ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು ಕಸ ಸುರಿವುದಕ್ಕೆ ಎಚ್ಡಿಕೆ ವಿರೋಧ
ರಾಮನಗರ ಜಿಲ್ಲೆ ಸೇರಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರಾಜಧಾನಿಯ ಕಸ ಸುರಿಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅಕ್ಕಪಕ್ಕದ ಜಿಲ್ಲೆಗಳ ಜನರ ಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು ಕಟ್ಟಿದರೆ ಅದಕ್ಕೆ ನಮ್ಮ ತೀವ್ರ ವಿರೋಧವಿದೆ. ಸರ್ಕಾರ ಈ ನಿರ್ಧಾರವನ್ನು ಕೈಬಿಡದಿದ್ದರೆ ಜನರು ಬೀದಿಗೆ ಇಳಿದಾರು ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ರಾಮನಗರ (ಅ.15) : ರಾಮನಗರ ಜಿಲ್ಲೆ ಸೇರಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರಾಜಧಾನಿಯ ಕಸ ಸುರಿಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅಕ್ಕಪಕ್ಕದ ಜಿಲ್ಲೆಗಳ ಜನರ ಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು ಕಟ್ಟಿದರೆ ಅದಕ್ಕೆ ನಮ್ಮ ತೀವ್ರ ವಿರೋಧವಿದೆ. ಸರ್ಕಾರ ಈ ನಿರ್ಧಾರವನ್ನು ಕೈಬಿಡದಿದ್ದರೆ ಜನರು ಬೀದಿಗೆ ಇಳಿದಾರು ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಿಕ್ಕಸಿಕ್ಕ ಕಡೆ ಬಾಯಿ ಹಾಕುತ್ತಿರುವ ''''ಪರ್ಸಂಟೇಜ್ ಪಟಾಲಂ'''' ಈಗ ಕಸಕ್ಕೂ ಬಾಯಿ ಹಾಕಿದೆ. ಬ್ರ್ಯಾಂಡ್ ಬೆಂಗಳೂರು ಅನ್ನುವುದು ಕೆಲವರಿಗೆ ಬಿರಿಯಾನಿ. ಅದರ ಒಳಗುಟ್ಟು ರಟ್ಟಾಗಿದೆ. ''''ಬ್ರ್ಯಾಂಡ್'''' ಹೆಸರಿನಲ್ಲಿ ಕೊಳ್ಳೆ ಹೊಡೆಯಲು, ಕಂಡ ಕಂಡ ಕಡೆ ಬೇಲಿ ಹಾಕಲು ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿಯೂ ಕಸದ ಡಂಪಿಂಗ್ ಯಾರ್ಡ್ ಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ದಿನವೊಂದಕ್ಕೆ 1,630 ಟನ್ ಕಸ ಸುರಿದರೆ ಅಲ್ಲಿನ ಜನರ ಪಾಡೇನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂಬಳಕಾಯಿ ಕಳ್ಳ ಅಂದ್ರೆ ಡಿಕೆಶಿ ಏಕೆ ಹೆಗಲು ಮುಟ್ಟಿಕೊಳ್ತಾರೆ?: ಎಚ್.ಡಿ.ಕುಮಾರಸ್ವಾಮಿ
ಮಂಡೂರು ಜನ ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ. ಯಶವಂತಪುರ ಕ್ಷೇತ್ರದ ಜನ ಈ ನರಕದಲ್ಲೇ ಬೇಯುತ್ತಿದ್ದಾರೆ. ದೊಡ್ಡಬಳ್ಳಾಪುರದ ಜನರೂ ಕಸದ ಕಷ್ಟಕ್ಕೆ ಸಿಲುಕಿದ್ದಾರೆ. ಈಗ ರಾಮನಗರದ ಸರದಿ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳನ್ನು "ಕಸದ ತೊಟ್ಟಿʼಗಳನ್ನಾಗಿ ಮಾಡಿ "ಸಾವಿನ ದಿಬ್ಬʼಗಳನ್ನು ನಿರ್ಮಿಸಲು "ಬ್ರ್ಯಾಂಡ್ ಬೆಂಗಳೂರುʼ ಹೆಸರಿನಲ್ಲಿ ಹುನ್ನಾರ ಹೂಡಲಾಗಿದೆ. ಇದು ಘೊರ ಅಕ್ಷಮ್ಯ ಹಾಗೂ ರಾಜಧಾನಿಯ ಆಸುಪಾಸಿನಲ್ಲಿ ಈಗಾಗಲೇ ಕೆಟ್ಟಿರುವ ಪರಿಸರವನ್ನು ಮತ್ತಷ್ಟು ಹಾಳು ಮಾಡುವ ದುಷ್ಟ ತಂತ್ರವಷ್ಟೇ ಎಂದು ಕುಮಾರಸ್ವಾಮಿ ಅವರು ದೂರಿದ್ದಾರೆ.
ಬೆಂಗಳೂರು ಅಕ್ಕಪಕ್ಕದ ಜಿಲ್ಲೆಗಳು ಕೃಷಿ, ತೋಟಗಾರಿಕೆ, ಹೈನುಗಾರಿಕೆಯಲ್ಲಿ ಸಮೃದ್ಧವಾಗಿವೆ. ಅಲ್ಲಿನ ಪರಿಸರ, ಜೀವ ವೈವಿಧ್ಯಕ್ಕೆ ಹಾನಿ ಮಾಡಿ, ಜನಜೀವನವನ್ನು ಸರ್ವನಾಶ ಮಾಡುವುದು ಒಂದೆಡೆಯಾದರೆ, ಹೊಸ ಡಂಪಿಂಗ್ ಯಾರ್ಡ್ ಗಳ ಮೂಲಕ ಕೋಟಿಗಟ್ಟಲೇ ಹಣವನ್ನು ಜೇಬಿಗೆ ಡಂಪ್ ಮಾಡಿಕೊಳ್ಳುವ ಖತರ್ನಾಕ್ ಐಡಿಯಾ ಇನ್ನೊಂದೆಡೆ ಅಡಗಿದೆ ಎಂದು ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಳ್ಳನ ಮನಸ್ಸು ಹುಳ್ಳುಳ್ಳಗೆ ಗಾದೆ ಡಿಕೆ ಬ್ರದರ್ಸ್‌ಗೆ ಅನ್ವಯವಾಗುತ್ತೆ: ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯ
ಜಗತ್ತಿನಲ್ಲಿಯೇ ಉತ್ಕೃಷ್ಟ ಮಾವು, ರೇಷ್ಮೆ, ಹಣ್ಣು, ತರಕಾರಿ ಬೆಳೆಯುತ್ತಿರುವ ರಾಮನಗರ, ಬಿಡದಿ ಬಳಿ ನೂರು ಎಕರೆ ಪ್ರದೇಶದಲ್ಲಿ ಕಸ ಸುರಿಯಲು ಉಪ ಮುಖ್ಯಮಂತ್ರಿಗಳ ದೊಡ್ಡ ಹುನ್ನಾರದ ಒಳ ಉದ್ದೇಶ ಸ್ಪಷ್ಟ. ಈಗಾಗಲೇ ವೃಷಭಾವತಿ ಸೇರಿ ರಾಮನಗರ ಜಿಲ್ಲೆಯ ಜಲಮೂಲಗಳು ಪೂರ್ಣ ಹಾಳಾಗಿ ಅಂತರ್ಜಲವೂ ಕಲುಷಿತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ನೂರು ಎಕರೆ ಸರಕಾರಿ ಭೂಮಿಯನ್ನು ಅನಾಮತ್ತಾಗಿ ಎಗರಿಸಿಬಿಡುವ ರಿಯಲ್ ಎಸ್ಟೇಟ್ ಬ್ರ್ಯಾಂಡೆಡ್ ಪರಿಕಲ್ಪನೆ ಇದಲ್ಲದೆ ಮತ್ತೇನು? ಅಕ್ಕಪಕ್ಕದ ಜಿಲ್ಲೆಗಳ ಜನರ ಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು ಕಟ್ಟಿದರೆ ಅದಕ್ಕೆ ನಮ್ಮ ವಿರೋಧವಿದೆ. ಕಾಂಗ್ರೆಸ್ ಸರ್ಕಾರ ಈ ನಿರ್ಧಾರವನ್ನು ಕೈಬಿಡದಿದ್ದರೆ ಜನರು ಬೀದಿಗೆ ಇಳಿದಾರು.
-ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ