ಬೆಂಗಳೂರಿಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಮೂರು ಗಂಟೆ ಆರೆಂಜ್ ಅಲರ್ಟ ಘೋಷಿಸಲಾಗಿದೆ. ಈಗಾಗಲೇ ನಗರದ ಹಲವೆಡೆ ಭಾರಿ ಮಳೆಯಾಗಿ ಹಲವು ರಸ್ತೆಗಳು ಜಲಾವೃತಗೊಂಡಿದೆ.
ಬೆಂಗಳೂರು (ಆ.03) ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ತುಂತುರು ಮಳೆಯಾಗುತ್ತಿದೆ. ಆದರೆ ಇಂದು ನಗರದ ಹಲವೆಡೆ ಭಾರಿ ಮಳೆಯಾಗಿದೆ. ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿಗೆ ಮುಂದಿನ ಮೂರು ಗಂಟೆ ಆರೆಂಜ್ ಅಲರ್ಟ್ ಘೋಷಿಸಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಶಿವಮೊಗ್ಗ, ಬೀದರ್, ಯಾದಗಿರಿ ಜಿಲ್ಲೆಗೆ ಅಲರ್ಟ್ ನೀಡಲಾಗಿದೆ. ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನ ಕೆಲೆವಡೆ ಸುರಿದ ಭಾರಿ ಮಳೆಗೆ ಅವಾಂತರ ಸೃಷ್ಟಿಯಾಗಿದೆ.
ಹತ್ತು ನಿಮಿಷದ ಮಳೆಗೆ ಕರೆಯಂತಾದ ಕೆ ಆರ್ ಮಾರ್ಕೆಟ್ ರಸ್ತೆ
ಬೆಂಗಳೂರಿನಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಗೆ ಹಲವು ರಸ್ತೆಗಳು ಜಲಾವೃತಗೊಂಡಿದೆ. ಹತ್ತು ನಿಮಿಷ ಸುರಿದ ಮಳೆಗೆ ಕೆಆರ್ ಮಾರ್ಕೆಟ್ ಬಹುತೇಕ ಕಡೆ ನೀರು ತುಂಬಿಕೊಂಡಿದೆ. ಬಾಲಗಂಗಾಧರ ಫ್ಲೈ ಓವರ್ ಕೆಳಗಿನ ರಸ್ತೆ ಜಲಾವೃತಗೊಂಡಿದೆ. ರಸ್ತೆ ಮೇಲೆ 2 ರಿಂದ 4 ಅಡಿಗಳಷ್ಟು ನೀರು ತುಂಬಿಕೊಂಡಿದೆ. ಫುಟ್‌ಪಾತ್ , ರಸ್ತೆಗಳ ಮೇಲೆ ನೀರು ತುಂಬಿಕೊಂಡ ಕಾರಣ ಪಾದಾಚಾರಿ, ವಾಹನ ಸವಾರರು ಪರದಾಡುವಂತಾಗಿದೆ.
ಭಾರಿ ಮಳೆ ನೀರು ಜೊತೆಗೆ ಕಸ ಕಡ್ಡಿಗಳಿಂದ ಮೋರಿ ಬ್ಲಾಕ್ ಆಗಿದೆ. ಹೀಗಾಗಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗಿಲ್ಲ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಎಸ್‌ಪಿ ರಸ್ತೆ ಕಡೆ ತೆರಳುವ ಮಾರ್ಗವೂ ಜಲಾವೃತಗೊಂಡಿದೆ. ವಾಹನ ಸವಾರರು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದ್ದಾರೆ. ಇದರಿಂದ ಮತ್ತಷ್ಟು ಜಾಮ್ ಸಂಭವಿಸಿದೆ. ಎಸ್ ಪಿ ರಸ್ತೆ,ಟೌನ್ ಹಾಲ್ ಕಡೆ ಹೋಗುವ ರಸ್ತೆಯಲ್ಲಿ ಮಳೆ ನೀರು ನಿಂತುಕೊಂಡಿದೆ.
