ಕಳೆದೆರಡು ದಿನಗಳಿಂದ ನಗರದಲ್ಲಿ ಬಿಡುವು ಪಡೆದುಕೊಂಡಿದ್ದ ಮಳೆರಾಯ ಇಂದಿನಿಂದ ಮತ್ತೆ ಮಳೆ ಅಬ್ಬರ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು (ಜು.31) : ಕಳೆದೆರಡು ದಿನಗಳಿಂದ ನಗರದಲ್ಲಿ ಬಿಡುವು ಪಡೆದುಕೊಂಡಿದ್ದ ಮಳೆರಾಯ ಇಂದಿನಿಂದ ಮತ್ತೆ ಮಳೆ ಅಬ್ಬರ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಇನ್ನೆರಡು ದಿನ ಬಹುತೇಕ ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನಲ್ಲಿ ಮಳೆ ಮತ್ತೆ ಅರ್ಭಟಿಸಲಿದೆ. ಕರಾವಳಿ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಮಳೆ ಸಾಧ್ಯತೆಯಾಗಲಿದೆ. ಗಂಟೆಗೆ 30-4೦ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮತ್ತೆ ಮಳೆ ಅಬ್ಬರ ಸಾಧ್ಯತೆ: ಕರಾವಳಿಗೆ ಯೆಲ್ಲೋ ಅಲರ್ಟ್‌

ಆ.3ರಿಂದ ಮಳೆ ಇಳಿಕೆ, ಆ.17ರ ಬಳಿಕ ಎಲ್‌ನಿನೋ: ಮಳೆ ಬಂದ್‌?

ರಾಜ್ಯದಲ್ಲಿ ಆಗಸ್ಟ್‌ 3ರಿಂದ ಒಂದು ವಾರ ಮಳೆಯ ಪ್ರಮಾಣ ಇನ್ನಷ್ಟುಕಡಿಮೆಯಾಗಲಿದೆ. ಕಳೆದ 10 ದಿನದಿಂದ ರಾಜ್ಯಾದ್ಯಂತ ಧಾರಾಕಾರವಾಗಿ ಸುರಿದ ಮಳೆ ಕಳೆದ ಎರಡು ದಿನದಿಂದ ಕಡಿಮೆಯಾಗಿದೆ. ಮುಂದಿನ ಎರಡ್ಮೂರು ದಿನವೂ ಇದೇ ವಾತಾವರಣ ಇರಲಿದೆ. ಆದರೆ, ಆಗಸ್ಟ್‌ 3ರಿಂದ 9ವರೆಗೆ ರಾಜ್ಯದಲ್ಲಿ ಮಳೆ ಪ್ರಮಾಣ ಬಹುತೇಕ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಬಂಗಾಳ ಕೊಲ್ಲಿಯಲ್ಲಿ ಮಳೆ ಮಾರುತಗಳು ಉತ್ತರಕ್ಕೆ ಚಲಿಸುತ್ತಿರುವುದರಿಂದ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ. ಆಗಸ್ಟ್‌ 3 ಮತ್ತು 4ರಂದು ಕರಾವಳಿ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಚ್‌’ಎಚ್ಚರಿಕೆ ನೀಡಲಾಗಿದೆ. ಆಗಸ್ಟ್‌ 11ರಿಂದ 17ವರೆಗೆ ರಾಜ್ಯದಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಲಿದೆ. ನಂತರ ಮಳೆ ಮಾರುತಗಳಿಗೆ ತಡೆಯೊಡ್ಡುವ ಎಲ್‌ನಿನೋ ಆಗಮಿಸಲಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ 5 ಜಿಲ್ಲೆಗಳಲ್ಲಿ ಭಾರೀ ಮಳೆ

ಎಲ್ಲೆಲ್ಲಿ ಎಷ್ಟು ಮಳೆ?

ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಮಂಕಿಯಲ್ಲಿ 4 ಸೆಂ.ಮೀ. ಮಳೆಯಾಗಿದೆ. ಮಾಣಿ, ಪುತ್ತೂರು, ಧರ್ಮಸ್ಥಳ, ಕ್ಯಾಸಲ್‌ ರಾಕ್‌ನಲ್ಲಿ ತಲಾ 3, ಕುಂದಾಪುರ, ಸಿದ್ದಾಪುರ, ಕೊಲ್ಲೂರು, ಗೇರುಸೊಪ್ಪ, ಅಂಕೋಲಾ, ಶಿರಾಲಿ, ಮಂಗಳೂರು ವಿಮಾನ ನಿಲ್ದಾಣ, ಲಿಂಗನಮಕ್ಕಿ ಹಾಗೂ ಶೃಂಗೇರಿಯಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ.