Chikkamagaluru: ಮಲೆನಾಡಿನಲ್ಲಿ ಧಾರಾಕಾರ ಮಳೆ: ಕಾಫಿ ಬೆಳೆಗಾರರಲ್ಲಿ ಹರ್ಷ
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ.
ಚಿಕ್ಕಮಗಳೂರು (ಏ.11): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ. ಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ 5.30ರ ತನಕವೂ ಒಂದೇ ಸಮನೆ ಧಾರಾಕಾರವಾಗಿ ಸುರಿದಿದ್ದು ಮಳೆ ನೀರು ರಸ್ತೆಯಲ್ಲಿ ಹರಿದಿದೆ. ಚಿಕ್ಕಮಗಳೂರು ತಾಲೂಕಿನ ಕೆರೆಮಕ್ಕಿ, ಹಂಗರವಳ್ಳಿ, ಬೈಗೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲೂ ಉತ್ತಮ ಮಳೆಯಾಗಿದೆ.
ಬಿಸಿಲ ಧಗೆಗೆ ಮಲೆನಾಡಿಗರು ಹೈರಾಣು: ಕಾಫಿನಾಡ ಮಲೆನಾಡು ಭಾಗದಲ್ಲೂ ನಿತ್ಯ 30 ರಿಂದ 35 ಡಿಗ್ರಿಯಷ್ಟು ಬಿಸಿಲಿನ ತಾಪಮಾನವಿತ್ತು. ಬಿಸಿಲ ಧಗೆಗೆ ಮಲೆನಾಡಿಗರು ಹೈರಾಣಾಗಿದ್ದರು. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣದೇವ ತಂಪೆರೆದಿದ್ದು ಮಳೆ ಕಂಡು ಮಲೆನಾಡಿಗರ ಮೊಗದಲ್ಲಿ ಮಂದಹಾಸ ಮೂಡಿದೆ. ಮಲೆನಾಡಿಗರು ಕಾಫಿ-ಅಡಿಕೆ-ಮೆಣಸು ಬೆಳೆಯನ್ನ ಉಳಿಸಿಕೊಳ್ಳಲು ಹೋರಾಡುತ್ತಿದ್ದು. ಮಲೆನಾಡಲ್ಲೂ ಬೋರ್‍ವೆಲ್‍ಗಳು ನಿಂತು ಹೋಗಿದ್ದವು. ಬೆಳೆಗಾರರು ಟ್ಯಾಂಕರ್‍ನಲ್ಲಿ ನೀರಾಯಿಸಿಕೊಂಡು ಬೆಳೆ ಉಳಿಸಿಕೊಳ್ಳೋದಕ್ಕೆ ಮುಂದಾಗಿದ್ದರು.
ಯದುವಂಶದ ಋಣ ತೀರಿಸುವ ಸಮಯ ಬಂದಿದೆ, ಪ್ರಚಾರಕ್ಕೆ ಹೋಗುತ್ತೇನೆ: ಎಚ್.ವಿಶ್ವನಾಥ್
ಸುಮಾರು ಒಂದು ಗಂಟೆ ಧಾರಾಕಾರ ಮಳೆಯಾದ ಪರಿಣಾಮ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಮಲೆನಾಡ ಕುಗ್ರಾಮಗಳಲ್ಲಿ ಜನ ಕುಡಿಯೋ ನೀರಿಗೂ ಕೂಡ ಹಾಹಾಕಾರ ಅನುಭವಿಸುತ್ತಿದ್ದರು. ನದಿ-ಹಳ್ಳ-ಕೊಳ್ಳ-ಕೆರೆ-ಕಟ್ಟೆಗಳು ನೀರಿಲ್ಲದೆ ಒಣಗಿ ನಿಂತಿವೆ. ಮೂಡಿಗೆರೆಯಂತಹಾ ಮಳೆ ತವರಲ್ಲೂ ಜನ ಕುಡಿಯೋ ನೀರಿಗೆ ಟ್ಯಾಂಕರ್ ಮೊರೆ ಹೋಗಿದ್ದರು. ಇದೀಗ, ಮಲೆನಾಡಲ್ಲಿ ಅಲ್ಲಲ್ಲೇ ಮಳೆಯಾಗಿದ್ದು ಈ ಮಳೆ ಹೀಗೆ ಸುರಿಯಲೆಂದು ಜನ ವರುಣದೇವನಲ್ಲಿ ಬೇಡಿಕೊಂಡಿದ್ದಾರೆ.