ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಸಾಲ ವಸೂಲಿ ವಿಚಾರವಾಗಿ ಗರ್ಭಿಣಿ ಮಹಿಳೆಯ ಮೇಲೆ ಹಲ್ಲೆ ನಡೆದಿದೆ. ಈ ಹಲ್ಲೆಯಿಂದಾಗಿ ಮಹಿಳೆ ಅವಧಿಪೂರ್ವದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಆ ಮಕ್ಕಳು ಮೃತಪಟ್ಟಿವೆ. ಈ ಸಂಬಂಧ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಾವೇರಿ (ಏ.11): ತುಂಬು ಗರ್ಭಿಣಿಯೊಬ್ಬರ ಹೊಟ್ಟೆಯ ಮೇಲೆ ಹಲ್ಲೆ ನಡೆಸಿದ ಪರಿಣಾಮ ಅವಳಿ ಮಕ್ಕಳು ಅವಧಿ ಪೂರ್ವದಲ್ಲಿ ಜನಿಸಿ ಮೃತಪಟ್ಟ ಅಮಾನುಷ ಘಟನೆ ಸವಣೂರು ತಾಲೂಕಿನ ಅಲ್ಲಿಪುರದಲ್ಲಿ ನಡೆದಿದೆ. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪವಿತ್ರಾ ಮುತ್ತಣ್ಣ ಲಮಾಣಿ ಹಲ್ಲೆಗೊಳಗದ ಗರ್ಭಿಣಿ ಮಹಿಳೆ. ಮಾರ್ಚ್ 28ರಂದು ಘಟನೆ ನಡೆದಿದೆ. ಏ.7ರಂದು ಜಿಲ್ಲಾಸ್ಪತ್ರೆಯಲ್ಲಿ ಅವಳಿ ಮಕ್ಕಳು ಅವಧಿಪೂರ್ವ ಜನಿಸಿ ಸಂಜೆ ಮೃತಪಟ್ಟಿವೆ. ಪವಿತ್ರಾ ಅವರ ತಾಯಿ ಹಾಲವ್ವ ಲಮಾಣಿ ನೀಡಿದ ದೂರಿನ ಮೇರೆಗೆ ಸವಣೂರು ಪೊಲೀಸರು ಆರೋಪಿತರಾದ ಸುರೇಶ ಹಾಲಪ್ಪ ಲಮಾಣಿ, ಪರಶುರಾಮ ಹಾಲಪ್ಪ ಲಮಾಣಿ, ಮಹೇಶ ಲಮಾಣಿ ಹಾಗೂ ಸಕ್ಕುಬಾಯಿ ಸುರೇಶ ಲಮಾಣಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಲ ವಸೂಲಿಗೆ ಹಲ್ಲೆ

ಪವಿತ್ರಾ ಅವರ ಮನೆಯ ಮುಂದೆ ಫೆ. 28ರಂದು ರಾತ್ರಿ ಪವಿತ್ರಾ ಅವರ ಸೀಮಂತದ ಸಂಬಂಧ ಮಾತಾಡುತ್ತ ಕುಳಿತಾಗ ಆರೋಪಿತರು ತಾವು ಸಾಲ ನೀಡಿದ್ದ ಹಣ ಮರಳಿಸುವಂತೆ ಹಾಲವ್ವ (ಪವಿತ್ರಾಳ ತಾಯಿ) ಅವರಿಗೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಿಡಿಸಲು ಬಂದ ಪವಿತ್ರಾ ಅವರ ಹೊಟ್ಟೆಯ ಮೇಲೂ ಕಾಲಿಂದ ಒದ್ದಿದ್ದಾರೆ. ಬಿಡಿಸಲು ಬಂದ ಪವಿತ್ರಾ ಅವರ ಅತ್ತೆ, ಮಾವ ಮತ್ತು ಗಂಡನ ಅಣ್ಣನಿಗೂ ತೆಂಗಿನ ಮಟ್ಟೆಯಿಂದ ಹೊಡೆದಿದ್ದಾರೆ. ನೋವಿಗೆ ತುತ್ತಾಗಿದ್ದ ಪವಿತ್ರಾ ಅವರನ್ನು ಚಿಕಿತ್ಸೆಗಾಗಿ ಏ.7ರಂದು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವಳಿ ಮಕ್ಕಳು ಅವಧಿಪೂರ್ವ ಜನನವಾಗಿ ಮೃತಪಟ್ಟಿವೆ ಎಂದು ಹಾಲವ್ವ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.