ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆ ಪ್ರಕಟವಾದಾಗ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಕಣ್ಣೀರಿಟ್ಟರು.
ಬೆಂಗಳೂರು (ಆ.2): ಅತ್ಯಾಚಾರ ಪ್ರಕರಣದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 376(2)(n) ಸೆಕ್ಷನ್‌ನಲ್ಲಿ ಜೀವಾವಧಿ ಶಿಕ್ಷೆ ನೀಡಲಾಗಿದ್ದರೆ, 354(b) ಸೆಕ್ಷನ್ ಅಡಿಯಲ್ಲಿ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಒಂದೆಡೆ ಪ್ರಜ್ವಲ್ ರೇವಣ್ಣಗೆ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಓದಿ ತಿಳಿಸುತ್ತಿದ್ದರೆ, ಇನ್ನೊಂದೆಡೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮಧ್ಯಾಹ್ನದಿಂದಲೇ ಟಿವಿಯ ಎದುರು ಕಣ್ಣಿಟ್ಟು ಕುಳಿತಿದ್ದರು.
ಗುರುವಾರ ಕೋರ್ಟ್ ಪ್ರಜ್ವಲ್ ರೇವಣ್ಣ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ತಿಳಿಸಿತ್ತು. ಶನಿವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟ ಮಾಡಲಾಗಿದೆ. ಕೋರ್ಟ್‌ನಲ್ಲಿ ಶಿಕ್ಷೆಯ ಪ್ರಮಾಣ ಪ್ರಕಟ ಆಗುತ್ತಿರುವಂತೆಯೇ ಮಾಜಿ ಪ್ರಧಾನಿ ಕಣ್ಣೀರು ಹಾಕಿದ್ದಾರೆ. ಮಧ್ಯಾಹ್ನದಿಂದ ಮಾಜಿ ಪ್ರಧಾನಿ ಟಿವಿ ನೋಡುತ್ತಲೇ ಕುಳಿತಿದ್ದರು. ಶಿಕ್ಷೆ ಪ್ರಕಟ ಆಗುತ್ತಿರುವಂತೆಯೇ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಗಳಗಳನೆ ಕಣ್ಣೀರಿಟ್ಟಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಅತ್ಯಾಚಾರ ಪ್ರಕರಣಗಳಲ್ಲಿ ಜನಪ್ರತಿನಿಧಿ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದೆ. ನ್ಯಾಯಾಲಯವು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವಿಧಿಸಿರುವ ಶಿಕ್ಷೆಗಳ ವಿವರ ಇಲ್ಲಿದೆ:
ಜೀವಾವಧಿ ಶಿಕ್ಷೆ: ಐಪಿಸಿ 376(2)(k): ಜೀವಾವಧಿ ಶಿಕ್ಷೆ ಮತ್ತು ₹5 ಲಕ್ಷ ದಂಡ ಮತ್ತು ಐಪಿಸಿ 376(2)(n): ಜೀವಾವಧಿ ಶಿಕ್ಷೆ ಮತ್ತು ₹5 ಲಕ್ಷ ದಂಡ ವಿಧಿಸಲಾಗಿದೆ.
ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ಪಡೆದಿರುವ ಸೆಕ್ಷನ್‌ಗಳನ್ನು ನೋಡುವುದಾದರೆ, ಐಪಿಸಿ 354(a) 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹25,000 ದಂಡ, ಐಪಿಸಿ 354(b) 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹50,000 ದಂಡ. (ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 6 ತಿಂಗಳು ಸರಳ ಜೈಲು ಶಿಕ್ಷೆ), ಐಪಿಸಿ 354(c) 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ಐಪಿಸಿ 201 ಪ್ರಕಾರ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹25,000 ದಂಡ, ಐಟಿ ಕಾಯ್ದೆ 66(E) 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹25,000 ದಂಡ ವಿಧಿಸಲಾಗಿದೆ.
ಇದರೊಂದಿಗೆ ಐಪಿಸಿ 506 ಸೆಕ್ಷನ್ ಅಡಿಯಲ್ಲಿ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹10,000 ದಂಡ ವಿಧಿಸಲಾಗಿದೆ. ನ್ಯಾಯಾಲಯವು ಸಂತ್ರಸ್ತೆಗೆ ₹11 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.
ಜೀವನಪರ್ಯಂತ ಜೈಲು ವಾಸ: ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು ಶಿಕ್ಷೆಯಾಗಿದ್ದು, ಇಲ್ಲಿಯವರೆಗೂ ಅವರು ಅನುಭವಿಸಿರುವ ಜೈಲು ಶಿಕ್ಷೆ ಇದರಲ್ಲಿ ಮೈನಸ್ ಆಗೋದಿಲ್ಲ. ಆದ್ದರಿಂದ ಶನಿವಾರದಿಂದಲೇ ಅವರ ಶಿಕ್ಷೆ ಪ್ರಾರಂಭವಾಗಲಿದೆ. ಈ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣನನ್ನು ಪೊಲೀಸರು ಬಂಧಿಸಿರಲಿಲ್ಲ. ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ತನಿಖೆ ಮಾಡಲಾಗಿತ್ತು.
