ಬಿಪಿಎಲ್‌ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿ, ಹೊರದೇಶ, ಹೊರರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆಯೇ ? ಎಷ್ಟು ಕ್ವಿಂಟಾಲ್‌ ವಶಪಡಿಸಿಕೊಳ್ಳಲಾಗಿದೆ? ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ?

ಯಾದಗಿರಿ (ಡಿ.10): ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಪ್ರಕರಣಗಳು ವಿಧಾನಪರಿಷತ್ತಿನಲ್ಲಿ ಪ್ರತಿಧ್ವನಿಸಿವೆ. ಪ್ರಶ್ನೋತ್ತರ ವೇಳೆ ಷರಿಷತ್‌ ಸದಸ್ಯ, ಬಿಜೆಪಿಯ ಸಿ. ಟಿ. ರವಿ ಈ ಬಗ್ಗೆ ಪ್ರಸ್ತಾಪಿಸಿದರಲ್ಲದೆ, ಜಿಲ್ಲೆಯೂ ಸೇರಿದಂತೆ, ರಾಜ್ಯದ ವಿವಿಧೆಡೆ ನಡೆದಿರುವ ಪ್ರಕರಣಗಳ ಕುರಿತ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌.ಐ.ಟಿ) ರಚಿಸಬೇಕೆಂದು ಪಟ್ಟು ಹಿಡಿದರು. ಅನ್ನಭಾಗ್ಯ ಅಕ್ಕಿ ಫಾರಿನ್‌ ಗೆ ಶೀರ್ಷಿಕೆಯಡಿ ಸೆ.8 ರಂದು ಕನ್ನಡಪ್ರಭದಲ್ಲಿ ಪ್ರಕಟಗೊಂಡ ವರದಿಯನ್ನು ಪ್ರದರ್ಶಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸದಸ್ಯ ಸಿ. ಟಿ. ರವಿ, ಅಕ್ರಮ ರಾಜ್ಯಾದ್ಯಂತ ವ್ಯಾಪಿಸಿದ್ದು, ಎಸ್‌ಐಟಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಬಿಪಿಎಲ್‌ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿ, ಹೊರದೇಶ, ಹೊರರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆಯೇ ? ಎಷ್ಟು ಕ್ವಿಂಟಾಲ್‌ ವಶಪಡಿಸಿಕೊಳ್ಳಲಾಗಿದೆ? ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ? ಅಕ್ಕಿ ಅಕ್ರಮದಲ್ಲಿ ಯಾರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಆರೋಪಿಗಳ ವಿರುದ್ಧ ಕ್ರಮವೇನಾಗಿದೆ ? ಕಡಿವಾಣ ಹಾಕಲು ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಸದಸ್ಯ ಸಿ. ಟಿ. ರವಿಯವರ ಚುಕ್ಕೆ ಗುರುತಿನ ಪ್ರಶ್ನೆ-14ಕ್ಕೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ. ಎಚ್‌ ಮುನಿಯಪ್ಪ, ಒಟ್ಟಾರೆ ದಾಖಲಾದ ಪ್ರಕರಣಗಳು, ಜಪ್ತಿ ಪಡಿಸಿಕೊಂಡ ಅಕ್ಕಿ ದಾಸ್ತಾನಿನ ಮಾಹಿತಿ ವಿವರಿಸಿದರು.

2025-26 ರಲ್ಲಿ 485 ಪ್ರಕರಣಗಳು ಪತ್ತೆಯಾಗಿದ್ದು, 461 ಎಫ್ಐಆರ್ ದಾಖಲಿಸಲಾಗಿದೆ. 570 ಜನರನ್ನು ಬಂಧಿಸಲಾಗಿದ್ದು, 314 ವಾಹನಗಳ ಸಮೇತ 29,603 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಯಾದಗಿರಿ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ, ಕೊಪ್ಪಳ ಗೋದಾಮಿನ 330 ಕ್ವಿಂಟಾಲ್‌ ವಶಪಡಿಸಿಕೊಳ್ಳಲಾಗಿದೆ, ಬಾಗಲಕೋಟೆಯಲ್ಲಿ ಪತ್ರಕರ್ತನ ಕೊಲೆ ಪ್ರಕರಣ ವಿಚಾರಣೆ ಹಂತದಲ್ಲಿದೆ, ಅಕ್ಕಿ ಅಕ್ರಮಕ್ಕೆ ಕಡಿವಾಣ ಹಾಕಲು ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ಮೇಲ್ವಿಚಾರಣೆ ನಡೆಸಿ, ಅಕ್ರಮ ಕಂಡುಬಂದಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ಕೆ. ಎಚ್‌. ಮುನಿಯಪ್ಪ ವಿವರಣೆ ನೀಡಿದರು.

ಸಚಿವ ಮುನಿಯಪ್ಪ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಸಿ. ಟಿ. ರವಿ, ಇಡೀ ಹಗರಣ ರಾಜ್ಯವ್ಯಾಪಿ ವ್ಯಾಪಿಸಿದೆ. ಅನ್ನಭಾಗ್ಯ ಅಕ್ಕಿ ಪಾಲಿಶ್‌ ಮಾಡಿ, ಸಿಂಗಾಪುರ, ದುಬೈನಲ್ಲಿ ಮಾರಾಟ ಮಾಡಲಾಗುತ್ತಿದೆ, ಬಡವರ ಸಲುವಾಗಿ ಮಾಡಿದ ಪಡಿತರ ಯೋಜನೆ ಬಡವರಿಗೇ ತಲುಪುತ್ತಿಲ್ಲ. ಅಧಿಕಾರಿಗಳು ಶಾಮೀಲಾಗಿರುವ ಶಂಕೆಯಿದೆ, ಗೋದಾಮಿನಿಂದ ಬರುವ ಮೊದಲೇ ಪಡಿತರ ನಾಪತ್ತೆಯಾಗಿದೆ ಎಂದು ಶಹಾಪುರ ಟಿಎಪಿಸಿಎಂಎಸ್‌ ಗೋದಾಮಿನಲ್ಲಿ 2 ವರ್ಷಗಳ ಹಿಂದೆ ನಡೆದ 6 ಸಾವಿರ ಕ್ವಿಂಟಾಲ್‌ ಅಕ್ಕಿ ನಾಪತ್ತೆ ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖಿಸಿ, ಜಿಲ್ಲೆಯಲ್ಲಿ 30 ರಿಂದ 40 ಪ್ರಕರಣಗಳ ನಡೆದ ಬಗ್ಗೆ ಸರ್ಕಾರವೇ ಮಾಹಿತಿ ನೀಡುತ್ತಿದೆ ಎನ್ನುವಾಗ, ಇದರ ಆಳಗಲ ಎಲ್ಲೆಡೆ ವ್ಯಾಪಿಸಿದೆ. ಅಕ್ರಮ ತಡೆಯಬೇಕಾದ ಅಧಿಕಾರಿಗಳೇ ಶಾಮೀಲಾಗಿರುವುದರಿಂದ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ವಾಗ್ದಾಳಿ ನಡೆಸಿದ ಅವರು, ಇದರ ಸಮಗ್ರ ತನಿಖೆಗೆ ಎಸ್‌ಐಟಿ ರಚನೆ ಆಗಬೇಕು ಎಂದು ಆಗ್ರಹಿಸಿದರು. ಕೇವಲ ಒಂದು ಪ್ರಕರಣ ಆಗಿಲ್ಲ, ನೂರಾರು ಪ್ರಕರಣಗಳು ದಾಖಲಾಗಿವೆ. ಅಂತಾರಾಜ್ಯ ಜಾಲ ವ್ಯಾಪಿಸಿರುವ ಶಂಖೆಯಿದೆ.

ಈ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಯಾವುದಾದರೂ ಕಠಿಣ ಕಾಯ್ದೆ ತರುವ ಉದ್ದೇಶ ಹೊಂದಿದೆಯೇ? ನಿಯಂತ್ರಣ ಹೇಗೆ ಮಾಡುತ್ತೀರಿ ಎಂದು ಸಚಿವ ಮುನಿಯಪ್ಪ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ, ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕೆ ಅಧಿಕಾರವಿದೆ. ಅದರಿಂದಲೇ ಇಷ್ಟೊಂದು ಮಾಹಿತಿ ಒದಗಿಸಲಾಗಿದೆ ಎಂದ ಅವರು, ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿ ಭರವಸೆ ಈಡೇರಿಸಿದೆ. ಈಗ ಉತ್ತರ ಕರ್ನಾಟಕ್ಕೆ ಅಕ್ಕಿ ಬಳಕೆ ಕಡಿಮೆ, ಅದಕ್ಕಾಗಿ ಎಣ್ಣೆ,-ಕಾಳು, ಪೌಷ್ಟಿಕ್‌ ಆಹಾರಧಾನ್ಯಗಳ ಹೊಂದಿದ ಇಂದಿರಾ ಕಿಟ್‌ ನೀಡುವ ಬಗ್ಗೆ ಸರ್ಕಾರ ನಿರ್ಧರಿಸಿದೆ. ಜನವರಿಯಲ್ಲಿ ಇಂದಿರಾ ಕಿಟ್‌ ವಿತರಿಸಲಾಗುತ್ತದೆ ಎಂದರು.

ಅಕ್ರಮಕೋರರ ಆಸ್ತಿ ಮುಟ್ಟಗೋಲು ಹಾಕಿ

ಸಚಿವ ಕೆ. ಎಚ್‌ ಮುನಿಯಪ್ಪ ಉತ್ತರಕ್ಕೆ ತೃಪ್ತರಾಗದ ಸಿ. ಟಿ. ರವಿ, ಅಕ್ರಮ ನಿರಂತರವಾಗಿದ್ದು ವ್ಯಾಪಕವಾಗಿದೆ. ಅಕ್ರಮಕೋರರ ಆಸ್ತಿ ಮುಟ್ಟಗೋಲು ಹಾಕಬೇಕು, ಭಾಗಿಯಾದ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು, ಈ ಬಗ್ಗೆ ಪರಿಶೀಲನೆ ನಡೆಸಿ ವಿಶೇಷ ಕಾಯ್ದೆ ರೂಪಿಸಬೇಕಲ್ಲದೆ, ಎಸ್ಐಟಿ ರಚನೆ ಮಾಡಬೇಕು ಎಂದು ಆಗ್ರಹಿಸಿದರು. ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ, ಎಸ್ಐಟಿ ರಚನೆ ಅಗತ್ಯವಿಲ್ಲ. ಯಾದಗಿರಿ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಸರ್ಕಾರ ವಿಫಲವಾಗಿಲ್ಲ, ಯಾವುದೇ ಮುಚ್ಉಮರೆ ಇಲ್ಲ. ಅಧಿಕಾರಿಗಳ ಅಮಾನತು ಮಾಡಲಾಗಿದೆ ಎಂದು ತಿಳಿಸಿದಾಗ, ಇಷ್ಟಿದ್ದರೂ ಕೂಡ ಪದೇ ಪದೇ ಈ ತರಹದ ಅಕ್ರಮಗಳು ಯಾಕೆ ನಡೆಯುತ್ತಿವೆ ಎಂದು ರವಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.