Asianet Suvarna News Asianet Suvarna News

ಕೆಎಂಎಫ್‌ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆ: ಸರಣಿ ಟ್ವೀಟ್‌ ಮೂಲಕ ಕುಮಾರಸ್ವಾಮಿ ಕಿಡಿ

ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧವಿದೆ ಎಂದು ಗೊತ್ತಿದ್ದರೂ ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ 'ದಹಿ' ಎಂದು ಮುದ್ರಿಸಿರುವುದು, ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಕೆಎಂಎಫ್‌ಗೆ ಆದೇಶ ನೀಡಿರುವುದು ತಪ್ಪು.ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಜೆಡಿಎಸ್‌ ನಾಯಕ ಎಚ್‌ಡಿಕೆ ಟ್ವೀಟ್‌ ಮಾಡಿದ್ದಾರೆ.

hd kumaraswamy tweets on hindi imposition by central bjp government ash
Author
First Published Mar 30, 2023, 10:36 AM IST

ಬೆಂಗಳೂರು (ಮಾರ್ಚ್‌ 30, 2023):  ಕೇಂದ್ರದ ಬಿಜೆಪಿ ಸರ್ಕಾರ ಮತ್ತೆ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ನಂದಿನಿ ಮೊಸರಿನ ಪ್ಯಾಕೆಟ್‌ನಲ್ಲಿ ‘ದಹಿ’ ಎಂದು ಮುದ್ರಿಸಲು ಕೆಎಂಎಫ್‌ಗೆ ಎಫ್‌ಎಸ್‌ಎಸ್‌ಎಐ ಆದೇಶ ನೀಡಿರುವುದು ತಪ್ಪು. ಈ ಮೂಲಕ ಕೇಂದ್ರ ಸರ್ಕಾರ ನೇರವಾಗಿಯೇ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಟ್ವೀಟ್‌ಗಳ ಮೂಲಕ ಕಿಡಿ ಕಾರಿದ್ದಾರೆ. ಅಲ್ಲದೆ, ಯಶವಂತಪುರ ಪಂಚರತ್ನ ಯಾತ್ರೆ ವೇಳೆ ‘ನಂದಿನಿ ಉಳಿಸಿ' ಎಂದು ಮೊಸರು, ಹಾಲಿನ ಹಾರ ಹಾಕಿ ಜೆಡಿಎಸ್‌ ಕಾರ್ಯಕರ್ತರು ಎಚ್ಚರಿಸಿದ್ದರು. ಹಿಂದಿ ಹೇರಿಕೆ ಮೂಲಕ ನಂದಿನಿಯನ್ನು ಅಮುಲ್‌ ಮೂಲಕ ವಿಲೀನ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದೂ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್‌ಗಳ ಮೂಲಕ ಆರೋಪ ಮಾಡಿದ್ದಾರೆ.

ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧವಿದೆ ಎಂದು ಗೊತ್ತಿದ್ದರೂ ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ 'ದಹಿ' ಎಂದು ಮುದ್ರಿಸಿರುವುದು, ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಕೆಎಂಎಫ್‌ಗೆ ಆದೇಶ ನೀಡಿರುವುದು ತಪ್ಪು.ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಜೆಡಿಎಸ್‌ ನಾಯಕ ಎಚ್‌ಡಿಕೆ ಟ್ವೀಟ್‌ ಮಾಡಿದ್ದಾರೆ.

ಇದನ್ನು ಓದಿ: ಹಿಂದಿ ಹೇರಿಕೆ ವಿರೋಧಿಸಿ ತಮಿಳುನಾಡು ವಯೋವೃದ್ಧ ರೈತ ಆತ್ಮಾಹುತಿ

ಹಾಗೂ, ‘’ನಂದಿನಿ ಕನ್ನಡಿಗರ ಆಸ್ತಿ, ಕನ್ನಡಿಗರ ಅಸ್ಮಿತೆ ಹಾಗೂ ಕನ್ನಡಿಗರ ಜೀವನಾಡಿ. ಇದು ಗೊತ್ತಿದ್ದರೂ ಹಿಂದಿ ಹೇರಿಕೆಯ ಅಹಂ ತೋರಲಾಗಿದೆ. ಈ ಹಿಂದೆ ಕೇಂದ್ರ ಗೃಹ ಸಚಿವ ಶ್ರೀ @AmitShah ಅವರು ಮಂಡ್ಯದ ಸಭೆಯೊಂದರಲ್ಲಿ, ಗುಜರಾತಿನ ಅಮುಲ್ ಜತೆ ನಂದಿನಿಯನ್ನು ವಿಲೀನ ಮಾಡುವುದಾಗಿ ಹೇಳಿದ್ದರು. ಹಿಂದಿ ಪದ ಮುದ್ರಣ ನಂದಿನಿ ಹೈಜಾಕಿನ ಅರಂಭವಾ?’’ ಎಂದೂ ಪ್ರಶ್ನೆ ಮಾಡಿದ್ದಾರೆ.

ಇನ್ನು, ‘’ಶಾ ಅವರ ಹೇಳಿಕೆಯನ್ನು ಕನ್ನಡಿಗರು ಖಂಡಿಸಿದ್ದರು. ನಾನೂ ವಿರೋಧಿಸಿದ್ದೆ. ಆಮೇಲೆ ಸುಮ್ಮನಾಗಿದ್ದ @BJP4India ಸರಕಾರ, ಈಗ ಆಹಾರ ಸುರಕ್ಷತಾ ಪ್ರಾಧಿಕಾರದ ಮೂಲಕ ಹಿಂಬಾಗಿಲಿನಿಂದ ಮೊಸರಿನ ಪಕ್ಕ ದಹಿ ಸೇರಿಸಿ ಕನ್ನಡಿಗರ ಸ್ವಾಭಿಮಾನಕ್ಕೆ ಸಡ್ಡು ಹೊಡೆದಿದೆ. ಇದು ಕನ್ನಡಿಗರ ಮೇಲೆ ಬಿಜೆಪಿಯ ದಮ್ಮು ತಾಕತ್ತಿನ ಪ್ರದರ್ಶನವೇ?’’ ಎಂದು ಎಚ್‌ಡಿಕೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Hindi Diwas: ದೇಶದ ಏಕತೆಗೆ ಹಿಂದಿ ಅತ್ಯಂತ ನಿರ್ಣಾಯಕ; ಕೇಂದ್ರ ಶಿಕ್ಷಣ ಸಚಿವರ ವಾದ

ಅಲ್ಲದೆ, ‘’ಕನ್ನಡಕ್ಕೆ ಕೊಕ್ಕೆ ಹಾಕಿ ಹಿಂದಿಯನ್ನು ಮೆಲ್ಲಗೆ ಹೇರಿ ಇಡೀ ನಂದಿನಿ ಪದಾರ್ಥಗಳನ್ನು ಹಳ್ಳ ಹಿಡಿಸುವುದು ಇದರ ಹಿಂದಿರುವ ಘೋರ ಷಡ್ಯಂತ್ರ. ಆಮೇಲೆ, ನಂದಿನಿ ಉತ್ಪನ್ನಗಳು ಮಾರಾಟವಾಗುತ್ತಿಲ್ಲ ಎಂದು ಕಥೆ ಕಟ್ಟಿ, ಅದನ್ನು ಉಳಿಸುವ ನಾಟಕವಾಡಿ ನಂದಿನಿಯನ್ನು ಸಲೀಸಾಗಿ ಅಮುಲ್ ಜತೆಗೆ ವಿಲೀನ ಮಾಡುವ ಹುನ್ನಾರವಷ್ಟೇ ಇದು’’ ಎಂದೂ ಮಾಜಿ ಸಿಎಂ ಆರೋಪ ಮಾಡಿದ್ದಾರೆ. 

ಹಾಗೆ, ‘’ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿದ್ದೇವೆ ಎಂದರೆ ಇಷ್ಟ ಬಂದ ಹಾಗೆ ಒಳ ನುಸುಳುವುದಲ್ಲ, ಸೌಮ್ಯವಾಗಿದ್ದೇವೆ ಎಂದರೆ ಸುಮ್ಮನಿದ್ದೇವೆ ಎಂದಲ್ಲ. ನಂದಿನಿ ಕನ್ನಡಿಗರ ಸ್ವಾಭಿಮಾನವೇ ಹೊರತು ಅಮುಲ್ ಅಡಿಯಾಳಲ್ಲ. ಕರ್ನಾಟಕ ಭಾರತ ಗಣರಾಜ್ಯದ ಒಂದು ಭಾಗವೇ ಹೊರತು ಗುಜರಾತಿನ ವಸಾಹತುವಲ್ಲ’’ ಎಂದೂ ಎಚ್‌.ಡಿ. ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಈ ಮಧ್ಯೆ, ಈಚೆಗೆ ಪ್ರಧಾನಿ ಶ್ರೀ @narendramodi  ಹಾಗೂ ಗೃಹ ಸಚಿವ ಶ್ರೀ @AmitShah  ಅವರಿಬ್ಬರೂ ಕರ್ನಾಟಕಕ್ಕೆ ಬಲು ಬಿಡುವಾಗಿ ಬಂದರು ಎಂದರೆ, ಕೇವಲ ಚುನಾವಣೆ ಉದ್ದೇಶಕ್ಕೇ ಎಂದುಕೊಂಡಿದ್ದೆ. ಆದರೆ, ಕರ್ನಾಟಕದಲ್ಲಿ ನಡೆದ ಅವರಿಬ್ಬರ ಶೋಗಳ ಸವಾರಿ ನಮ್ಮ ನಂದಿನಿಯ ಹೆಸರಿಗೇ ಕುತ್ತು ತರುತ್ತದೆ ಎಂದು ಭಾವಿಸಿರಲಿಲ್ಲ’’ ಎಂದೂ ಕುಮಾರಸ್ವಾಮಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಹಾಗೆ, ‘’ಆರೂವರೆ ಕೋಟಿ ಕನ್ನಡಿಗರ ಮನೋಭಾವಕ್ಕೆ ವಿರುದ್ಧವಾಗಿ ‘ದಹಿ’ ಎನ್ನುವ ಪದವನ್ನು ಮುದ್ರಿಸಿದ್ದೇ ಕೆಎಂಎಫ್ ಮಾಡಿರುವ ದೊಡ್ದ ತಪ್ಪು. ಇದು ರಾಜ್ಯ @BJP4Karnataka ಸರಕಾರದ ಗಮನಕ್ಕೆ ಬಾರದೆ ಆಗಿರುವ ಕೃತ್ಯವಲ್ಲ. ಕಾಣದ ಕೈಗಳ ಕಳ್ಳಾಟ ಇಲ್ಲಿ ಸ್ಪಷ್ಟ. 
ಇಲ್ಲಿ ಹಿಂಬಾಗಿಲಿನಿಂದ ಅಲ್ಲ, ನೇರವಾಗಿಯೇ  ಹಿಂದಿ ಹೇರಿಕೆ ಆಗಿದೆ. ಅದನ್ನು ಡಬಲ್ ಎಂಜಿನ್ @BJP4Karnataka ಸರಕಾರ ಹಾಗೂ ಅದರ ಕೀಲುಗೊಂಬೆ ಕೆಎಂಎಫ್ ಸದ್ದಿಲ್ಲದೆ ಒಪ್ಪಿಕೊಂಡಿವೆ. ಇದು ಕನ್ನಡ ವಿರೋಧಿ ಕೆಲಸ. ತಕ್ಷಣವೇ ದಹಿ ಪದ ಮುದ್ರಿಸುವುದನ್ನು ನಿಲ್ಲಿಸಬೇಕು’’ ಎಂದೂ ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊನೆಯಲ್ಲಿ, ‘’ಯಶವಂತಪುರದಲ್ಲಿ ಪಂಚರತ್ನ ರಥಯಾತ್ರೆ ನಡೆಯುವ ವೇಳೆ ಅಭಿಮಾನಿಗಳು, @JanataDal_S ಕಾರ್ಯಕರ್ತರು ' ನಂದಿನಿ ಉಳಿಸಿ ' ಎಂದು ಮೊಸರು, ಹಾಲಿನ ಹಾರ ಹಾಕಿ ನನ್ನ ಗಮನ ಸೆಳೆದಿದ್ದರು. ನಂದಿನಿಗೆ ಕುಣಿಕೆ ಬಿಗಿಯುವ ಯಾವುದೇ ದುಷ್ಕೃತ್ಯ ಸಹಿಸುವ ಪ್ರಶ್ನೆಯೇ ಇಲ್ಲ’’ ಎಂದೂ ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಟ್ವೀಟ್‌ಗಳ ಮೂಲಕ ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆ, ನಂದಿನಿ ನಮ್ಮದು, ಕೆಎಂಎಫ್‌ ಕನ್ನಡಿಗರದ್ದು ಎಂದೂ ಹ್ಯಾಶ್‌ಟ್ಯಾಗ್‌ ಬರೆದುಕೊಂಡಿದ್ದಾರೆ. 

ಕನ್ನಡ ಪರ ಹೋರಾಟಗಾರ ರೂಪೇಶ್‌ ರಾಜಣ್ಣ ಸಹ ಈಬಗ್ಗೆ ಟ್ವೀಟ್‌ ಮಾಡಿದ್ದರು. ಅಲ್ಲದೆ, ಮೊನ್ನೆ ಕೆಎಂಎಫ್‌ಗೆ ಭೇಟಿ ಕೊಟ್ಟಾಗ ನಂದಿನಿ ಮೊಸರಿನ ಪೊಟ್ಟಣದ ಮೇಲೆ #ದಹಿ ಎಂದು ಹಿಂದಿಯಲ್ಲಿ ಮುದ್ರಣವಾಗಿ ಬಂದರೆ ಸಾವಿರಾರು ಜನ ಕನ್ನಡಿಗರು ಕನ್ನಡಶಾಲುಗಳೊಂದಿಗೆ ಕೆಎಂಎಫ್ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೇ ಎಂದು ವ್ಯವಸ್ಥಾಪಕರಿಗೆ ಹೇಳಿದ್ದೇವೆ.
ಖಂಡಿತ ಮಾಡೋಲ್ಲ ಅನ್ನೋ ಭರವಸೆ ಕೊಟ್ಟಿದ್ದಾರೆ. ಕನ್ನಡಿಗರು ಹಿಂದಿ ಹೇರಿಕೆ ಸಹಿಸೋಲ್ಲ ಎಂದು ಟ್ವೀಟ್‌ ಮಾಡಿದ್ದರು.

ಇನ್ನು, ಕೆಎಂಎಫ್ ಮೇಲೆ ಹಿಂದಿ ಹೇರಿಕೆ ವಿಚಾರವಾಗಿ ಫುಡ್ ಸೇಫ್ಟಿ ಮತ್ತು ಅಥಾರಿಟಿ ಕೆಎಂಎಫ್ ಗೆ ಪತ್ರ ಬರೆದಿದ್ದು, ಮೊಸರಿನ ಪ್ಯಾಕೇಟ್ ಮೇಲೆ ಹಿಂದಿ ಪದವಾದ ದಹಿ ಬಳಕೆ ಮಾಡುವಂತೆ ಆದೇಶ ನೀಡಿದ್ದಾರೆ. ಆಗಸ್ಟ್ ತಿಂಗಳಿನಿಂದ ಪ್ಯಾಕೆಟ್ ಮೇಲೆ ಪ್ರಿಂಟ್ ಮಾಡುವಂತೆ ಇಲಾಖೆಯಿಂದ ಆದೇಶ ಬಂದಿದೆ. ನಿನ್ನೆ ಈ ಆದೇಶ ಪ್ರತಿ ಕೆಎಂಎಫ್ ತಲುಪಿದ್ದು, ಈಗಾಗಲೇ ಆದೇಶದ ವಿಚಾರವಾಗಿ ಕನ್ನಡ ಸಂಘಟನೆಗಳು, ರಾಜಕೀಯ ಪಕ್ಷಗಳಿಂದಲೂ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತಿದೆ. ಟ್ವಿಟ್ಟರ್‌ನಲ್ಲೂ ಆಕ್ರೋಶ ಕೇಳಿಬರುತ್ತಿದೆ.. 

ಆಕ್ರೋಶದ ಬೆನ್ನಲ್ಲೇ ಇಲಾಖೆ ನೀಡಿರುವ ಆದೇಶ ಸಂಬಂಧ ಕೆಎಂಎಫ್ ಸಭೆಗೆ ಮುಂದಾಗಿದ್ದು, 16 ಒಕ್ಕೂಟಗಳ ಸಭೆ ಕರೆದಿದೆ. ಮುಂದಿನ ವಾರ ಸಭೆ ನಡೆಸಲು ತೀರ್ಮಾನಿಸಿದ್ದು, ಆದೇಶದ ವಿಚಾರ ಮತ್ತು ಆದೇಶ ವಿರುದ್ಧದ ಆಕ್ರೋಶದ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬಂದು ಬಳಿಕ ನಿರ್ಧಾರ ಪ್ರಕಟಿಸಲು ತೀರ್ಮಾನ ಮಾಡಲಾಗಿದೆ. ನಂತರ, ಸರ್ಕಾರಕ್ಕೆ ಕೆಎಂಎಫ್‌ ಪತ್ರ ಬರೆದಿದೆ ಎಂದೂ ಮೂಲಗಳು ಮಾಹಿತಿ ನೀಡಿದೆ. 

 

Follow Us:
Download App:
  • android
  • ios