್ತಲ ಪ್ರದೇಶಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ರಾಮನಗರ-ಚನ್ನಪಟ್ಟಣದಲ್ಲಿ ಜಲಪ್ರಳಯದ ಪರಿಸ್ಥಿತಿಯೇ ನಿರ್ಮಾಣವಾಗಿತ್ತು. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಂತೂ ಅಕ್ಷರಶಃ ನದಿಯಂತಾಗಿತ್ತು. 

Ramanagara: ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ

ರಾಮನಗರ ಜಿಲ್ಲೆಯಲ್ಲಿ ಈ ಮಾರ್ಗದಲ್ಲಿ ನಿರ್ಮಿಸಲಾಗಿರುವ 14 ಅಂಡರ್‌ಪಾಸ್‌ಗಳು ನೀರಿನಲ್ಲಿ ಮುಳುಗಿ, ಕೆಲವೆಡೆ ಕಾರುಗಳೆಲ್ಲ ತೇಲಾಡುತ್ತಿದ್ದುದು ಮಹಾಮಳೆ ಸೃಷ್ಟಿಸಿದ ಅವಾಂತರಕ್ಕೆ ಸಾಕ್ಷಿಯಾಗಿತ್ತು. ರಾಮನಗರ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 35 ಮಿ.ಮೀ. ಮಳೆಯಾಗಿದ್ದು, ಇಷ್ಟೊಂದು ಮಳೆಯಾಗಿದ್ದು ಇದೇ ಮೊದಲು ಎನ್ನಲಾಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಮನಗರ, ಚನ್ನಪಟ್ಟಣ ಹಾಗೂ ಕನಕಪುರ ತಾಲೂಕಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಮುಳುಗಿದ ಬಸ್‌, ಕೊಚ್ಚಿ ಹೋದ ಕಾರು: ಬಸವನಪುರದ ಮಧುರ ಗಾರ್ಮೆಂಟ್ಸ್‌ ಬಳಿಯ ಅಂಡರ್‌ಪಾಸ್‌ನಲ್ಲಿ ಕಾರೊಂದು ಹಳ್ಳದ ನೀರಿನ ರಭಸಕ್ಕೆ ಎಲ್ಲರು ನೋಡನೋಡುತ್ತಿದ್ದಂತೆ, ಇನ್ನು ಉಳಿದೆಡೆ 2 ಬಸ್‌ಗಳು ಅಂಡರ್‌ಪಾಸ್‌ನಲ್ಲಿ ಸಿಲುಕಿ ಆತಂಕ ಸೃಷ್ಟಿಯಾಗಿತ್ತು. ಸಾರಿಗೆ ಬಸ್ಸೊಂದು ಟಿಪ್ಪುನಗರ-ಮೆಹಬೂಬ್‌ನಗರದ ರೈಲ್ವೆ ಅಂಡರ್‌ಪಾಸ್‌ನಲ್ಲಿ ಬೆಳಗ್ಗೆ 6.45ರ ವೇಳೆ ಸಿಲುಕಿ, ಅದರಲ್ಲಿದ್ದ ಪ್ರಯಾಣಿಕರನ್ನು ತಕ್ಷಣ ಕೆಳಗಿಳಿಸಿ ರಕ್ಷಿಸಲಾಯಿತು. ಆದರೆ, ನಂತರ ನೀರಿನಮಟ್ಟಹೆಚ್ಚಾಗಿ ಬಸ್‌ನೊಳಗೆ ನೀರು ನುಗ್ಗಿದ್ದು, ಈ ವೇಳೆ ಚಾಲಕ, ನಿರ್ವಾಹಕ ಹಾಗೂ ಮತ್ತೊಬ್ಬ ವೃದ್ಧ ಪ್ರಯಾಣಿಕರು ಬಸ್‌ಟಾಪ್‌ ಏರಿ ಕೂತಿದ್ದರು. ತಕ್ಷಣ ಪೊಲೀಸರು, ಅಗ್ನಿಶಾಮಕ ದಳ ಮತ್ತು ನಾಗರಿಕರ ನೆರವಿನಿಂದ ಅವರನ್ನು ರಕ್ಷಿಸಲಾಯಿತು. ಇನ್ನು ಬಿಳ​ಗುಂಬ ಅಂಡರ್‌ಪಾಸ್‌ನಲ್ಲಿ ಖಾಸಗಿ ಬಸ್‌ವೊಂದು ಬಹುತೇಕ ಮುಳುಗಿ, ಬಸ್‌ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ತುರ್ತು ನಿರ್ಗಮನ ಕಿಟಕಿ ಮೂಲಕ ಸ್ಥಳೀಯರು ರಕ್ಷಿಸಿದರು.

ಯೋಗೇ​ಶ್ವರ್‌ಗೂ ತಟ್ಟಿದ ಬಿಸಿ: ಮಹಾಮಳೆಯ ಬಿಸಿ ವಿಧಾ​ನ ಪರಿ​ಷತ್‌ ಸದಸ್ಯ ಸಿ.ಪಿ.​ಯೋ​ಗೇ​ಶ್ವರ್‌ ಅವರಿಗೂ ತಟ್ಟಿತು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿನ ಸಂಗಬಸವನದೊಡ್ಡಿ ಬಳಿ ಯೋಗೇಶ್ವರ್‌ ಕಾರು ನೀರಿನಲ್ಲಿ ಸಿಲುಕಿಕೊಂಡಿತ್ತು. ಇದರಿಂದ ಕೊನೆಗೆ ಅವರು ಮತ್ತೊಂದು ಕಾರು ತರಿಸಿಕೊಂಡು ಪ್ರಯಾಣ ಮುಂದು​ವ​ರೆ​ಸಿ​ದರು.

ಭಕ್ಷಿ ಕೆರೆ ತಂದಿಟ್ಟ ಸಂಕಷ್ಟ: ಜಿಲ್ಲೆಯ ಪ್ರಮುಖ ಕೆರೆಗಳಲ್ಲಿ ಒಂದಾದ ಭಕ್ಷಿ ಕೆರೆ ಏರಿ ಒಡೆದು ಭಾರೀ ನೀರು ಸೀರಳ್ಳದ ಮೂಲಕ ಟಿಪ್ಪು​ನ​ಗರ, ಅರ್ಕೇ​ಶ್ವರ ಕಾಲೋನಿ, ಟ್ರೂಪ್‌ಲೈನ್‌ ಬಡಾ​ವ​ಣೆ​ಯೊ​ಳಗೆ ನುಗ್ಗಿ ನೂರಾರು ಮನೆಗಳಿಗೆ ನುಗ್ಗಿತ್ತು. ಜನ ಆತಂಕದಿಂದ ತಾರಸಿ ಏರಿ​ ಕುಳಿತು ಸಹಾ​ಯಕ್ಕೆ ಕೂಗಾ​ಡಿದ್ದು, ಬೆಳಗ್ಗೆ 11ಗಂಟೆ ವೇಳೆಗೆ ಎನ್‌ಡಿಆರ್‌ಎಫ್‌ ತಂಡ ಬೋಟ್‌ನಲ್ಲಿ ಕಾರ್ಯಾ​ಚ​ರಣೆ ನಡೆಸಿ ಅವರನ್ನು ರಕ್ಷಣೆ ಮಾಡಿತು.

ದಾಖಲೆಯ ಮಳೆ: ರಾಮನಗರ ಜಿಲ್ಲೆಯಲ್ಲಿ 24 ಗಂಟೆಯಲ್ಲಿ 35 ಮಿ.ಮೀ. ಮಳೆಯಾಗಿದ್ದು, ಇದು ವಾಡಿಕೆಗಿಂತ ಹೆಚ್ಚು. ಇಷ್ಟೊಂದು ಮಳೆ ಸುರಿದಿದ್ದು ಜಿಲ್ಲೆಯಲ್ಲಿ ಇದೇ ಮೊದಲು ಎನ್ನಲಾಗಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ 71 ಮಿ.ಮೀ. ಮಳೆ ಸುರಿದಿದೆ. ಮೂರು ದಿನಗಳ ಮಳೆಗೆ 220ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಮೂರು ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿರುವ ಕುರಿತು ದೂರುಗಳು ಬಂದಿವೆ.

ಜಲಾವೃತಗೊಂಡ ಆಸ್ಪತ್ರೆ: ರಾಜ​ಕಾ​ಲುವೆ ಹಾಗೂ ಹೆದ್ದಾ​ರಿ​ಯಲ್ಲಿ ಹರಿ​ಯು​ತ್ತಿದ್ದ ಮಳೆ ನೀರು ನುಗ್ಗಿದ ಪರಿಣಾಮ ರಾಮ​ನ​ಗರ ಟೌನಿನ ರಾಮ​ಕೃಷ್ಣ ಆಸ್ಪತ್ರೆ ಸಂಪೂರ್ಣ ಜಲಾವೃತಗೊಂಡಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ರೋಗಿಗಳನ್ನು ತಕ್ಷಣ ಸ್ಥಳಾಂತರ ಮಾಡಿ ಅನಾ​ಹುತ ತಪ್ಪಿ​ಸ​ಲಾ​ಯಿ​ತು.

ಭಾರೀ ಮಳೆಗೆ ಕೊಚ್ಚಿ ಹೋದ ಸೇತುವೆಗಳು; ಸೇತುವೆ ಇಲ್ಲದೆ ಹತ್ತಾರು ಹಳ್ಳಿಗಳ ಪರದಾಟ!

ರೈಲು ನಿಲ್ದಾಣಕ್ಕೆ ನುಗ್ಗಿದ ನೀರು: ಧಾರಾಕಾರ ಮಳೆಯಿಂದಾಗಿ ರಾಮನಗರ ಹಾಗೂ ಚನ್ನಪಟ್ಟಣದ ರೈಲ್ವೆ ನಿಲ್ದಾಣಗಳಿಗೆ ನೀರು ನುಗ್ಗಿ, ಕೆಲಕಾಲ ರೈಲು ಸಂಚಾರ ಸ್ಥಗಿತಗೊಳಿಸಬೇಕಾಯಿತು. ನಿಲ್ದಾಣ, ಪ್ಲಾಟ್‌ಫಾರಂ ಸೇರಿದಂತೆ ರೈಲು ಹಳಿಗಳ ಮೇಲು ಸಾಕಷ್ಟುನೀರು ನಿಂತು ಸಮಸ್ಯೆಯಾಗಿ ಪ್ರಯಾಣಿಕರು ಪರದಾಡುವಂತಾಯಿತು.

Follow Us:
Download App:
  • android
  • ios