ಬೆಳಗಾವಿ[ಡಿ.22]: ರೈತರ ಸಾಲ ಮನ್ನಾ ಕುರಿತ ಮಾಹಿತಿಯನ್ನು ಅಂಕಿ- ಅಂಶ ಸಮೇತ ನೀಡಿದ್ದೇನೆ. ಬಿಜೆಪಿಯವರಿಗೆ ಇನ್ನೂ ಯಾವ ರೀತಿ ಸ್ಪಷ್ಟಪಡಿಸಬೇಕು? ಆಂಜನೇಯ ಎದೆ ಬಗೆದು ರಾಮನನ್ನು ತೋರಿಸಿದಂತೆ ನಾನೂ ಎದೆ ಬಗೆದು ತೋರಿಸಬೇಕಾ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಶುಕ್ರವಾರ ಪ್ರತಿಪಕ್ಷ ಬಿಜೆಪಿ ಸದಸ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ವಿಧಾನ ಮಂಡಲದ ಉಭಯ ಸದನಗಳ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾಲ ಮನ್ನಾ ವಿಚಾರದಲ್ಲಿ ಸ್ಪಷ್ಟತೆಗೆ ಬರಲಾಗದೆ ಉದ್ದೇಶಪೂರ್ವಕವಾಗಿ ಮುಖ್ಯಮಂತ್ರಿ ತಮ್ಮನ್ನು ಕೆಣಕಿದ್ದಾರೆ ಎಂಬ ಪ್ರತಿಪಕ್ಷ ಬಿಜೆಪಿ ನಾಯಕರ ಆರೋಪ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಂಕಿ-ಅಂಶ ಸಮೇತ ಮಾಹಿತಿ ನೀಡಿದ್ದೇನೆ. ಇನ್ನೂ ಹೇಗೆ ಸ್ಪಷ್ಟತೆ ಕೊಡುವುದು. ಹನುಮಂತ ತನ್ನ ಎದೆ ಬಗೆದು ರಾಮನನ್ನು ತೋರಿಸಿದಂತೆ ನಾನೂ ಎದೆ ಬಗೆದು ತೋರಿಸಬೇಕಿತ್ತಾ? ಬಿಜೆಪಿಯವರದ್ದು ಕಳ್ಳನ ಮನಸ್ಸು ಹುಳ್ಳಗೆ ಎನ್ನುವ ಮನಸ್ಥಿತಿ. ಸಾಲ ಮನ್ನಾ ಮಾಹಿತಿ ಜನರಿಗೆ ತಲುಪಬಾರದು ಎಂಬ ಕಾರಣಕ್ಕಾಗಿ ಹಾಗೂ ಮಾಹಿತಿ ಜನರಿಗೆ ತಲುಪಿಬಿಟ್ಟರೆ ತಮಗೆ ಮುಂದಿನ ಹೋರಾಟಕ್ಕೆ ಯಾವದೇ ಅವಕಾಶಗಳು ಇಲ್ಲದಂತಾಗುತ್ತವೆ ಎನ್ನುವ ಕಾರಣಕ್ಕೆ ಕೊನೆಯ ಎರಡು ದಿನ ಸದನ ನಡೆಯಲು ಬಿಡದೆ ಪ್ರತಿಭಟನೆ ನಡೆಸಿದ್ದಾರೆ ಎಂದು ತಿರುಗೇಟು ನೀಡಿದರು.

ಕಳೆದ ಆರು ತಿಂಗಳಲ್ಲಿ ಐದು ಬಾರಿ ರೈತರ ಸಭೆ ನಡೆಸಿ ಅವರ ಸಲಹೆ ಪಡೆದು ಸಾಲ ಮನ್ನಾಗೆ ಯೋಜನೆ ರೂಪಿಸಿದ್ದೇನೆ. ಆದರೆ, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರುದ್ದ ತಮಿಳುನಾಡು ರೈತರು ಎರಡು ತಿಂಗಳ ಕಾಲ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು, ಕಳೆದ ತಿಂಗಳು ದೇಶದ ನಾನಾ ರಾಜ್ಯದ ಒಂದು ಲಕ್ಷಕ್ಕೂ ಹೆಚ್ಚು ರೈತರು ರಾಷ್ಟ್ರ ರಾಜಧಾನಿಯಲ್ಲಿ ಧರಣಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರಾಗಲಿ, ಯಾವೊಬ್ಬ ಕೇಂದ್ರ ಸಚಿವರಾಗಲಿ ಸೌಜನ್ಯಕ್ಕೂ ರೈತರನ್ನು ಭೇಟಿಯಾಗಿ ಮಾತನಾಡಿಸಲಿಲ್ಲ. ಇಂತಹ ಪಕ್ಷದವರಿಂದ ರೈತರ ಅಭಿವೃದ್ಧಿ ಬಗ್ಗೆ ತಾವು ಪಾಠ ಕಲಿಯಬೇಕಾಗಿಲ್ಲ ಎಂದರು.