ಬೆಂಗಳೂರು :  ‘ಆಪರೇಷನ್ ಕಮಲ’ದ ಭೀತಿಯಿಂದಾಗಿ ರಾಜ್ಯ ರಾಜ ಕೀಯದಲ್ಲಿನ ತಲ್ಲಣಗಳ ನಡುವೆಯೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡನೆಗೆ ದೃಢ ಸಂಕಲ್ಪ ಮಾಡಿದ್ದು, ರೈತರ ಪರ ಸೇರಿದಂತೆ ಸಮಾಜದ ಕಡುಬಡವರಿಗೆ ಅನುಕೂಲ ವಾಗುವ ಜನಪರ ಯೋಜನೆ ಗಳನ್ನು ಪ್ರಕಟಿಸುವ ಬಜೆಟ್ ಮಂಡನೆಗೆ ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. 

ಪ್ರತಿಪಕ್ಷ ಬಿಜೆಪಿಯ ತೀವ್ರ ವಿರೋಧದ ನಡುವೆ ಯೂ ಶುಕ್ರವಾರ ಮಧ್ಯಾಹ್ನ  12.32 ಕ್ಕೆ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡಿಸಲಿದ್ದು, ಮುಂಬರುವ ಲೋಕಸಭಾ ಚುನಾವಣೆ ಗುರಿಯಾಗಿಸಿಕೊಂಡು ಹತ್ತು ಹಲವು ಜನಪ್ರಿಯ ಯೋ ಜನೆಗಳನ್ನು ಪ್ರಕಟಿಸುವ ಉದ್ದೇಶವನ್ನು ಹೊಂದಿದ್ದಾರೆ ಎನ್ನಲಾಗಿದೆ. 

ಕಳೆದ ಬಾರಿಯ 2.18 ಲಕ್ಷ ಕೋಟಿ ರು. ಗಾತ್ರದ ಬಜೆಟ್ ಮಂಡಿಸಿದ್ದ ಕುಮಾರಸ್ವಾಮಿ, ಈ ಸಲ ಈ ದಾಖಲೆಯನ್ನು ಬದಿಗೊತ್ತಿ, ಗಾತ್ರವನ್ನು 2.40 ಲಕ್ಷ ಕೋಟಿ ರು.ಗೆ ಏರಿಸುವ ನಿರೀಕ್ಷೆ ಇದೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕುಮಾರಸ್ವಾಮಿ ಅವರು ಮಂಡಿಸುತ್ತಿರುವ 2ನೇ ಬಜೆಟ್ ಇದಾಗಿದ್ದು, ಎಂಟು ತಿಂಗಳ ಹಿಂದೆ ಮೊದಲ ಬಜೆಟ್ ಮಂಡಿಸಿದ್ದರು. 

ಏನು ಕೊಡುಗೆ?: ರೈತರ ಬೆಳೆಸಾಲ ಮನ್ನಾ ಯೋಜನೆಗೆ ಹೆಚ್ಚಿನ ಹಣ ನಿಗದಿಪಡಿಸುವುದೇ ಬಜೆಟ್‌ನ ಹೈಲೈಟ್ ಆಗಲಿದೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ ರೈತರ ಸಾಲ ಮನ್ನಾದ ಕುರಿತು ಪ್ರಕಟಿಸಲಿದ್ದಾರೆ. ಸಾಲಮನ್ನಾ ಹೊರತುಪಡಿಸಿದರೆ ಕೃಷಿಗೆ ಆದ್ಯತೆ ನೀಡಲಾಗುತ್ತದೆ. ಇನ್ನುಳಿದಂತೆ ಕಡು ಬಡವರಿಗೆ ಅನುಕೂಲವಾಗುವ ‘ದೀನಬಂಧು’ ಎಂಬ ಹೊಸ ಯೋಜನೆಯನ್ನು ಮುಖ್ಯ ಮಂತ್ರಿ ಘೋಷಿಸುವ ಸಾಧ್ಯತೆ ಇದೆ. ಈ ಯೋಜನೆ ಅನ್ವಯ ಮೂಲಕ ಬಡವರಿಗೆ ಐದು ಸಾವಿರ ರು. ಗಳವರೆಗೆ ರುಪೇ ಕಾರ್ಡ್ ಮೂಲಕ ಸಾಲ ಪಡೆದು ಕೊಳ್ಳಲು ಅನುಕೂಲವಾಗುವಂತೆ ಆರ್ಥಿಕ ನೆರವು ನೀಡಲು ಮುಂದಾಗುವ ಚಿಂತನೆ ಇದೆ.