ಬೆಂಗಳೂರು(ಆ.18): ಮಹಾರಾಷ್ಟ್ರ ಹಾಗೂ ರಾಜ್ಯದ ಪಶ್ಟಿಮಘಟ್ಟಭಾಗದಲ್ಲಿ ಕಳೆದ ಎರಡು ಮೂರು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಅಪಾಯಮಟ್ಟಮೀರಿ ಹರಿಯುತ್ತಿದ್ದು, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ 7 ಜಿಲ್ಲೆಗಳಲ್ಲಿ ಮತ್ತೊಂದು ಮಹಾಪ್ರಳಯದ ಆತಂಕ ಶುರುವಾಗಿದೆ. ಭೋರ್ಗರೆಯುತ್ತಿರುವ ಕೃಷ್ಣಾ ಪ್ರವಾಹದಲ್ಲಿ ಸಿಲುಕಿದ ತೆಪ್ಪವೊಂದು ಮುಳುಗಿ ನಾಲ್ಕು ಮಂದಿ ನಾಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಇದೇ ಜಿಲ್ಲೆಯ ದೇವದುರ್ಗ ವ್ಯಾಪ್ತಿಯಲ್ಲಿ ಸುರಿದಿರುವ ನಿರಂತರ ಮಳೆಯಿಂದಾಗಿ ಶಿಥಿಲಗೊಂಡಿದ್ದ ಮನೆಯೊಂದರ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಬೆಳಗಾವಿಯಲ್ಲಿ ಸೋಮವಾರವೂ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಪಾಂಡ್ರಿ, ದೂಧ್‌ಗಂಗಾ, ವೇದಗಂಗಾ ಮತ್ತಿತರ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಜತೆಗೆ ಖಾನಾಪುರ ತಾಲೂಕಿನಲ್ಲಿ ಸಂಪರ್ಕ ಕಡಿತಗೊಂಡಿದ್ದ 40ಕ್ಕೂ ಅಧಿಕ ಗ್ರಾಮಗಳಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಚಿಕ್ಕೋಡಿ ತಾಲೂಕಿನಲ್ಲಿ ಏಳಕ್ಕೂ ಅಧಿಕ ಸೇತುವೆಗಳು ಮುಳುಗಡೆಯಾಗಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಘಟಪ್ರಭಾ ಡ್ಯಾಂನಿಂದ ನೀರು ಬಿಟ್ಟಕಾರಣ ಗೋಕಾಕ ನಗರ ಭಾಗಶಃ ಜಲಾವೃತಗೊಂಡಿದ್ದು 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.

ನಡುಗಡ್ಡೆಯಲ್ಲಿ ಆತಂಕ:

ಬಸವಸಾಗರ ಡ್ಯಾಂನಿಂದ ಕೃಷ್ಣಾ ನದಿಗೆ ಸುಮಾರು 2.90ಲಕ್ಷ ಕ್ಯುಸೆಕ್‌ ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಲಿಂಗಸುಗೂರಿನ ಶೀಲಹಳ್ಳಿ ಸೇತುವೆ ಈಗಾಗಲೇ ಮುಳುಗಿದ್ದರಿಂದ ನಡುಗಡ್ಡೆ ಗ್ರಾಮಗಳಾದ ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿ ಹಾಗೂ ನದಿ ದ್ವೀಪಗಳಾದ ಕರಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮಗಡಿಯ ಜನ ಬಾಹ್ಯ ಜಗತ್ತಿನ ಸಂಪರ್ಕ ಕಡಿತಗೊಂಡಿದೆ. ಮಹಿಳೆಯರು, ಮಕ್ಕಳು ಸೇರಿ ಹಲವು ಮಂದಿ ಇಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಕೃಷ್ಣೆಯ ನೀರು ನದಿತಟದ ಜಮೀನಿಗೆ ನುಗ್ಗಿದ ಪರಿಣಾಮ ಜಿಲ್ಲೆಯಲ್ಲಿ ನೂರಾರು ಎಕರೆ ಭತ್ತ, ತೊಗರಿ, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳು ನೀರುಪಾಲಾಗಿವೆ.

130 ಕುಟುಂಬ ಸ್ಥಳಾಂತರ:

ನವಿಲುತೀರ್ಥ ಅಣೆಕಟ್ಟೆಯಿಂದ 25 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿರುವುದರಿಂದ ಗದಗದ ನರಗುಂದ ತಾಲೂಕಿನ ಲಖಮಾಪುರ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ನಡುಗಡ್ಡೆಯಂತಾಗಿರುವ ಈ ಗ್ರಾಮದ ಸುಮಾರು 130 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಪರಿಹಾರ ಕೇಂದ್ರಕ್ಕೆ ತೆರಳದ ಮಂದಿ ಗ್ರಾಮದ ಎತ್ತರದ ಭಾಗದಲ್ಲಿ ರಸ್ತೆ ಮೇಲೆ ತಮ್ಮ ಟ್ರ್ಯಾಕ್ಟರ್‌ ಟ್ರೇಲರ್‌, ಚಕ್ಕಡಿಗಳಲ್ಲಿ ಕೂತು ದಿನ ಕಳೆಯುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜಿಲ್ಲೆಯ ರೋಣ, ನವಲಗುಂದ ತಾಲೂಕಿನ 32 ಗ್ರಾಮಗಳಿಗೂ ಪ್ರವಾಹದ ಆತಂಕ ಕಾಡಲಿದೆ.

ಇನ್ನು ಬಾಗಲಕೋಟೆ ಜಿಲ್ಲೆಯಲ್ಲೂ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ಅಬ್ಬರ ಮುಂದುವರಿದಿದ್ದು, 80ಕ್ಕೂ ಹೆಚ್ಚು ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ. ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆ ಆಗಿದ್ದರೂ ಅಳ್ನಾವರ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹುಲಿಕೇರಿಯ ಇಂದಿರಮ್ಮನ ಕೆರೆ ವ್ಯಾಪ್ತಿಯಲ್ಲಿ ನೆರೆಯ ಭೀತಿ ಆವರಿಸಿದೆ.

ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಶ್ಚಿಮ ಘಟ್ಟಪ್ರದೇಶದಲ್ಲಿ ಮಳೆಯಾಗುತ್ತಿರುವ ಕಾರಣ ತುಂಗಾ, ಭದ್ರಾ, ಶರಾವತಿ ನದಿ ನೀರಿನಮಟ್ಟಏರಿಕೆಯಾಗುತ್ತಿದೆ. ಈ ಮಧ್ಯೆ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡದಲ್ಲಿ ಮಳೆ ಇಳಿಮುಖವಾಗಿದ್ದು, ಉಡುಪಿ ಮತ್ತು ಉತ್ತರ ಕನ್ನಡ ಹಾಗೂ ಕೊಡಗಿನಲ್ಲಿ ಸಾಧಾರಣ ಮಳೆಯಾಗಿದೆ. ದಾವಣಗೆರೆಯಲ್ಲಿ ಜಿಟಿಜಿಟಿ ಮಳೆ ಸುರಿದಿದೆ.

ಎಲ್ಲೆಲ್ಲಿ ಏನಾಗಿದೆ?

ಬೆಳಗಾವಿ: ಉಕ್ಕಿಹರಿಯುತ್ತಿರುವ ಕೃಷ್ಣೆ, ಮಲಪ್ರಭಾ, ಗೋಕಾಕದಲ್ಲಿ 100ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ನೀರು

ಬಾಗಲಕೋಟೆ: ಕೃಷ್ಣೆ, ಮಲಪ್ರಭಾ ನದಿ ಉಕ್ಕಿಹರಿಯುತ್ತಿರುವ ಕಾರಣ 80ಕ್ಕೂ ಹೆಚ್ಚು ಹಳ್ಳಿಗಳಿಗೆ ಪ್ರವಾಹದಾತಂಕ

ಗದಗ: ನರಗುಂದ ತಾ. ಲಖಮಾಪುರ ಗ್ರಾಮ ಸಂಪೂರ್ಣ ಜಲಾವೃತ, ರೋಣ, ನವಲಗುಂದ ತಾಲೂಕಿನ 32 ಗ್ರಾಮಗಳಿಗೂ ಪ್ರವಾಹ ಭೀತಿ

ಧಾರವಾಡ: ಮಳೆ ಕಡಿಮೆಯಾಗಿದ್ದರೂ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು, ಇಂದಿರಮ್ಮನ ಕೆರೆ ವ್ಯಾಪ್ತಿ ಗ್ರಾಮಗಳಲ್ಲಿ ಪ್ರವಾಹದ ಆತಂಕ

ರಾಯಚೂರು: ಕೃಷ್ಣೆಯಲ್ಲಿ ಪ್ರವಾಹ, 7ಕ್ಕೂ ಹೆಚ್ಚು ನಡುಗಡ್ಡೆಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಮಹಿಳೆಯರು, ತೆಪ್ಪ ಮಗುಚಿ ನಾಲ್ಕು ಮಂದಿ ನಾಪತ್ತೆ