ಬೆಂಗಳೂರು, (ಜ.02): ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ 10 ಮಂದಿಗೆ ಹೊಸ ಮಾದರಿಯ ಸೋಂಕು ಕಾಣಿಸಿಕೊಂಡಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಇಂದು (ಶನಿವಾರ) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರೂಪಾಂತರ ವೈರಸ್‌ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಬ್ರಿಟನ್‍ನಿಂದ ಆಗಮಿಸಿದ್ದ 42 ಜನರಿಗೆ ಆರ್‌ಟಿಪಿಸಿಆರ್ ನಡೆಸಲಾಗಿದ್ದು, ಇದರಲ್ಲಿ 32 ಮಂದಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ಹೊಸ ಮಾದರಿಯ 10 ಮಂದಿಗೆ ರೂಪಾಂತರಿ ಸೋಂಕು ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಎರಡನೇ ಹಂತದ ಕೊರೋನಾ ಆತಂಕ, ಒಂಭತ್ತು ವಿದ್ಯಾರ್ಥಿಗಳಲ್ಲಿ ಸೋಂಕು!

ಒಟ್ಟು 42 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಎಲ್ಲರೂ ಆರೋಗ್ಯವಿದ್ದು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಎಲ್ಲರನ್ನು ನಿಗದಿಪಡಿಸಿದ ಆಸ್ಪತ್ರೆಯಲ್ಲೇ ಚಿಕಿತ್ಸೆಗೊಳಪಡಿಸಲಾಗಿದೆ. ಯಾರಿಗೂ ತೀವ್ರತರವಾದ ಸೋಂಕು ಆವರಿಸಿಲ್ಲ. ಸಾರ್ವಜನಿಕರು ಆತಂಕ ಪಡಬಾರದು ಎಂದು ಮನವಿ ಮಾಡಿದರು.

ಕೊರೋನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯು ರಾಜ್ಯದಲ್ಲಿ ಹೆಚ್ಚಾಗುತ್ತಿದೆ. 10 ಸಾವಿರ ಮಾತ್ರ ನಮ್ಮಲ್ಲಿ ಆ್ಯಕ್ಟಿವ್ ಫಂಕ್ಷನ್ ಆಗಿರುವುದು. 12 ಲಕ್ಷ ಜನ ಈಗಾಗಲೆ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಸುಧಾಕರ್ ಮಾಹಿತಿ ನೀಡಿದರು.