ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಬಿಗ್ ರಿಲೀಫ್, ಆರೋಪ ನಿಗದಿಗೆ ತಡೆ
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೇಲಿನ ಅತ್ಯಾಚಾರ ಕೇಸಿನಲ್ಲಿ ಆರೋಪ ನಿಗದಿ ಮಾಡದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಮೂಲಕ ಜನವರಿ 13 ರಂದು ನಿಗದಿಯಾಗಿದ್ದ ಆರೋಪ ನಿಗದಿ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ತಡೆ ಬಿದ್ದಿದೆ.
ಬೆಂಗಳೂರು (ಜ.09): ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೇಲಿನ ಅತ್ಯಾಚಾರ ಕೇಸಿಗೆ ಸಂಬಂಧಪಟ್ಟಂತೆ ಸದ್ಯಕ್ಕೆ ಆರೋಪ ನಿಗದಿ ಮಾಡದಂತೆ ಹೈಕೋರ್ಟ್‌ನಿಂದ ಆದೇಶ ಹೊರಡಿಸಲಾಗಿದೆ.
ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ರ್ಜಿ ವಿಚಾರಣೆ ಮಾಡಿದ ಹೈಕೋರ್ಟ್, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪ ನಿಗದಿ ಮಾಡದಂತೆ ತಡೆ ನೀಡಿ ಆದೇಶ ಹೊರಡಿಸಿದೆ. ಇದೇ ಜ.13ಕ್ಕೆ ವಿಚಾರಣಾಧೀನ ಕೋರ್ಟ್‌ನಲ್ಲಿ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಆರೋಪ ನಿಗದಿ ಪ್ರಕ್ರಿಯೆ (ಚಾರ್ಜ್ ಶೀಟ್ ಆಧಾರದ ಮೇಲೆ ಆರೋಪಿಯನ್ನ ಕೋರ್ಟ್‌ಗೆ ಕರೆಸಿ ಯಾವ ಯಾವ ಆರೋಪದ ಅಡಿ ಚಾರ್ಜ್ ಶೀಟ್ ಆಗಿದೆ ಎಂದು ವಿಚಾರಣೆ ಎದುರಿಸುವ ಕೋರ್ಟ್ ಸೂಚಿಸುವ ಪ್ರಕ್ರಿಯೆ) ಆರಂಭಿಸಲು ದಿನಾಂಕ ನಿಗದಿಯಾಗಿತ್ತು. ಇದು ಟ್ರಯಲ್‌ನ ಮೊದಲ ಹಂತವಾಗಿದೆ.
ಆದರೆ, ಇದೀಗ ಹೈಕೋರ್ಟ್‌ನೊಂದ ಪ್ರಜ್ವಲ್ ರೇವಣ್ಣ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಜ.13ರಿಂದ ಆರಂಭವಾಗಬೇಕಿದ್ದ ಆರೋಪ ನಿಗದಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು, ಆರೋಪಿ ಪ್ರಜ್ವಲ್ ಕೋರ್ಟ್‌ಗೆ ಬಂದು ಟ್ರಯಲ್ ಎದುರಿಸುವುದರಿಂದ ತಾತ್ಕಾಲಿಕ ತಡೆ ಸಿಕ್ಕಂತಾಗಿದೆ. ಇನ್ನು ಮುಂದಿನ ಆದೇಶದ ವರೆಗೆ ಆರೋಪ ನಿಗದಿ ಮಾಡದಂತೆ ಹೈಕೋರ್ಟ್ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಜ.16ಕ್ಕೆ ಮುಂದೂಡಿಕೆ ಮಾಡಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದಿಂದ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲೂ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ: 6 ತಿಂಗಳು ಜೈಲೇ ಗತಿ!
ಭವಾನಿ ರೇವಣ್ಣ ಅರ್ಜಿ ವಿಚಾರಣೆ ಫೆ.17ಕ್ಕೆ ಮುಂದೂಡಿಕೆ: ಮತ್ತೊಂದೆಡೆ ಪ್ರಜ್ವಲ್ ರೇವಣ್ಣ ಅವರ ಅತ್ಯಾಚಾರ ಕೇಸಿಗೆ ಎಂಬಂಧಿಸಿದ ಕೆ.ಆರ್.ನಗರದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ತನ್ನ ಹೆಸರು ಕೈಬಿಡುವಂತೆ ಭವಾನಿ ರೇವಣ್ಣ ಕೂಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯ ಕುರಿತು ಅಂತಿಮ ವಾದ-ಪ್ರತಿವಾದ ಆಲಿಸಲು ದಿನಾಂಕ ನಿಗದಿ ಮಾಡಲಾಗಿದೆ. ಫೆ.17ಕ್ಕೆ ಅರ್ಜಿ ಇತ್ಯರ್ಥ ಪಡಿಸುವುದಾಗಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದಿಂದ ತಿಳಿಸಲಾಗಿದೆ. ಈ ಮೂಲಕ ಭವಾನಿ ರೇವಣ್ಣ ಅವರ ಮೇಲಿನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ಫೆ.17ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಇದನ್ನೂ ಓದಿ: ದೇವೇಗೌಡರ ಸರ್ಕಾರಿ ಗೆಸ್ಟ್ ಹೌಸಲ್ಲೂ ಪ್ರಜ್ವಲ್ ಅತ್ಯಾಚಾರ: ಗಂಡನನ್ನು ಕೊಲ್ಲೋದಾಗಿ ಬೆದರಿಸಿ 3 ವರ್ಷ ಬಲಾತ್ಕಾರ..!
ಕಳೆದ ನವೆಂಬರ್‌ನಲ್ಲಿ ಜಾಮೀನು ಅರ್ಜಿ ವಜಾ: ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಕೇಸಿನಲ್ಲಿ ಜೈಲು ಸೇರಿದ್ದು, ಸ್ಥಳೀಯ ಮತ್ತು ಹೈಕೋರ್ಟ್‌ನಲ್ಲಿಯೂ ಜಾಮೀನು ಸಿಕ್ಕಿರಲಿಲ್ಲ. ಕೆಳಹಂತದ ನ್ಯಾಯಾಲಯಗಳ ಆದೇಶ ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತೆರಳಿದ್ದರು. ಆದರೆ, ಇಂದು ಜಾಮೀನು ಅರ್ಜಿ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರ ಪೀಠವು 'ಆರೋಪಿ ಸೋ ಪವರ್ ಫುಲ್' ಎಂದು ಒಂದು ಸಾಲಿನ ಆದೇಶದ ಮೂಲಕ ಪ್ರಜ್ವಲ್ ರೇವಣ್ಣ ಅವರ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಲಾಗಿತ್ತು. ಇದಾದ ನಂತರ ಕನಿಷ್ಠ ಮುಂದಿನ 6 ತಿಂಗಳ ಕಾಲ ಅಂದರೆ ಏಪ್ರಿಲ್‌ವರೆಗೂ ಜೈಲು ಫಿಕ್ಸ್ ಆಗಿತ್ತು.