Asianet Suvarna News Asianet Suvarna News

ಅಕಾಲಿಕ ಮಳೆಗೆ ತತ್ತರಿಸಿದ ಕರುನಾಡು : ಅಪಾರ ಬೆಳೆ ನಷ್ಟ

ರಾಜ್ಯದಲ್ಲಿ  ಸುರಿದ ಅಪಾರ ಮಳೆಗೆ ಜನ ತತ್ತರಿಸಿದ್ದಾರೆ. ಇದರಿಂದ ಹಲವೆಡೆ ಭಾರೀ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಸಾವಿರಾರು ಎಕರೆಯಲ್ಲಿ ಬೆಳೆದ ವಿವಿಧ ಬೆಳೆಗಳು ಹಾನಿಯಾಗಿವೆ. 

Heavy Rain Lashes in Many Parts Of Karnataka snr
Author
Bengaluru, First Published Feb 21, 2021, 7:34 AM IST

ಬೆಂಗಳೂರು (ಫೆ.21):  ಕೊಡಗು, ಹಾಸನದಲ್ಲಿ ಭರ್ಜರಿ ಆಲಿಕಲ್ಲು ಸಹಿತ ರಾಜ್ಯದ 17 ಜಿಲ್ಲೆಗಳಲ್ಲಿ ಶುಕ್ರವಾರ ಸುರಿದ ಅಕಾಲಿಕ ಮಳೆಯಿಂದ ರಾಜ್ಯಾದ್ಯಂತ ಭಾರೀ ಬೆಳೆ ನಷ್ಟವಾಗಿದೆ. ಕಾಫಿ, ಕಾಳುಮೆಣಸು, ಮಾವು, ಈರುಳ್ಳಿ ಸೇರಿ 12 ಬೆಳೆಗಳಿಗೆ ಮಳೆಯಿಂದಾಗಿ ತೀವ್ರ ಹೊಡೆತಬಿದ್ದಿದ್ದು, ಕೊಡಗು, ಹಾಸನ ಎರಡೇ ಜಿಲ್ಲೆಯಲ್ಲಿ ಸುಮಾರು 700 ಎಕರೆಗೂ ಅಧಿಕ ಕಾಫಿ ಬೆಳೆ ಹಾನಿಯಾಗಿದೆ.

ಕೊಡಗಿನಲ್ಲಿ ಮನೆ, ರಸ್ತೆ, ಗದ್ದೆ, ತೋಟ ಎಲ್ಲೆಲ್ಲೂ ಆಲಿಕಲ್ಲುಗಳ ರಾಶಿ ರಾಶಿಯೇ ಬಿದ್ದಿತ್ತು. ಅಕ್ಷರಶಃ ಕಾಶ್ಮೀರದಂತೆ ಗೋಚರಿಸುತ್ತಿತ್ತು. ಈ ರೀತಿಯಾಗಿ ಅಕಾಲಿಕವಾಗಿ ಸುರಿದ ವಿಪರೀತ ಆಲಿಕಲ್ಲು ಮಳೆಯಿಂದ ಕೊಡಗು ಜಿಲ್ಲೆವೊಂದರಲ್ಲಿಯೇ ಸುಮಾರು 13 ಗ್ರಾಮಗಳಲ್ಲಿ 7 ಬೆಳೆಗಳು ನಷ್ಟಕ್ಕೆ ತುತ್ತಾಗಿವೆ. ತೋಟಗಾರಿಕಾ ಬೆಳೆಗಳಾದ ಹಸಿಮೆಣಸು ಸುಮಾರು 123 ಎಕರೆ, ಕಾಳು ಮೆಣಸು 410 ಎಕರೆ, ಬಾಳೆ 105 ಎಕರೆ, ಶುಂಠಿ 139 ಎಕರೆ, ಸಿಹಿಗೆಣಸು 112 ಎಕರೆ ಮತ್ತು 201 ಎಕರೆ ಅಡಕೆ ಬೆಳೆ ಹಾನಿಯಾಗಿದೆ. ಒಣಹಾಕಿದ್ದ ಕಾಫಿ ನೀರುಪಾಲಾಗಿದೆ, ಗಿಡದಲ್ಲಿದ್ದ ಕಾಫಿ ಹಣ್ಣುಗಳು ನೆಲಕಚ್ಚಿವೆ. ಅಂದಾಜು 500 ಎಕರೆ ಕಾಫಿ ಬೆಳೆ ಹಾನಿಯಾಗಿದೆ.

ಕೊಡಗು ಜಿಲ್ಲೆಗೆ ಹೊಂದಿಕೊಂಡಂತಿರುವ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹಾಗೂ ಕೊಣನೂರು ಹೋಬಳಿಗಳ ಕೆಲವೆಡೆ ಆಲಿಕಲ್ಲು ಮಳೆಯಾಗಿತ್ತು. ಇದರಿಂದಾಗಿ ಸುಮಾರು 200 ಎಕರೆ ಕಾಫಿ ತೋಟಕ್ಕೆ ಹಾನಿಯಾಗಿದೆ. ಸಂಪೂರ್ಣವಾಗಿ ಕಾಫಿ ಕೊಯ್ಲು ಮುಗಿದಿರಲಿಲ್ಲ. ಹೀಗಾಗಿ ಗಿಡದಲ್ಲಿದ್ದ ಕಾಫಿ ಹಣ್ಣುಗಳು ನೆಲಕಚ್ಚಿವೆ. ಶುಂಠಿ, ಜೋಳ, ಆಲುಗೆಡ್ಡೆ ಬೆಳೆಗೂ ಹಾನಿಯಾಗಿದೆ.

ರಾಜ್ಯದ ವಿವಿಧೆಡೆ ಅಕಾಲಿಕ ಮಳೆ: ಸಿಡಿಲಿಗೆ ಕಾರ್ಮಿಕ ಸಾವು ...

ರಾಜ್ಯದಲ್ಲಿ ಕಾಫಿಯನ್ನು ಅತೀ ಹೆಚ್ಚು ಬೆಳೆಯುವ ಜಿಲ್ಲೆಗಳಲ್ಲಿ ಒಂದಾಗಿರುವ ಚಿಕ್ಕಮಗಳೂರಿನಲ್ಲಿ ಕೂಡ ಅಕಾಲಿಕ ಮಳೆಯಿಂದ ಕಾಫಿ ಬೆಳೆಗೆ ಹಾನಿಯಾಗಿದೆ. ಕೆಲವೆಡೆ ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಮಳೆ ನೀರು ಪಾಲಾಗಿದೆ. ಜತೆಗೆ ಕೊನೆ ಹಂತದಲ್ಲಿ ಗಿಡದಲ್ಲಿ ಉಳಿದುಕೊಂಡಿದ್ದ ಕಾಫಿಯ ಹಣ್ಣುಗಳು ಉದುರಿವೆ. ಕಟಾವು ಮಾಡಿರುವ ಕಾಳು ಮೆಣಸು ಒಣಗಿಸಲು ಮಳೆ ಅಡ್ಡಿಯಾಗಿದೆ. ಉಳಿದಂತೆ ಚಿತ್ರದುರ್ಗದಲ್ಲಿ ಈರುಳ್ಳಿ, ಕಡಲೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಳುಮೆಣಸು, ಅಡಕೆ, ಚಾಮರಾಜನಗರ ಜಿಲ್ಲೆಯಲ್ಲಿ ಬಾಳೆ, ಈರುಳ್ಳಿ, ಅಡಿಕೆ, ಜೋಳ ಮತ್ತು ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಮಾವು, ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ.

ಮತ್ತೆ ಹಲವೆಡೆ ಮಳೆ : ಶುಕ್ರವಾರ 17 ಜಿಲ್ಲೆಗಳಲ್ಲಿ ಮಳೆ ಕಾಣಿಸಿಕೊಂಡರೆ, ಶನಿವಾರ ಬೆಂಗಳೂರು, ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಮಳೆ ಮುಂದುವರಿದಿದೆ. ತುಮಕೂರು ನಗರದಲ್ಲಿ 1 ಗಂಟೆಗಳ ಕಾಲ ಧಾರಾಕಾರವಾಗಿ ಮಳೆ ಸುರಿಯಿತು. ಮಳೆಯಿಂದಾಗಿ ರಸ್ತೆ ತುಂಬೆಲ್ಲಾ ನೀರು ಹರಿಯಿತು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ಜಿಲ್ಲೆಯಲ್ಲಿಯೂ ಸ್ವಲ್ಪ ಕಾಲ ಮಳೆ ಸುರಿಯಿತು. 

ಮಳೆ ನಿಂತರೂ ಕರಗದ ಆಲಿಕಲ್ಲು!

ಕೊಡಗು ಜಿಲ್ಲೆ ಅಂಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಭಾರಿ ಆಲಿಕಲ್ಲು ಮಳೆಯಾಗಿತ್ತು. ಶನಿವಾರ ಮಧ್ಯಾಹ್ನವರೆಗೂ ಮಂಜುಗಡ್ಡೆ ದೊಡ್ಡಗಾತ್ರದಲ್ಲಿ ಹಾಗೇ ಉಳಿದಿತ್ತು. ಆಲಿಕಲ್ಲು ನೋಡಿ ಸಂಭ್ರಮಿಸಿದ್ದ ವಿದ್ಯಾರ್ಥಿಗಳು, ಸಾರ್ವಜನಿಕರು ಈವರೆಗೆ ಇಂಥ ಮಳೆ ನೋಡಿಲ್ಲ, ಇಷ್ಟುಪ್ರಮಾಣದ ಆಲಿಕಲ್ಲು ನೋಡಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಯಾವ್ಯಾವ ಬೆಳೆ?

ಅಕಾಲಿಕವಾಗಿ ಆಲಿಕಲ್ಲು ಸಮೇತ ಬಿದ್ದ ಮಳೆಯಿಂದಾಗಿ ಕಾಫಿ, ಕಾಳುಮೆಣಸು, ಹಸಿರು ಮೆಣಸು, ಮಾವು, ಬಾಳೆ, ಅಡಿಕೆ, ಶುಂಠಿ, ಜೋಳ, ಸಿಹಿಗೆಣಸು, ಈರುಳ್ಳಿ, ಆಲೂಗಡ್ಡೆ, ದಾಕ್ಷಿ ಬೆಳೆ ಹಾನಿಯಾಗಿದೆ.

Follow Us:
Download App:
  • android
  • ios