ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಾಳಯದಲ್ಲಿ ಮಾಸ್ಟರ್ ಪ್ಲಾನ್ ಮಾಡಿಕೊಂಡು ಬಿಜೆಪಿ ಆಗಬಹುದಾಗಿದ್ದ ಲಾಭವನ್ನು ತಡೆಹಿಡಿಯಲಾಗಿತ್ತು ಎನ್ನುವ ವಿಚಾರ ಬಹಿರಂಗವಾಗಿದೆ. 

ಬೆಂಗಳೂರು :  ಮೊನ್ನೆ ಮುಗಿದ ಬಳ್ಳಾರಿ ಉಪ ಚುನಾವಣೆ ಕದನ ವೇಳೆಯಲ್ಲಿ ಬಳ್ಳಾರಿ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಸಿಡಿಯಲಿದ್ದ ‘ಇಡಿ ಡೀಲ್‌ ಪಟಾಕಿ’ಯನ್ನು ಖುದ್ದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ತಡೆಹಿಡಿದ್ದರು ಎಂಬ ಮಾತುಗಳು ಕೇಳಿ ಬಂದಿವೆ.

ಚುನಾವಣೆ ವೇಳೆ ರೆಡ್ಡಿ ಬಂಧನವಾದರೆ ಬಿಜೆಪಿಗೆ ವರವಾಗಬಹುದು. ರೆಡ್ಡಿಯನ್ನು ಸರ್ಕಾರವು ಟಾರ್ಗೆಟ್‌ ಮಾಡುತ್ತಿದೆ ಎಂದು ಚುನಾವಣಾ ಪ್ರಚಾರದಲ್ಲಿ ಶ್ರೀರಾಮುಲು ಸೇರಿದಂತೆ ಬಿಜೆಪಿ ನಾಯಕರು ಪ್ರಮುಖವಾಗಿ ಪ್ರಸ್ತಾಪಿಸಬಹುದು. ಇದರಿಂದ ಬಿಜೆಪಿ ಪರವಾಗಿ ಅನುಕಂಪ ಸೃಷ್ಟಿಯಾಗಬಹುದು. ಹೀಗಾಗಿ, ಉಪ ಚುನಾವಣೆ ಫಲಿತಾಂಶದ ಬಳಿಕ ಡೀಲ್‌ ಪ್ರಕರಣದ ತನಿಖೆ ನಡೆಸುವಂತೆ ಸಿಸಿಬಿ ಮುಖ್ಯಸ್ಥ ಅಲೋಕ್‌ ಕುಮಾರ್‌ ಅವರಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದರು ಎನ್ನಲಾಗಿದೆ.

ಇದಕ್ಕೆ ಪೂರಕವೆನ್ನುವಂತೆ ಉಪ ಚುನಾವಣೆ ಕದನದಲ್ಲಿ ಕೈ ಪಾಳೆಯದ ದಂಡನಾಯಕನಾಗಿದ್ದ ಸಚಿವ ಡಿ.ಕೆ.ಶಿವಕುಮಾರ್‌ ಅವರು, ನ.1 ರಂದು ಜನಾರ್ದನ ರೆಡ್ಡಿ ವಿರುದ್ಧ ಬಾಂಬ್‌ ಸ್ಫೋಟಿಸುವುದಾಗಿ ಘೋಷಿಸಿ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದರು.

ಒಪ್ಪಿಕೊಂಡ ಆಯುಕ್ತ!: ಈ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಅವರು, ಆ್ಯಂಬಿಡೆಂಟ್‌ ಕಂಪನಿ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣದ ತನಿಖೆಯು ಎರಡು ವಾರದ ಹಿಂದಷ್ಟೆಸಿಸಿಬಿಗೆ ವರ್ಗವಾಗಿತ್ತು. ಬಳಿಕ ಆರೋಪಿ ಫರೀದ್‌ ಬ್ಯಾಂಕ್‌ ದಾಖಲೆಗಳನ್ನು ಪರಿಶೀಲಿಸಿದಾಗ ಜನಾರ್ದನ ರೆಡ್ಡಿ ವ್ಯವಹಾರವು ಗೊತ್ತಾಯಿತು. ಆ ಹಂತದಲ್ಲಿ ಬಂಧಿಸಿದರೆ ಪ್ರಕರಣದ ಸ್ವರೂಪವು ಬೇರೆ ರೂಪ ಪಡೆದುಕೊಳ್ಳಬಹುದು ಎಂಬ ಕಾರಣಕ್ಕೆ ಚುನಾವಣೆ ಮುಗಿಯುವರಿಗೆ ಕಾಯಲಾಯಿತು ಎಂದು ಸ್ಪಷ್ಟಪಡಿಸಿದರು.

ಅಲ್ಲದೆ ರೆಡ್ಡಿಗೆ ಸಿಸಿಬಿಯಿಂದ ಮಾಹಿತಿ ಸೋರಿಕೆಯಾಗಿದೆ ಎಂಬ ವದಂತಿಯನ್ನು ಅಲೋಕ್‌ ಕುಮಾರ್‌ ನಿರಾಕರಿಸಿದ್ದಾರೆ.