ರಾಜ್ಯದ ಅಲ್ಫಾನ್ಸೋ, ಮಲ್ಲಿಕಾ, ಬಂಗನಪಲ್ಲಿ, ಬಾದಾಮಿ ಸೇರಿದಂತೆ ವಿವಿಧ ಮಾವಿನ ತಳಿಯ 100 ಟನ್‌ಗೂ ಅಧಿಕ ಹಣ್ಣುಗಳು ಬಾಂಗ್ಲಾದೇಶ, ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ರಫ್ತಾಗಲಿವೆ.

ಬೆಂಗಳೂರು (ಏ.25) : ರಾಜ್ಯದ ಅಲ್ಫಾನ್ಸೋ, ಮಲ್ಲಿಕಾ, ಬಂಗನಪಲ್ಲಿ, ಬಾದಾಮಿ ಸೇರಿದಂತೆ ವಿವಿಧ ಮಾವಿನ ತಳಿಯ 100 ಟನ್‌ಗೂ ಅಧಿಕ ಹಣ್ಣುಗಳು ಬಾಂಗ್ಲಾದೇಶ, ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ರಫ್ತಾಗಲಿವೆ.

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆನಿಗಮದ ವತಿಯಿಂದ ಚಿಂತಾಮಣಿಯ ಮಾಡಿಕೆರೆಯಲ್ಲಿ ನಿರ್ಮಿಸಲಾಗಿರುವ ಪ್ಯಾಕ್‌ಹೌಸ್‌ ಮೂಲಕ ಮಾವಿನ ಹಣ್ಣು ರಫ್ತಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ವಿದೇಶಕ್ಕೆ ಮಾವು ರಫ್ತು ಮಾಡಲಾಗಿರಲಿಲ್ಲ. ಈ ಬಾರಿ ಗಲ್‌್ಫ ರಾಷ್ಟ್ರಗಳು, ಸಿಂಗಾಪುರ, ಲಂಡನ್‌, ಅಮೆರಿಕಾ, ಬಾಂಗ್ಲಾದೇಶ ಸೇರಿದಂತೆ ಮತ್ತಿತರ ರಾಷ್ಟ್ರಗಳಿಗೆ ರಫ್ತಿಗೆ ಯೋಗ್ಯವಾದ ಮಾವು ಮತ್ತು ಸಂಸ್ಕರಿತ ಹಣ್ಣಿನ ಪಲ್ಪ್‌ ಕೂಡ ರಫಾಗಲಿದೆ ಎಂದು ಮಾವು ಅಭಿವೃದ್ಧಿ ನಿಗಮ ತಿಳಿಸಿದೆ.

Mangoes On EMI: ರಸಭರಿತ ಮಾವಿನ ಹಣ್ಣು ಈಗ್ಲೇ ತಿನ್ನಿ, ಆಮೇಲೆ ಪಾವತಿಸಿ!

ಜೊತೆಗೆ ಕೆಪೆಕ್‌ ಸಂಸ್ಥೆಯು ಪೂಜನಹಳ್ಳಿಯಲ್ಲಿ ನಿರ್ಮಿಸಿರುವ ಪ್ಯಾಕ್‌ಹೌಸ್‌ ಮೂಲಕವೂ ಸಹಸ್ರಾರು ಟನ್‌ ಮಾವು ಮತ್ತು ಮಾವಿನ ಪಲ್ಪ್‌ ರಫ್ತು ಮಾಡಲು ಯೋಜಿಸಲಾಗಿದೆ. ಈಗಾಗಲೇ ಕೆಪೆಕ್‌ ಸಂಸ್ಥೆಯ ಪ್ಯಾಕ್‌ಹೌಸ್‌ನಲ್ಲಿ ವಿವಿಧ ಪ್ಯಾಕಿಂಗ್‌ ಪ್ರಕ್ರಿಯೆಯನ್ನು ತಾಂತ್ರಿಕ ತಜ್ಞರ ನಿಯೋಗ ಪರಿಶೀಲನೆ ನಡೆಸುತ್ತಿದೆ. ಮೇ ತಿಂಗಳ ಮೊದಲ ಅಥವಾ ಎರಡನೇ ವಾರದಿಂದಲೇ ಉತ್ತಮ ಮಾವು ಫಸಲು ಮಾರುಕಟ್ಟೆಪ್ರವೇಶಿಸಲಿದ್ದು, ರಫ್ತು ಪ್ರಾರಂಭಗೊಳ್ಳುವ ಸಾಧ್ಯತೆ ಇದೆ ಕೆಪೆಕ್‌ನ ಆಹಾರ ಸಂಸ್ಕರಣೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

‘ನಾವು ಕಳೆದ ತಿಂಗಳು ಫ್ರಾನ್ಸ್‌ಗೆ 400 ಕೆ.ಜಿ ಮಾವಿನ ಹಣ್ಣುಗಳ ಸ್ಯಾಂಪಲ್‌ ಕಳುಹಿಸಿದ್ದೆವು. ಇದೀಗ 100 ಟನ್‌ಗೂ ಅಧಿಕ ಮಾವಿಗೆ ಬೇಡಿಕೆ ಇದ್ದು, ಚಿಂತಾಮಣಿಯ ಮಾಡಿಕೆರೆ ಪ್ಯಾಕ್‌ಹೌಸ್‌ನಿಂದ ರಫ್ತು ಮಾಡಲಾಗುವುದು. ಬಾದಾಮಿ, ಮಲ್ಲಿಕಾ, ಬಂಗನಪಲ್ಲಿ ಮತ್ತಿತರ ಹಣ್ಣುಗಳನ್ನು ಕಳುಹಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ನಾಗರಾಜ್‌ ತಿಳಿಸಿದರು.

ಹೆಚ್ಚು ಇಳುವರಿ ಇಲ್ಲ:

ಈ ವರ್ಷ ಮಾವು ಏರು ಹಂಗಾಮು ಮಾದರಿಯಲ್ಲೇ ಅತೀ ಹೆಚ್ಚು ಹೂವು ಬಿಟ್ಟಿತ್ತು. ನಾವು ಕೂಡ ಹೆಚ್ಚಿನ ಪ್ರಮಾಣದಲ್ಲಿ ಹೊರರಾಷ್ಟ್ರಗಳಿಗೆ ರಫ್ತು ಮಾಡಬಹುದು ಎಂದುಕೊಂಡಿದ್ದೆವು. ಆದರೆ ಕಳೆದ ತಿಂಗಳು ಸುರಿದ ಅಕಾಲಿಕ ಮಳೆಯಿಂದ ಹೂವು ಉದುರಿ ಹೋಯಿತು. ಅಷ್ಟೇ ಅಲ್ಲ, ಉಳಿದ ಹೂವು ಕಾಯಿ ಬಿಟ್ಟಿದ್ದರೂ, ಬಿಸಿಲ ಝಳಕ್ಕೆ ಉದುರುತ್ತಿವೆ. ಹೀಗಾಗಿ ಏರು ಹಂಗಾಮಿನ ಬೆಳೆ ಇಳಿ ಹಂಗಾಮಾ ಆಗಿದೆ. ಹೀಗಾಗಿ ಮಾರುಕಟ್ಟೆಯಲ್ಲೂ ಮಾವಿನ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ನಾಗರಾಜ್‌ ಮಾಹಿತಿ ನೀಡಿದರು.

ಮ್ಯಾಂಗೋ ಪ್ರಿಯರಿಗೆ ಸಿಹಿ ಸುದ್ದಿ..ಅಂಚೆ ಮೂಲಕ ಮನೆಬಾಗಿಲಿಗೆ ರಸಭರಿತ ಮಾವು

8 ಲಕ್ಷ ಟನ್‌ ಮಾವು ಉತ್ಪಾದನೆ!

ಪ್ರಸ್ತುತ ಕರ್ನಾಟಕದಲ್ಲಿ 1.9 ಲಕ್ಷ ಹೆಕ್ಟೇರ್‌ನಲ್ಲಿ ಮಾವು ಬೆಳೆ ಇದೆ. ಏರು ಹಂಗಾಮಿನಲ್ಲಿ ಸುಮಾರು 12-15 ಲಕ್ಷ ಟನ್‌ ಹಾಗೂ ಇಳಿ ಹಂಗಾಮಿನಲ್ಲಿ 7-8 ಲಕ್ಷ ಟನ್‌ ಹಣ್ಣು ಉತ್ಪಾದನೆಯಾಗುತ್ತದೆ. ರಾಜ್ಯದಲ್ಲಿ ಮುಖ್ಯವಾಗಿ ಮೂರು ಮಾವು ಬೆಳೆ ವಲಯಗಳಿವೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳನ್ನು ಒಂದನೇ ವಲಯ ಎಂದು ಗುರುತಿಸಲಾಗಿದೆ. ಈ ವಲಯದಲ್ಲಿ ಶೇ.75 ರಷ್ಟಮಾವು ಬೆಳೆಯಲಾಗುತ್ತದೆ. ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಹಾವೇರಿ ಎರಡನೇ ವಲಯ(ಶೇ.20) ಹಾಗೂ ಬೀದರ್‌, ಕೊಪ್ಪಳ, ಬಾಗಲಕೋಟ, ಚಿತ್ರದುರ್ಗ, ರಾಣೆಬೆನ್ನೂರು, ದಾವಣಗೆರೆ ಮೂರನೇ ವಲಯಕ್ಕೆ ಸೇರುವ ಬಿಡಿ ಪ್ರದೇಶಗಳು. ಇಲ್ಲಿ ಶೇ.5ರಷ್ಟುಮಾವು ಬೆಳೆಯಲಾಗುತ್ತಿದೆ.