Mangaluru rains: ಮುಂಗಾರು ಮಳೆ ಪ್ರವಾಹಕ್ಕೆ ಸುಳ್ಯದಲ್ಲಿ ವ್ಯಕ್ತಿ ನೀರುಪಾಲು!

 ಕರಾವಳಿಯಲ್ಲಿ ಮುಂಗಾರು ಮಳೆಯ ಬಿರುಸು ಗುರುವಾರವೂ ಮುಂದುವರಿದಿದೆ. ದ.ಕ.ಜಿಲ್ಲೆಯಲ್ಲಿ ಭಾರಿ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ.  ಸುಳ್ಯದಲ್ಲಿ ತುಂಬಿ ಹರಿಯುತ್ತಿದ್ದ ಹೊಳೆ ದಾಟುವ ವೇಳೆ ಕೇರಳ ಮೂಲದ ವ್ಯಕ್ತಿ ಪಾಲದಿಂದ ಬಿದ್ದು ನೀರು ಪಾಲಾದ ಘಟನೆ ಸಂಭವಿಸಿದೆ. ಇದು ದ.ಕ.ಜಿಲ್ಲೆಯಲ್ಲಿ ಮುಂಗಾರು ಅಬ್ಬರಕ್ಕೆ ಸಂಭವಿಸಿದ ಮೂರನೇ ದುರಂತವಾಗಿದೆ.

Heavy rain dakshinakannada floods IMD forecast red alert today rav

ಮಂಗಳೂರು (ಜು.7):  ಕರಾವಳಿಯಲ್ಲಿ ಮುಂಗಾರು ಮಳೆಯ ಬಿರುಸು ಗುರುವಾರವೂ ಮುಂದುವರಿದಿದೆ. ದ.ಕ.ಜಿಲ್ಲೆಯಲ್ಲಿ ಭಾರಿ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ದ.ಕ.ಜಿಲ್ಲೆಯ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ತಾಲೂಕುಗಳಲ್ಲಿ ವರ್ಷಧಾರೆ ಅಬ್ಬರಿಸಿದ್ದು, ನದಿಗಳಲ್ಲಿ ನೀರಿನ ಮಟ್ಟಏರಿಕೆಯಾಗಿದೆ. ಸುಳ್ಯದಲ್ಲಿ ತುಂಬಿ ಹರಿಯುತ್ತಿದ್ದ ಹೊಳೆ ದಾಟುವ ವೇಳೆ ಕೇರಳ ಮೂಲದ ವ್ಯಕ್ತಿ ಪಾಲದಿಂದ ಬಿದ್ದು ನೀರು ಪಾಲಾದ ಘಟನೆ ಸಂಭವಿಸಿದೆ. ಇದು ದ.ಕ.ಜಿಲ್ಲೆಯಲ್ಲಿ ಮುಂಗಾರು ಅಬ್ಬರಕ್ಕೆ ಸಂಭವಿಸಿದ ಮೂರನೇ ದುರಂತವಾಗಿದೆ.

ಸುಳ್ಯದ ಅಲೆಟ್ಟಿಯ ಕೂರ್ನಡ್ಕ ಬಳಿ ಕೇರಳ ಮೂಲದ ಕೂಲಿಕಾರ್ಮಿಕ ಕಾಲು ಸಂಕದಲ್ಲಿ ಹೊಳೆ ದಾಟುತ್ತಿದ್ದಾಗ ನೀರು ಪಾಲಾಗಿದ್ದಾರೆ.

ಬುಧವಾರ ರಾತ್ರಿಯಿಂದ ಮರುದಿನ ಹಗಲು ವರೆಗೆ ನಿರಂತರ ಮಳೆಯಾಗಿದ್ದು, ಮಂಗಳೂರು, ಮೂಲ್ಕಿ ತಾಲೂಕುಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ, ಕೃಷಿ ತೋಟಗಳಿಗೆ ಹಾನಿಯಾಗಿದೆ. ಜಿಲ್ಲೆಯಾದ್ಯಂತ ಪ್ರವಾಹದ ಸ್ಥಿತಿ ತಲೆದೋರಿದೆ.

Karnataka rains: ಸಿಡಿಲು ಸಹಿತ ಗಾಳಿ ಮಳೆಗೆ ಅಪಾರ ಹಾನಿ: ಮಂಡ್ಯದಲ್ಲಿ ಜೋಡೆತ್ತುಗಳು ಬಲಿ!

ಗುರುವಾರ ಹಗಲು ಉತ್ತಮ ಮಳೆಯಾಗಿದ್ದು, ಮಂಗಳೂರಿನಲ್ಲಿ ತಗ್ಗು ಪ್ರದೇಶಗಳಿಗೆ ನೀರು ಪ್ರವೇಶಿಸಿದೆ. ಅಪರಾಹ್ನ ವೇಳೆಗೆ ಮಳೆಯ ಬಿರುಸು ತುಸು ಕಡಿಮೆಯಾದರೂ ಪದೇ ಪದೇ ಮಳೆ ಬರುತ್ತಲೇ ಇತ್ತು. ಮಂಗಳೂರು ನಗರ ಪ್ರದೇಶದಲ್ಲಿ ಅಷ್ಟಾಗಿ ಮಳೆಯ ಅಬ್ಬರ ಇಲ್ಲದಿದ್ದರೂ ಉಳಿದ ಭಾಗಗಳಲ್ಲಿ ಮಳೆ ಚಳಿ ಹಿಡಿಸಿದೆ.

ತುಂಬಿ ಹರಿದ ನದಿಗಳು:

ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ, ಬಂಟ್ವಾಳ, ಮೂಡುಬಿದಿರೆ ಸಹಿತ ಜಿಲ್ಲೆಯಾದ್ಯಂತ ನಿರಂತರವಾಗಿ ಉತ್ತಮ ಮಳೆಯಾಗಿದೆ. ಕುಮಾರಧಾರ, ನೇತ್ರಾವತಿ, ಪಯಸ್ವಿನಿ, ಪಲ್ಗುಣಿ ಮೊದಲಾದ ನದಿಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಸುರತ್ಕಲ್‌, ಬಂಟ್ವಾಳ, ಉಪ್ಪಿನಂಗಡಿ ಮೊದಲಾದ ಕಡೆ ನೆರೆ ಬರುವ ಸಾಧ್ಯತೆ ಇರುವ ಪ್ರದೇಶಗಳಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಮನೆ ಮಂದಿ ಸ್ಥಳಾಂತರ:

ಮಂಗಳೂರು ಹೊರವಲಯದ ಮೂಲ್ಕಿಯ ನಡುಗೋಡು, ಮಟ್ಟು, ಮಾನಂಪಾಡಿ, ಮೂಡುಬಿದಿರೆಯ ಬೈಲೂರಿನಲ್ಲಿ ಮನೆಗಳಿಗೆ ನೆರೆ ನೀರು ನುಗ್ಗಿದೆ. ಹೀಗಾಗಿ ಮನೆ ಮಂದಿಯನ್ನು ಅಗ್ನಿಶಾಮಕದಳ ಹಾಗೂ ಎನ್‌ಡಿಆರ್‌ಎಫ್‌ ತಂಡ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಎರಡು ಡ್ರಮ್‌ಗಳ ನಡುವೆ ಹಲಗೆ ಬಳಸಿ ಅದರ ಮೂಲಕ ನೆರೆಗೆ ಸಿಕ್ಕಿಹಾಕಿಕೊಂಡವರನ್ನು ಸ್ಥಳಾಂತರಿಸಲಾಗಿದೆ. ಈ ಪ್ರದೇಶಗಳಲ್ಲಿ ಕೃಷಿ ತೋಟಗಳು ಅಲ್ಲಲ್ಲಿ ಮುಳುಗಡೆಯಾಗಿದ್ದು, ಅಪಾರ ನಷ್ಟಸಂಭವಿಸಿದೆ. ಬಜಪೆಯ ಅದ್ಯಪಾಡಿಯಲ್ಲಿ ಮುಗೇರು ಕುದ್ರು ಪ್ರವಾಹ ನೀರಿನಿಂದ ಆವೃತ್ತವಾಗಿದೆ. ಪುತ್ತೂರಿನ ಪಡುವನ್ನೂರು ಗ್ರಾಮದ ಕನ್ನಡ್ಕದಲ್ಲಿ ಗುಡ್ಡು ಕುಸಿದು ಮನೆಗೆ ಹಾನಿ ಸಂಭವಿಸಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಬಪ್ಪನಾಡು, ಮಧೂರು ದೇವಸ್ಥಾನಕ್ಕೆ ನುಗ್ಗಿದ ನೀರು:

ಮೂಲ್ಕಿಯ ಪ್ರಸಿದ್ಧ ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಇಲ್ಲಿನ ತೀರ್ಥಕೆರೆಯ ನೀರು ಭರ್ತಿಯಾಗಿ ದೇವಸ್ಥಾನ ಪ್ರವೇಶಿಸಿದರೆ, ಕೆಲವು ಹೊತ್ತಿನ ಬಳಿಕ ನೆರೆಯ ಶಾಂಭವಿ ನದಿಯ ದಿಗ್ಭಂಧನದಿಂದಾಗಿ ಭಕ್ತರು ನೆರೆ ನೀರಿನಲ್ಲೇ ಆಗಮಿಸಿ ದೇವರ ದರ್ಶನ ಮಾಡಬೇಕಾಯಿತು. ನೆರೆಯ ಕಾಸರಗೋಡಿನ ಮಧೂರಿನಲ್ಲೂ ದೇವಸ್ಥಾನಕ್ಕೆ ಮಧುವಾಹಿನಿ ನದಿ ನೀರು ಪ್ರವೇಶಿಸಿದ್ದು, ಭಕ್ತರ ಭೇಟಿಗೆ ಸಂಕಷ್ಟಬಂದೊಂದಗಿದೆ.

ಕುಸಿದ ಶಾಲಾ ಛಾವಣಿ, ರಸ್ತೆ ಸಂಪರ್ಕ ಕಡಿತ:

ಹವಾಮಾನ ಇಲಾಖೆ ದ.ಕ.ಜಿಲ್ಲೆಯಲ್ಲಿ ಗುರುವಾರ ಆರೆಂಜ್‌ ಅಲರ್ಚ್‌ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಬೆಳಗ್ಗಿನ ಭಾರಿ ಮಳೆಗೆ ಉಳ್ಳಾಲದ ಬಳಿಯ ತಲಪಾಡಿಯಲ್ಲಿ ಖಾಸಗಿ ವಸತಿ ಶಾಲೆಯ ಆರು ಅಂತಸ್ತಿನ ಕಟ್ಟದ ಮೇಲೆ ಅಳವಡಿಸಲಾದ ಭಾರಿ ಗಾತ್ರದ ಶೀಟ್‌ ಛಾವಣಿ ಧರಾಶಾಹಿಯಾಗಿದೆ. ಶಾಲೆಗೆ ರಜೆ ಇದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸೇತುವೆ ಮೇಲೆ ನೀರು:

ಪುತ್ತೂರಿನ ಚೆಲ್ಯಡ್ಕದಲ್ಲಿ ಸೇತುವೆ ಮೇಲೆ ನೀರು ಬಂದು ದೇವಸ್ಯ-ಪಾಣಾಜೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ಸೇತುವೆ ಬಹಳ ತಗ್ಗಿನಲ್ಲಿದ್ದು, ಸಾಧಾರಣ ಮಳೆಗೆ ಇದು ಮುಳುಗಡೆಯಾಗುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ಸೇತುವೆ ಮೇಲೆ ಪ್ರವಾಹ ಉಕ್ಕೇರುವುದು ಸಾಮಾನ್ಯ. ಸುಳ್ಯದ ಕಲ್ಲಪಳ್ಳಿಯಲ್ಲಿ ಗುಡ್ಡ ಕುಸಿದು ಮಾನಿನಕಟ್ಟೆ-ಮಂಡೆಕೋಲು ರಸ್ತೆ ಸಂಪರ್ಕ ಕಡಿತಗೊಂಡಿದೆ. ಪುತ್ತೂರಿನ ಪಡೀಲಿನಲ್ಲಿ ಗುಡ್ಡ ಕುಸಿದಿದೆ.

ಮಂಗಳೂರಿನ ಕದ್ರಿಯಲ್ಲಿ ರಸ್ತೆಗೆ ಮರ ಬಿದ್ದಿದೆ. ಪಾಣೆಮಂಗಳೂರಿನ ಬೋಳಂಗಡಿಯಲ್ಲಿ ಸಂಪರ್ಕ ರಸ್ತೆ ಕುಸಿದು ಮನೆಗಳು ಅಪಾಯದ ಅಂಚಿನಲ್ಲಿವೆ. ಗುರುಪುರ-ಕೈಕಂಬದಲ್ಲಿ ರಸ್ತೆ ಕುಸಿದು ಅಡ್ಡೂರು ಸಂಪರ್ಕ ಆತಂಕದಲ್ಲಿದೆ. ಬುಧವಾರ ರಾತ್ರಿ ರಸ್ತೆ ಕುಸಿದಿದ್ದು, ಸಂಚಾರ ಅಪಾಯವನ್ನು ಆಹ್ವಾನಿಸುತ್ತಿದೆ. ಕಲ್ಲಡ್ಕ-ವಿಟ್ಲ ರಸ್ತೆಯ ವೀರಕಂಭದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ರಸ್ತೆಗೆ ಬಿದ್ದ ಮಣ್ಣನ್ನು ತೆರವು ಕಾರ್ಯ ನಡೆಸಲಾಗಿದೆ. ಮಾಣಿ-ಮೈಸೂರು ರಸ್ತೆಯ ಕೊಡಾಜೆಯಲ್ಲಿ ಬೃಹತ್‌ ಮರ ರಸ್ತೆ ಬದಿ ಬಿದ್ದು ನಿಲ್ಲಿಸಿದ್ದ ಆಮ್ನಿ ಕಾರು ನಜ್ಜುಗುಜ್ಜಾಗಿದೆ. ಮಂಗಳೂರಿನ ಲೋಬೋ ಲೇನ್‌ನಲ್ಲಿ ಕಾಮಗಾರಿ ಅಪೂರ್ಣಗೊಂಡ ಕಾರಣ ರಸ್ತೆಯಲ್ಲಿ ನೆರೆ ನೀರು ಸಂಗ್ರಹವಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು.

ಮಂಗಳೂರು ನಗರದಲ್ಲಿ ಬಹುತೇಕ ಕಾಮಗಾರಿಗಳು ನಡೆಯುತ್ತಿದ್ದು, ತಂದು ಹಾಕಲಾಗಿದ್ದ ಮರಳು ಹಾಗು ಜಲ್ಲಿ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದೆ. ನಗರದಲ್ಲಿ ಜನ ಸಂಚಾರ ವಿರಳವಾಗಿತ್ತು. ಚರಂಡಿ ವ್ಯವಸ್ಥೆ ಇಲ್ಲದ ವಿವಿಧ ಕಡೆ ರಸ್ತೆಯಲ್ಲೇ ತೋಡಿನಂತೆ ನೀರು ಹರಿದು ಹೋಗುವ ದೃಶ್ಯ ಕಂಡು ಬಂತು.

ಸಮುದ್ರದ ಅಬ್ಬರ ಹೆಚ್ಚಳ

ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಉಳ್ಳಾಲ, ಸುರತ್ಕಲ್‌ ಭಾಗದಲ್ಲಿ ಬೃಹತ್‌ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಉಳ್ಳಾಲ ಭಾಗದಲ್ಲಿ ಸಮುದ್ರ ಅಂಚಿನಲ್ಲಿರುವ ಹಲವು ಮನೆಗಳು ಅಪಾಯದಂಚಿನಲ್ಲಿವೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ಹಿನ್ನೆಲೆಯಲ್ಲಿ ನಾಡದೋಣಿ ಮೀನುಗಾರರು ಸಮುದ್ರಕ್ಕಿಳಿದಿಲ್ಲ. ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ಗೃಹರಕ್ಷಕದಳದ ಸಿಬಂದಿ ಎಲ್ಲ ಬೀಚ್‌ಗಳಲ್ಲಿ ಎಚ್ಚರ ವಹಿಸಿದ್ದಾರೆ.

ತೋಟಬೆಂಗ್ರೆ 80ಕ್ಕೂ ಅಧಿಕ ಮನೆ ಜಲಾವೃತ

ನಗರದ ಹೊರವಲಯದ ತೋಟಬೆಂಗ್ರೆಯಲ್ಲಿ ಗುರುವಾರ ಸುರಿದ ಭಾರಿ ಮಳೆಗೆ 80ಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ. 12 ಮನೆಗಳ ಒಳಗೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳಿಗೆ ಹಾನಿ ಉಂಟಾಗಿದೆ. ಸುಮಾರು 80 ಮಂದಿಯನ್ನು ಬೆಂಗ್ರೆ ಮಹಾಜನಾ ಸಭಾದ ಕಟ್ಟಡದಲ್ಲಿ ತೆರೆಯಲಾಗಿರುವ ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮನೆಗಳ ಸುತ್ತ ಸುಮಾರು 4 ಅಡಿಗಳಷ್ಟುನೀರು ನಿಂತಿದ್ದು, ನಿರಂತರ ಮಳೆಯಾಗುತ್ತಿರುವುದರಿಂದ ನೀರಿನ ಮಟ್ಟಕಡಿಮೆಯಾಗುತ್ತಿಲ್ಲ. ಮಳೆ ಸಂಪೂರ್ಣ ಕಡಿಮೆಯಾದರೆ ಮೂರ್ನಾಲ್ಕು ತಾಸುಗಳಲ್ಲಿ ಹರಿದು ಹೋಗಬಹುದು ಎಂದು ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ.

ಕೂಳೂರು, ಕೊಟ್ಟಾರ ಪರಿಸರದಲ್ಲಿ ತಗ್ಗು ಪ್ರದೇಶಗಳು ಮತ್ತೆ ಜಲಾವೃತಗೊಂಡಿವೆ. ಫಲ್ಗುಣಿ ನದಿಯ ಬದಿಯಲ್ಲಿರುವ ಮನೆಗಳಿಗೆ ನೀರು ಬಂದು ಜಲಾವೃತಗೊಂಡಿದೆ. ಮನೆಯಿಂದ ಹೊರಗೆ ಹೋಗಲು ಕೆಲವು ಕಡೆ ರಬ್ಬರ್‌ ಬೋಟ್‌ಗಳನ್ನು ಬಳಸಲಾಯಿತು.

ಮೂಡುಬಿದಿರೆ ಗರಿಷ್ಠ ಮಳೆ, ಇಂದು ರೆಡ್‌ ಅಲರ್ಟ್

ಭಾರತೀಯ ಹವಾಮಾನ ಇಲಾಖೆ ಪ್ರಕಾರ ಜು.7ರಂದು ಕರಾವಳಿಯಾದ್ಯಂತ ರೆಡ್‌ ಅಲರ್ಚ್‌ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲೂ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಜು.8ರಂದು ಆರೆಂಜ್‌ ಅಲರ್ಚ್‌ ಹಾಗೂ ಜು.9 ಮತ್ತು 10ರಂದು ಯೆಲ್ಲೋ ಅಲರ್ಚ್‌ ಹೇಳಲಾಗಿದೆ.

ಖಾಸಗಿ ವಿದ್ಯಾಸಂಸ್ಥೆಯ ಬೃಹತ್‌ ಮೇಲ್ಛಾವಣಿ ಕುಸಿತ; ವಾಹನಗಳು ಜಖಂ

ಉಳ್ಳಾಲ: ಭಾರಿ ಮಳೆಗೆ ತಲಪಾಡಿ ಖಾಸಗಿ ಶಿಕ್ಷಣ ಸಂಸ್ಥೆಯ ಬೃಹತ್‌ ಮೇಲ್ಛಾವಣಿ ಕುಸಿದುಬಿದ್ದು, ಹಲವು ವಾಹನಗಳು ಜಖಂ ಆಗಿವೆ. ರಜೆಯಿದ್ದ ಕಾರಣ ವಿದ್ಯಾರ್ಥಿಗಳು ಬಾರದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

 

ಚಿಕ್ಕಮಗಳೂರಲ್ಲಿ ವರುಣನ ಅಬ್ಬರಕ್ಕೆ ಧರೆಗುರುಳಿದ ಮರಗಳು: ಮುಂದಿನ 3 ದಿನ ಭಾರೀ ಮಳೆ..!

ದೇವಿನಗರದ ಶಾರದಾ ವಿದ್ಯಾಲಯದ ಕ್ಯಾಂಪಸ್‌ ಒಳಗಿನ ಆರು ಅಂತಸ್ತಿನ ಶಾಲಾ ಕಟ್ಟಡದ ಮೇಲೆ ಇತ್ತೀಚೆಗೆ ಅಳವಡಿಸಲಾಗಿದ್ದ ಭಾರೀ ಗಾತ್ರದ ಶೀಟ್‌ ಛಾವಣಿ ಉರುಳಿ ಕೆಳಗೆ ಬಿದ್ದಿದೆ. ಶೀಟ್‌ ಅಳವಡಿಸಲು ಹಾಕಲಾಗಿದ್ದ ಭಾರೀ ಗಾತ್ರದ ಕಬ್ಬಿಣದ ಸಲಾಕೆಗಳು ಕೆಳಗೆ ಉರುಳಿ ಬಿದ್ದು ಅನೇಕ ವಾಹನಗಳು ಜಖಂಗೊಂಡಿವೆ.

Latest Videos
Follow Us:
Download App:
  • android
  • ios