ಹಾವೇರಿ ಕೊಬ್ಬರಿ ಹೋರಿ ಸ್ಪರ್ಧೆ ಅಂದ್ರ, ಅದ್ರ ಗಮ್ಮತ್ತ ಬೇರೇ!
ಮಳೆ, ಪ್ರವಾಹದಿಂದಾಗಿ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಹಾನಿ ಉಂಟಾಗಿದ್ದರೂ, ರೈತರ ಸಂಭ್ರಮಕ್ಕೆ ಇದರಿಂದ ಯಾವುದೇ ಅಡೆತಡೆಯಾಗಿಲ್ಲ. ಕರೋನಾದಿಂದಾಗಿ ಕಳೆದ ಎರಡು ವರ್ಷಗಳಿಂದ ತಣ್ಣಗಿದ್ದ ದೀಪಾವಳಿ ಸಂಭ್ರಮ ಈ ವರ್ಷ ಭರ್ಜರಿಯಾಗಿ ನಡೆದಿದೆ. ಅದರಂತೆ ಹಾವೇರಿಯಲ್ಲಿ ಹೋರಿ ಹಬ್ಬ ಕೂಡ ಸಂಭ್ರಮದಿಂದ ನಡೆದಿದೆ.
ವರದಿ: ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ
ಹಾವೇರಿ (ಅ. 26): ಉತ್ತರ ಕರ್ನಾಟಕದಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿ ಉಂಟಾಗಿದೆ. ಆದರೆ, ಅಲ್ಲಿನ ರೈತರು ನೋವಿನಲ್ಲಿಯೂ ಎಲ್ಲಿಲ್ಲದ ಸಂಭ್ರಮಕ್ಕೆ ಮುಂದಾಗಿದ್ದಾರೆ. ದೀಪಾವಳಿ ಹಬ್ಬ ಬಂದ್ರೆ ಅವರ ಜನಪ್ರಿಯ ಗ್ರಾಮೀಣ ಕ್ರೀಡೆಯಾದ ಕೊಬ್ಬರಿ ಹೋರಿ ಓಡಿಸೋ ಸ್ಫರ್ಧೆ ಶುರು ಆಗುತ್ತದೆ. ಈ ಬಾರಿಯೂ ಪ್ರವಾಹದಿಂದ ನಲುಗಿದ್ದರೂ ಹೋರಿ ಹಬ್ಬ ಮಾತ್ರ ಬಿಟ್ಟಿಲ್ಲ. ಆ ಸ್ಪರ್ಧೆ ನೋಡುವುದಕ್ಕೆ ಮೈ ಜಲ್ ಅನ್ನುವಂತಿದೆ.. 'ವಾ ಓ... ಏ ನಮ್ ಹೋರಿ ಹಿಡೀರಲೇ ತಾಕತ್ ಇದ್ರ.. ಏ ನಿನ್ ಹೋರಿ ಬಿಡಲೇ ತಾಕತ್ ಇದ್ರ.. ಎಪ್ಪಾ ಹೋರಿ ತೂಫಾನ್ ಹೋದಂಗ ಹೋತಲೇ... ಏನ್ ಹಬ್ಬ, ಏನ್ ಅಲಂಕಾರಲೇ ಆ ಹೋರಿಗೆ?..' ಹೀಗೆ ಒಂದಾ ಎರಡಾ ಜನರ ಮಾತು, ಕೇಕೆ, ಹಾರಾಟ, ತೂರಾಟ, ಪಟಾಕಿ ಸದ್ದು. ದೀಪಾವಳಿ ಅಂದರೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಲ್ಲಿ ಪಟಾಕಿ ಹೊಡೆದು ಸಿಹಿ ತಿನ್ನೋ ಹಬ್ಬ ಅಲ್ಲವೇ ಅಲ್ಲ. ಅದು ಮಣ್ಣಿನ ಧೂಳಿನೊಳಗೆ ಛಂಗನೇ ಬರೋ ಹೋರಿ ಹಿಡಿಯೋ ಹಬ್ಬ.. ಹೋರಿ ತಿವಿದರೆ ಯಮನ ಪಾದವೇ ಗತಿ.. ಉಸೇನ್ ಬೋಲ್ಟ್ ಮೀರಿಸೋ ರೇಂಜಿಗೆ ಹೋರಿಗಳು ಅಖಾಡದಲ್ಲಿ ಓಡ್ತಾ ಇದ್ರೆ ಅದರ ಖದರ್ ಬೇರೆನೇ ಇರುತ್ತೆ.. ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆ ಹೋರಿ ಬೆದರಿಸೋ ಸ್ಪರ್ದೆಗೆ ಹೆಸರುವಾಸಿ.
ಅಲಂಕಾರಗೊಂಡಿರೋ ಹೋರಿಗಳು. ಹೋರಿಗಳ ಕೊರಳಲ್ಲಿ ಕಾಣೋ ಕೊಬ್ಬರಿ ಹಾರ. ಹೋರಿಗಳ ಬಳಿ ರಾರಾಜಿಸೋ ವಿಭಿನ್ನ ಹೆಸರುಗಳು, ಜನರ ನಡುವೆ ಓಡ್ತಿರೋ ಹೋರಿಗಳು. ಸಾವಿರಾರು ಸಂಖ್ಯೆಯಲ್ಲಿ ಸೇರಿರೋ ಜನರು. ಇವೆಲ್ಲ ಕಂಡು ಬಂದಿದ್ದು, ಹಾವೇರಿ ನಗರದ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ. ದೀಪಾವಳಿ ಹಬ್ಬದ ಸಮಯದಲ್ಲಿ ವೀರಭದ್ರೇಶ್ವರ ಜಾತ್ರೆ ನಡೆಯುತ್ತದೆ. ದೀಪಾವಳಿ ಪಾಡ್ಯದ ದಿನ ಕೊಬ್ಬರಿ ಹೋರಿ ಸ್ಪರ್ಧೆ ನಡೆಯುತ್ತದೆ. ನಗರದಲ್ಲಿ ನಡೆಯೋ ಕೊಬ್ಬರಿ ಹೋರಿ ಸ್ಪರ್ಧೆ ನಂತರದ ದಿನಗಳಲ್ಲಿ ಇಡಿ ಜಿಲ್ಲಾಯಾದ್ಯಂತ ವ್ಯಾಪಿಸುತ್ತದೆ. ಈ ಬಾರಿ ಮಳೆಯಿಂದಾಗಿ ಹೋರಿ ಸ್ಪರ್ದೆ ನಡೆಯುವುದೇ ಅನುಮಾನ ಎನ್ನಲಾಗಿತ್ತು. ಆದರೆ, ರೈತರು ಕಷ್ಟಪಟ್ಟು ಸಾಕಿ ಹೋರಿಗಳನ್ನ ಹಬ್ಬಕಾಗಿ ತಯಾರು ಮಾಡಿದ್ದಾರೆ.ಹೋರಿ ತಂದು ಸ್ಪರ್ಧೆ ಮಾಡಿದ್ದಾರೆ.ಹೋರಿಗಳ ಕೊರಳಲ್ಲಿ ಕೊಬ್ಬರಿ ಹಾರ, ಹಣೆಗೆ ಬಲೂನ್, ಹೆಗಲ ಮೇಲೆ ಡಿಸೈನ್ ಡಿಸೈನ್ ಬಟ್ಟೆ ಅಲಂಕಾರ, ಹೀಗೆ ತರಹೇವಾರಿ ರಿಬ್ಬನ್ ಹಾಕಿ ಹೋರಿಗಳನ್ನ ಅಲಂಕಾರ ಮಾಡುತ್ತಾರೆ. ಹೀಗೆ ಅಲಂಕಾರಗೊಂಡ ಹೋರಿಗಳನ್ನ ಓಡಿಸ್ತಾರೆ.ಈ ಹಬ್ಬವನ್ನ ಎಂತಹ ಕಷ್ಟ ಬಂದ್ರು ಬಿಡೋದಿಲ್ಲ ಅಂತಾರೆ ಹೋರಿ ಮಾಲೀಕರು.
ಇನ್ನೂ ಸಂಘಟಕರು ನಿಗದಿಪಡಿಸಿದ ಸಮಯದಲ್ಲಿ ಹೋರಿ ಯಾರ ಕೈಗೂ ಸಿಗದಂತೆ ದೂರಕ್ಕೆ ಓಡಬೇಕು. ಹೋರಿಯನ್ನ ಓಡಿಸ್ತಿದ್ದಂತೆ ಹೋರಿ ಹಿಡಿಯೋರು ಹೋರಿ ಹಿಂದೆಯೇ ಓಡ್ತಾರೆ.ಯಾರ ಕೈಗೂ ಸಿಗದಂತೆ ಓಡುವ ಹೋರಿಗೆ ಬಹುಮಾನ ನೀಡಲಾಗುತ್ತೆ.ಹೋರಿ ಹಿಡಿದವರಿಗೂ ಬಹುಮಾನ ನೀಡಲಾಗುತ್ತದೆ. ಹೀಗಾಗಿ ಭರ್ಜರಿ ಓಟ ಕಿತ್ತೋ ಹೋರಿಗಳನ್ನ ಹಿಡಿಯಲು ಪ್ರಾಣದ ಹಂಗು ತೊರೆದು ಪೈಲ್ವಾನರು ಪ್ರಯತ್ನಿಸುತ್ತಾರೆ.
ಹಾವೇರಿ: ಶಿಗ್ಗಾಂವಿ ಜನರ ಋುಣದಲ್ಲಿದ್ದೇನೆ, ಸಿಎಂ ಬೊಮ್ಮಾಯಿ
ಇನ್ನು ಹೋರಿ ಮಾಲೀಕರು ಹುರುಳಿ, ಹಿಂಡಿ, ಮೊಟ್ಟೆ ಸೇರಿದಂತೆ ವಿವಿಧ ಧಾನ್ಯಗಳನ್ನ ತಿನ್ನಿಸಿ ಹೋರಿಯನ್ನ ಭರ್ಜರಿಯಾಗಿ ತಯಾರು ಮಾಡಿರ್ತಾರೆ. ಹಿಂಗಾರು ಬಿತ್ತನೆ ಮುಗಿದ ನಂತರ ಶುರುವಾಗೋ ಹೋರಿ ಸ್ಪರ್ಧೆಗೆ ಹೋರಿಗಳನ್ನ ಭರ್ಜರಿಯಾಗಿ ತಯಾರು ಮಾಡಿರ್ತಾರೆ.ಆದ್ರೆ ಅತಿಯಾದ ಮಳೆಯಿಂದ ಬಿತ್ತನೆ ಮಾಡಿಲ್ಲ.ಅದರೂ ಹೋರಿ ಹಬ್ಬ ತಪ್ಪಿಸಲು ಆಗುವುದಿಲ್ಲ ಅಂತಾರೆ ರೈತರು.
ಹಾವೇರಿಯ ರಸ್ತೆ ಗುಂಡಿಗೆ 228 ಜನ ಬಲಿ: ಕಿತ್ತುಹೋದ ರೋಡ್‌ಗಳಿಂದ ಅಪಘಾತ ಸಂಖ್ಯೆ ಹೆಚ್ಚಳ
ಇವತ್ತು ನಡೆದ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಯಾವುದೇ ರೀತಿಯ ಬಹುಮಾನ ನೀಡೋದಿಲ್ಲ.ಇಂದಿನಿಂದ ಅಧಿಕೃತವಾಗಿ ಜಿಲ್ಲೆಯಲ್ಲಿ ಕೊಬ್ಬರಿ ಹೋರಿ ಸ್ಪರ್ಧೆ ಶುರುವಾಗುತ್ತದೆ. ಒಟ್ಟಾರೆ ಕೆಲವೊಂದು ಬಾರಿ ಡೇಂಜರ್ ಅನ್ನಿಸೋ ಕೊಬ್ಬರಿ ಹೋರಿ ಸ್ಪರ್ಧೆಯನ್ನ ಉತ್ತರ ಕರ್ನಾಟಕದ ರೈತರು ಮನರಂಜನೆ ಹಬ್ಬವಾಗಿ ಆಚರಿಸಿಕೊಂಡು ಬರ್ತಿದ್ದಾರೆ.