ಬೆಂಗಳೂರು (ಆ.24):  ಸ್ಟಿರಾಯ್ಡ್‌ಗಳ ಬಳಕೆಯ ಹೊರತಾಗಿಯೂ ಆರೋಗ್ಯ ಸುಧಾರಿಸದ ಮಧ್ಯಮ ಅಥವಾ ಸಾಧಾರಣ ಲಕ್ಷಣಗಳಿರುವ ಕೊರೋನಾ ಸೋಂಕಿತರನ್ನು ಪ್ಲಾಸ್ಮಾ ಚಿಕಿತ್ಸೆಗೆ ಪರಿಗಣಿಸಬಹುದು ಎಂದು ರಾಜ್ಯ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕೇಂದ್ರ ಆರೋಗ್ಯ ಇಲಾಖೆಯ ಸರ್ಕಾರದ ಮಾರ್ಗಸೂಚಿಯ ಅನುಸಾರ ಈ ಸುತ್ತೋಲೆ ಹೊರಡಿಸಲಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಸ್ವಾಭಾವಿಕ ಪ್ಲಾಸ್ಮಾವನ್ನು ಲೇಬಲ್‌ ರಹಿತವಾಗಿ ಬಳಕೆ ಮಾಡಬಹುದು. ಈ ವೇಳೆ ರೋಗಿಗೆ ದಾನಿಯ ರಕ್ತದ ಗುಂಪು ಹಾಗೂ ಪ್ಲಾಸ್ಮಾ ಹೊಂದಾಣಿಕೆ ಆಗಲಿದೆಯೇ, ದಾನಿಗೆ ಅಲರ್ಜಿ ಸೇರಿದಂತೆ ಪ್ಲಾಸ್ಮಾ ಥೆರಫಿಯಿಂದ ರೋಗಿಗೆ ಯಾವುದೇ ಅಡ್ಡ ಪರಿಣಾಮಗಳಾಗಬಹುದಾದ ಅಂಶಗಳ ಬಗ್ಗೆ ಚಿಕಿತ್ಸೆಗೂ ಮುನ್ನ ಮೇಲ್ವಿಚಾರಣೆ ಮಾಡಬೇಕು. ಪ್ರತಿ ಕೋವಿಡ್‌ ರೋಗಿಗೂ ನೀಡುವ ಪ್ಲಾಸ್ಮಾ ಡೋಸ್‌ನಲ್ಲಿ ಪ್ರತಿ ಕೆ.ಜಿ.ಗೆ 4ರಿಂದ 13 ಮಿ.ಲೀಟರ್‌ವರೆಗೆ ಪ್ರಮಾಣ ವ್ಯತ್ಯಾಸಗೊಳ್ಳುತ್ತದೆ.

ಮೃತದೇಹ ಪಡೆಯದ ಕುಟುಂಬಸ್ಥರು: ಅಂತ್ಯಕ್ರಿಯೆ ನೆರವೇರಿಸಿದ ಜಮೀರ್‌...

ಸಾಮಾನ್ಯವಾಗಿ 200 ಮಿ.ಲೀಟರ್‌ ಡೋಸನ್ನು ಎರಡು ಗಂಟೆಗಿಂತ ಕಡಿಮೆ ಇಲ್ಲದೆ ನಿಧಾನವಾಗಿ ನೀಡಬೇಕು. ಈ ಸಂಬಂಧ ಅಗತ್ಯ ಕ್ರಮ ವಹಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳು ಮತ್ತು ಮಹಾನಗರ ಪಾಲಿಕೆಗಳ ಆಯುಕ್ತರುಗಳಿಗೆ ಸೂಚಿಸಲಾಗಿದೆ.

ಬೆಂಗಳೂರು: ಎರಡು ತಿಂಗಳ ಬಳಿಕ ಕೊರೋನಾ ಸಾವಿನ ಸಂಖ್ಯೆ ಒಂದಂಕಿಗೆ ಇಳಿಕೆ...

ಬ್ಲಡ್‌ ಬ್ಯಾಂಕ್‌ನವರು ಕೋವಿಡ್‌ನಿಂದ ಚೇತರಿಸಿಕೊಂಡವರ ಪಟ್ಟಿಪರಿಶೀಲಿಸಿ ಪ್ಲಾಸ್ಮಾ ಚಿಕಿತ್ಸೆ ಅಗತ್ಯವಿರುವ ರೋಗಿಗೆ ಹೊಂದಾಣಿಕೆಯಾಗುವ ರಕ್ತದ ಗುಂಪು ಮತ್ತು ಪ್ಲಾಸ್ಮಾ ಹೊಂದಿರುವ ಗುಣಮುಖರನ್ನು ಹುಡುಕಬೇಕು. ಎನ್‌ಜಿಒಗಳನ್ನು ಬಳಸಿಕೊಂಡು ಅಂತಹ ವ್ಯಕ್ತಿ ಹಾಗೂ ಅವರ ಕುಟುಂಬದವರನ್ನು ಪ್ಲಾಸ್ಮಾ ದಾನಕ್ಕೆ ಮನವಿ ಮಾಡಬೇಕು. ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಅಥವಾ ಹತ್ತಿರದ ಯಾರಾದರೂ ಸೋಂಕು ಗುಣಮುಖರಿದ್ದರೆ ಅವರಿಂದ ಪ್ಲಾಸ್ಮಾ ದಾನಕ್ಕೆ ರೋಗಿಯ ಕುಟುಂಬದವರು ಸಹಕರಿಸಬೇಕು. 18ರಿಂದ 60 ವರ್ಷದೊಳಗಿನ 50 ಕೆ.ಜಿ.ಗೂ ಹೆಚ್ಚು ತೂಕ ಇರುವ ಗುಣಮುಖ ಪುರುಷ, ಮಹಿಳೆ ಪ್ಲಾಸ್ಮಾ ದಾನಕ್ಕೆ ಅರ್ಹರು. ‘ಎ’ ರಕ್ತ ಗುಂಪಿನ ರೋಗಿಗೆ ಎ ಮತ್ತು ಎಬಿ, ‘ಬಿ’ ಗುಂಪಿನ ರೋಗಿಗೆ ಬಿ ಮತ್ತು ಎಬಿ, ‘ಎಬಿ’ ಗುಂಪಿನ ರೋಗಿಗೆ ಎಬಿ ಮತ್ತು ‘ಒ’ ರಕ್ತದ ಗುಂಪಿನ ರೋಗಿಗೆ ಒ, ಎ, ಬಿ, ಎಬಿ ಈ ಯಾವುದೇ ರಕ್ತದ ಗುಂಪಿನ ದಾನಿಯಿಂದ ಪ್ಲಾಸ್ಮಾ ದಾನ ಮಾಡಬಹುದು ಎಂಬುದು ಸೇರಿದಂತೆ ಒಟ್ಟು ಎಂಟು ಪುಟಗಳ ಸುತ್ತೋಲೆ ಹೊರಡಿಸಲಾಗಿದೆ.