ಬೆಂಗಳೂರು (ಅ.22): ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆ ಗುರುವಾರ ಕೂಡ ರಾಜ್ಯದ ವಿವಿಧೆಡೆ ಮುಂದುವರಿದಿದೆ. ಬಳ್ಳಾರಿ, ಗದಗದಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಕೆಲವು ಮನೆಗಳು ಕುಸಿದು ಬಿದ್ದಿವೆ. ರಾಯಚೂರಲ್ಲಿ ಮನೆ ಕುಸಿದು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಭೀಮಾ ಪ್ರವಾಹ ಇಳಿಮುಖವಾಗಿದ್ದರೂ ಕೂಡ ಜನಜೀವನ ಸಹಜ ಸ್ಥಿತಿಗೆ ಬಂದಿಲ್ಲ.

ಬಳ್ಳಾರಿ ತಾಲೂಕಿನಲ್ಲಿ ಸುಮಾರು ಎರಡು ತಾಸಿಗೂ ಹೆಚ್ಚು ಹೊತ್ತು ಧಾರಾಕಾರ ಮಳೆ ಸುರಿಯಿತು. ಸಿರುಗುಪ್ಪ ತಾಲೂಕಿನಲ್ಲಿ ಮಂಗಳವಾರ ರಾತ್ರಿ 10ಕ್ಕೂ ಹೆಚ್ಚು ಮನೆಗಳ ಗೋಡೆಗಳು ಬಿದ್ದಿದೆ.

‘ಮಹಾಮಳೆ’ಗೆ ತೊಯ್ದು ತೊಪ್ಪೆಯಾದ ಬೆಂಗ್ಳೂರು: 23 ವರ್ಷದ 3ನೇ ಮಹಾಮಳೆ

ಗದಗ ಜಿಲ್ಲಾದ್ಯಂತ ಮಂಗಳವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ 220ಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾಗಿದೆ. ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಸಾರಿಗೆ ಬಸ್‌ ರಸ್ತೆಯಲ್ಲಿಯೇ ಸಿಲುಕಿಕೊಂಡ ಘಟನೆ ನಡೆದಿದೆ. ಹುಬ್ಬಳ್ಳಿಯಲ್ಲಿ ಸುರಿದ ಮಳೆಯಿಂದಾಗಿ 60ಕ್ಕೂ ಹೆಚ್ಚ ಮನೆಗಳ ಭಾಗಶಃ ಕುಸಿದಿವೆ. ಹಾವೇರಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಬಿದ್ದ ಭಾರೀ ಮಳೆಗೆ ಹೊಲಗದ್ದೆಗಳಲ್ಲಿ ನೀರು ನಿಂತಿದ್ದು, ಕಟಾವು ಹಂತದಲ್ಲಿರುವ ಶೇಂಗಾ ಬೆಳೆ ಸಂಪೂರ್ಣ ನೀರುಪಾಲಾಗಿದೆ.

ಮಂಗಳವಾರ ಸಂಜೆ ಹಾಗೂ ರಾತ್ರಿ ಸುರಿದ ಅಬ್ಬರದ ಮಳೆಗೆ ಬೆಂಗಳೂರು ಅಕ್ಷರಶಃ ನಲುಗಿತು. ಕೆರೆ, ರಾಜಕಾಲುವೆ, ರಸ್ತೆಗಳು, ಅಂಡರ್‌ ಪಾಸ್‌ಗಳು, ಬಡಾವಣೆಗಳು ತುಂಬಿ ಕೆರೆಯಂತಾಗಿದ್ದವು. ನೂರಾರು ಮನೆಗಳು, ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿತ್ತು. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಇಡೀ ರಾತ್ರಿ ಜಾಗರಣೆ ಮಾಡಿದರು.