ರಾಜ್ಯದಾದ್ಯಂತ ಶನಿವಾರ ಟಿಪ್ಪು ಜಯಂತಿ ಆಚರಣೆ ಮಾಡಲಾಗಿದ್ದು ಈ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಪಾಲ್ಗೊಂಡಿದ್ದರು. ಈ ಬಗ್ಗೆ ಟಿಪ್ಪುವನ್ನು ಹೊಗಳಿದ ಅವರು ಗಾಂಧೀಜಿಗೆ ಹೋಲಿಕೆ ಮಾಡಿದರು.

ಹಾಸನ: ಸ್ವಾತಂತ್ರ್ಯಕ್ಕೆ ಹೋರಾಡಿದ ಒಬ್ಬ ಮಹಾನ್‌ ಹೋರಾಟಗಾರ ಟಿಪ್ಪು. ಅವರನ್ನು ಮಹಾತ್ಮ ಗಾಂಧೀಜಿಯವರಿಗೆ ಹೋಲಿಸಬಹುದು ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು. ನಗರದಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡಿದ್ದು, ಇತಿಹಾಸದಲ್ಲಿ ದಾಖಲಾಗಿದೆ. ನಾಡಿನ ರಕ್ಷಣೆಗೆ ಮಕ್ಕಳನ್ನು ಒತ್ತೆ ಇಟ್ಟಟಿಪ್ಪು ಮಹಾನ್‌ ವ್ಯಕ್ತಿಯಾಗಿದ್ದಾನೆ. ಟಿಪ್ಪು ರಾಕೆಟ್‌ ತಂತ್ರಜ್ಞಾನ ಬಳಸಿದ ತಂತ್ರಜ್ಞ. ರಾಜ್ಯ ಕಟ್ಟುವಲ್ಲಿ ಟಿಪ್ಪು ಪಾತ್ರ ಮಹತ್ವದ್ದಾಗಿದೆ. ಇದನ್ನು ಅರಿಯಬೇಕು ಎಂದು ತಿಳಿಸಿದರು.

ಬಿಜೆಪಿಗೇಕೆ ಹೊಟ್ಟೆಉರಿ:

ದೇಶಕ್ಕಾಗಿ ಹೋರಾಡಿದ ವ್ಯಕ್ತಿಯ ಜಯಂತಿ ಆಚರಿಸಿದರೆ ಬಿಜೆಪಿ ಮುಖಂಡರಿಗೇಕೆ ಹೊಟ್ಟೆಉರಿ, ಬೇರೆ ಯಾವುದೇ ಜಯಂತಿಗಳಿಗೆ ಇಲ್ಲದ ವಿರೋಧ, ಟಿಪ್ಪು ಜಯಂತಿಗೇಕೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಬಿಜೆಪಿ 104 ಸ್ಥಾನ ಗೆಲ್ಲಲು ಅಲ್ಪಸಂಖ್ಯಾತ ಸಮುದಾಯದ ಜನರದ್ದೂ ಪಾತ್ರವಿದೆ ಎಂಬುದನ್ನು ಮರೆಯಬಾರದು. ಮುಸ್ಲಿಮರಿಂದ ಸ್ವಲ್ಪ ತಪ್ಪಾಗಿದ್ದಕ್ಕೆ ಇವತ್ತು ಬಿಜೆಪಿ ಹಾಸನದಲ್ಲಿ ಗೆದ್ದಿದೆ. ಬಿಜೆಪಿ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಕೊಡಗಿನಲ್ಲಿ ಟಿಪ್ಪು ಜಯಂತಿಗೆ ಬಿಜೆಪಿಯವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ ಸಚಿವರು, ಅತಿವೃಷ್ಟಿಯಿಂದ ಹಾನಿಗೊಳಲಾಗಿರುವ ಕೊಡಗಿಗೆ ಕೇಂದ್ರ ಸರ್ಕಾರ ಏನು ಪರಿಹಾರ ನೀಡಿದೆ? ರಾಜ್ಯ ಸರ್ಕಾರ ಎಷ್ಟುಪರಿಹಾರ ಕೊಟ್ಟಿದೆ ಎಂಬುದನ್ನು ಅರ್ಥ ಮಾಡಿಕೊಂಡು ವರ್ತಿಸಲಿ ಎಂದು ಕುಟುಕಿದರು.