ಹಾಸನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಮ್ಮ ಅನಾರೋಗ್ಯದ ನಡುವೆಯೂ ಕುಟುಂಬದ ವಿರುದ್ಧದ ರಾಜಕೀಯ ಸಂಚುಗಳನ್ನು ಎದುರಿಸುವ ದೃಢ ಸಂಕಲ್ಪ ವ್ಯಕ್ತಪಡಿಸಿದರು. ರೇವಣ್ಣ ಬಂಧನವನ್ನು ನೆನೆದು ಭಾವುಕರಾದರು, ಜೆಡಿಎಸ್ ಈಗ ಎನ್‌ಡಿಎ ಮೈತ್ರಿಯ ಪ್ರಬಲ ಭಾಗವಾಗಿದೆ ಎಂದರು.
ಹಾಸನ (ಜ.24): ನನಗೆ ವಾರದಲ್ಲಿ ಮೂರು ದಿನ ಡಯಾಲಿಸಿಸ್ ಆಗುತ್ತಿದೆ, ನನ್ನ ಕಿಡ್ನಿಗಳು ವೈಫಲ್ಯವಾಗಿವೆ. ಆದರೆ, ಈ ಮಣ್ಣಿನ ಮೇಲಿನ ಮಮಕಾರ ಮತ್ತು ನನ್ನ ಕುಟುಂಬವನ್ನು ಮುಗಿಸಲು ಸಂಚು ರೂಪಿಸಿರುವವರ ವಿರುದ್ಧ ಹೋರಾಡುವ ಚೈತನ್ಯ ಇನ್ನೂ ನನ್ನಲ್ಲಿದೆ' ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಅತ್ಯಂತ ಭಾವುಕರಾಗಿ ನುಡಿದರು.
ಹಾಸನದಲ್ಲಿ ನಡೆದ ಜೆಡಿಎಸ್ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಹಾಗೂ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ರೇವಣ್ಣ ಹಾಗೂ ಅವರ ಕುಟುಂಬವನ್ನು ರಾಜಕೀಯವಾಗಿ ನಾಶ ಮಾಡಲು ಹೊರಟಿರುವವರಿಗೆ ಈ ಸಮಾವೇಶ ಒಂದು ಪ್ರಬಲ ಸಂದೇಶ ನೀಡಲಿದೆ ಎಂದ ಗೌಡರು, ರೇವಣ್ಣ ಬಂಧನದ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟರು. 'ನನ್ನ ಮನೆಯಲ್ಲಿ ರೇವಣ್ಣ ಕುಳಿತಿದ್ದಾಗ ಎಸ್ಐಟಿ ಅಧಿಕಾರಿಗಳು ಬಂದು ಅರೆಸ್ಟ್ ಮಾಡಿದರು. ಇವತ್ತು ಆ ಎಸ್ಐಟಿ ಅಧಿಕಾರಿಗಳಿಗೆ ಸರ್ಕಾರ ಉಡುಗೊರೆ ನೀಡಿದೆ. ರೇವಣ್ಣ ಕುಟುಂಬವನ್ನ ಮುಗಿಸಲೆಂದೇ ಈ ಉಡುಗೊರೆಗಳನ್ನು ನೀಡಲಾಗುತ್ತಿದೆ' ಎಂದು ಆಕ್ರೋಶ ಹೊರಹಾಕಿದರು.
ಬಿ ಟೀಂ ಟೀಕೆಗೆ ತಿರುಗೇಟು
ಈ ಹಿಂದೆ ರಾಹುಲ್ ಗಾಂಧಿ ಹಾಸನಕ್ಕೆ ಬಂದಾಗ ಜೆಡಿಎಸ್ ಅನ್ನು ಬಿಜೆಪಿಯ 'ಬಿ ಟೀಂ' ಎಂದು ಕರೆದಿದ್ದರು. ಅದನ್ನೇ ಇಂದು ಪ್ರಸ್ತಾಪಿಸಿದ ದೇವೇಗೌಡರು, 'ಅವತ್ತು ಬಿ ಟೀಂ ಎಂದವರು ಇಂದು ನೋಡಲಿ, ನಾವು ಎನ್‌ಡಿಎ (NDA) ಮೈತ್ರಿಯ ಪ್ರಬಲ ಪಾಲುದಾರರಾಗಿದ್ದೇವೆ. ಕುಮಾರಸ್ವಾಮಿ ಇಂದು ಕೇಂದ್ರ ಮಂತ್ರಿಯಾಗಿದ್ದಾರೆ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾವು ದೇಶದ ಆಡಳಿತದಲ್ಲಿ ಭಾಗಿಯಾಗಿದ್ದೇವೆ' ಎಂದು ಹೆಮ್ಮೆಯಿಂದ ಹೇಳಿದರು.
ಜಿಲ್ಲೆಯ ಪ್ರಗತಿ ಮತ್ತು ಸವಾಲು
ಹಾಸನ ಜಿಲ್ಲೆಯನ್ನು 1967 ರಿಂದಲೂ ಬೆಳೆಸಿಕೊಂಡು ಬಂದಿದ್ದೇನೆ. ರೈತನ ಮಗನಾಗಿ ದೇಶದ ಪ್ರಧಾನಿಯಾಗಿ ಯಾವುದೇ ಕಪ್ಪುಚುಕ್ಕೆಯಿಲ್ಲದೆ ಆಡಳಿತ ನಡೆಸಿದ್ದೇನೆ. ಜಿಲ್ಲೆಯಲ್ಲಿ ಡೈರಿ, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಪ್ರತಿಯೊಂದು ಸಮುದಾಯಕ್ಕೂ ಶಕ್ತಿ ತುಂಬಿದ್ದೇವೆ. ಆದರೆ, ಕುಮಾರಣ್ಣ 28 ವರ್ಷಗಳ ಹಿಂದೆ ಖರೀದಿಸಿದ ಜಮೀನು ಗೋಮಾಳ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಐಐಟಿ (IIT) ಮಂಜೂರಾಗಿದ್ದ ಜಾಗವನ್ನು ಯಾರ್ಯಾರು ಹೊಡೆದರು ಎನ್ನುವುದು ನಮಗೆ ಗೊತ್ತಿದೆ ಎಂದು ಪರೋಕ್ಷವಾಗಿ ಜಿಲ್ಲೆಯ ಎದುರಾಳಿಗಳಿಗೆ ಎಚ್ಚರಿಕೆ ನೀಡಿದರು.
ಜನಸಾಗರಕ್ಕೆ ತಲೆಬಾಗಿದ ದೊಡ್ಡಗೌಡ್ರು
ರಾಜ್ಯದ ಮೂಲೆಮೂಲೆಯಿಂದ ನೀವು ಬಂದಿರುವುದನ್ನು ನೋಡಿದರೆ ಕಣ್ಣು ಕುಕ್ಕುವಂತಿದೆ. ಆಡಳಿತ ನಡೆಸುತ್ತಿರುವವರಿಗೆ ಕುಮಾರಣ್ಣ ಹಾಗೂ ರೇವಣ್ಣ ಹಿಂದೆ ನಾವಿದ್ದೇವೆ ಎನ್ನುವ ಸಂದೇಶವನ್ನು ನೀವು ನೀಡಿದ್ದೀರಿ. ನಾನು ಇನ್ನು ಎಷ್ಟು ವರ್ಷ ಬದುಕಿರುತ್ತೇನೋ ಗೊತ್ತಿಲ್ಲ, ಆದರೆ ಅಷ್ಟರಲ್ಲಿ ಈ ಜಿಲ್ಲೆಯ ಪ್ರತಿ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬುವುದೇ ನನ್ನ ಗುರಿ' ಎಂದರು. 1991ರಲ್ಲಿ ತನ್ನನ್ನು ಸೋಲಿಸಿದ ಜನರೇ ಮತ್ತೆ ಕೈಹಿಡಿದಿದ್ದನ್ನು ನೆನೆದ ಅವರು, 'ನನ್ನನ್ನು ತುಳಿಯಲು ಯತ್ನಿಸಿದವರನ್ನು ಮೆಟ್ಟಿ ನಿಲ್ಲುವ ಶಕ್ತಿ ಈ ಜನರೇ ಕೊಟ್ಟಿದ್ದಾರೆ' ಎಂದು ತಲೆಬಾಗಿದರು.


