ಹಾಸನದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕಿದೆ. ಕೆ.ಆರ್. ನಗರದ ಅತ್ಯಾಚಾರ ಸಂತ್ರಸ್ತ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಹಾಸನ ಮತ್ತು ಮೈಸೂರಿಗೆ ಹೋಗುವ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಸಂತ್ರಸ್ತೆಯ ಮನೆಯ 500 ಮೀಟರ್ ಜಾಗವನ್ನು ಪ್ರವೇಶಿಸದಂತೆ ಷರತ್ತು ವಿಧಿಸಲಾಗಿದೆ. ಪ್ರಜ್ವಲ್ ರೇವಣ್ಣ ಮೇಲಿನ ಅತ್ಯಾಚಾರ ಪ್ರಕರಣ ರದ್ದತಿಗೆ ಕೋರ್ಟ್ ನಿರಾಕರಿಸಿದೆ.

ಬೆಂಗಳೂರು (ಏ.04): ಹಾಸನದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಭವಾನಿ ರೇವಣ್ಣ ಅವರ ಮೇಲಿದ್ದ ಕೆ.ಆರ್. ನಗರದ ಅತ್ಯಾಚಾರ ಸಂತ್ರಸ್ತ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಕೊಂಚ ರಿಲೀಫ್ ನೀಡಿದೆ.

ಭವಾನಿ ರೇವಣ್ಣ ಅವರ ಮಗ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆನ್ನಲಾದ ಕೆ.ಆರ್. ನಗರದ ಸಂತ್ರಸ್ತ ಮಹಿಳೆ ಪೊಲೀಸರಿಗೆ ಹೋಗಿ ದೂರು ನೀಡದಂತೆ ಕಿಡ್ನಾಪ್ ಮಾಡಿ ಗೃಹಬಂಧನದಲ್ಲಿ ಇಟ್ಟಿದ್ದ ಆರೋಪದಲ್ಲಿ ಭವಾನಿ ರೇವಣ್ಣ ಪ್ರಮುಖ ಆರೋಪಿ ಆಗಿದ್ದಾರೆ. ಆದರೆ, ಭವಾನಿ ರೇವಣ್ಣ ಅವರನ್ನು ವಿಚಾರಣೆ ಮಾಡಿದ ಪೊಲಿಸರು ಬಂಧಿಸಬೇಕು ಎನ್ನುವಷ್ಟರಲ್ಲಿ ಕೋರ್ಟ್‌ಗೆ ಹೋಗಿ ಜಾಮೀನು ಪಡೆದು ಬಂದಿದ್ದರು. ಇತ್ತೀಚೆಗೆ ಪೊಲೀಸರು ಈ ಕೇಸಿನ ತನಿಖೆ ನಡೆಸಿ ಕೋರ್ಟ್‌ಗೆ ಚಾರ್ಜ್‌ ಶೀಟ್ ಸಲ್ಲಿಕೆ ಮಾಡಿದ್ದಾರೆ. ಆದರೆ, ಭವಾನಿ ರೇವಣ್ಣನನ್ನು ಸುಮ್ಮನೆ ಬಿಟ್ಟರೆ ಮತ್ತೆ ಸಾಕ್ಷಿ ನಾಶಕ್ಕೆ ಮಂದಾಗಬಹುದೆಂದು ಹಾಸನ, ಮೈಸೂರಿಗೆ ಹೋಗದಂತೆ ಕೋರ್ಟ್ ನಿರ್ಬಂಧ ವಿಧಿಸಿತ್ತು.

ಇದೀಗ ಕೆ.ಆರ್. ನಗರ ಸಂತ್ರಸ್ತೆ ಅಪಹರಣ ಪ್ರಕರಣದ ಬಗ್ಗೆ ತವರು ಕ್ಷೇತ್ರಕ್ಕೆ ಹೋಗಲು ಅನುಮತಿ ನೀಡುವಂತೆ ಭವಾನಿ ರೇವಣ್ಣ ಮನವಿ ಮಾಡಿದ್ದ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್‌ ಇದೀಗ ಹಾಸನ ಮತ್ತು ಮೈಸೂರು ನಗರಕ್ಕೆ ಹೋಗುವ ನಿರ್ಬಂಧವನ್ನು ತೆರವುಗೊಳಿಸಿದೆ. ಹೀಗಾಗಿ, ಸುಮಾರು ಒಂದು ವರ್ಷಗಳ ಕಾಲ ಹಾಸನಕ್ಕೆ ಹೋಗಲಾಗದೇ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಹೈಕೋರ್ಟ್‌ನಿಂದ ಭವಾನಿ ರೇವಣ್ಣಗೆ ಹಾಸನ, ಮೈಸೂರಿಗೆ ಹೋಗಲು ಅನುಮತಿ ಕೊಟ್ಟಿದ್ದು, ಸಂತ್ರಸ್ತ ಮಹಿಳೆಯ ಮನೆಯ 500 ಮೀಟರ್ ಜಾಗವನ್ನು ಪ್ರವೇಶ ಮಾಡದಂತೆ ಷರತ್ತು ವಿಧಿಸಿದೆ. ಹೈಕೋರ್ಟ್‌ಮ ಏಕಸದಸ್ಯ ಪೀಠದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ಪೆನ್‌ಡ್ರೈವ್‌ ಕೇಸ್‌: ಸಂತ್ರಸ್ತೆಯ ಕಿಡ್ನಾಪ್‌ ಮಾಡಿಸಿದ್ದು ರೇವಣ್ಣ, ಭವಾನಿ..!

ಕೇಸಿನ ಹಿನ್ನೆಲೆಯೇನು?
ಕಳೆದ ವರ್ಷ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್ ದಾಖಲಾದ ನಂತರ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು. ಈ ವೇಳೆ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆ.ಆರ್. ನಗರದ ಮಹಿಳೆಯು ಕೂಡ ಸಾಕ್ಷಿ ಹೇಳಬಹುದು ಎಂಬ ಭಯದಿಂದ ಸಂತ್ರಸ್ತ ಮಹಿಳೆಯನ್ನು ಭವಾನಿ ರೇವಣ್ಣ ಅವರು ಕಿಡ್ನ್ಯಾಪ್ ಮಾಡಿಸಿ ಗ್ರಾಮವೊಂದರ ಫಾರ್ಮ್ ಹೌಸ್‌ನಲ್ಲಿ ಕೂಡಿ ಹಾಕಿದ್ದರು ಎಂಬ ಆರೋಪ ಕೇಳಿಬಂದಿತ್ತು. ಬಳಿಕ, ಎಸ್‌ಐಟಿ ಅಧಿಕಾರಿಗಳು ಆ ಮಹಿಳೆಯನ್ನು ರಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಭವಾನಿಯ ವರು ನಿರೀಕ್ಷಣಾ ಜಾಮೀನು ಕೋರಿದ್ದು, ಜೂ.18ರಂದು ಕರ್ನಾಟಕ ಹೈಕೋರ್ಟ್‌ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಎಎಸ್‌ಟಿ, ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಆದರೆ, ಸುಪ್ರೀಂ ಕೋರ್ಟ್‌ ಕೂಡ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು.

ಮಗ ಪ್ರಜ್ವಲ್ ಅರ್ಜಿ ತಿರಸ್ಕರಿಸಿದ್ದ ಕೋರ್ಟ್: ಅತ್ಯಾಚಾರ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತನ್ನ ಮೇಲಿರುವ ಅತ್ಯಾಚಾರ ಪ್ರಕರಣದ ದೂರನ್ನು ವಜಾಗೊಳಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ಮಾಡಿದ್ದ ನ್ಯಾಯಾಲಯ ಪ್ರಜ್ವಲ್ ಅರ್ಜಿಯನ್ನು ತಿರಸ್ಕಾರ ಮಾಡಿತ್ತು. ಜೊತೆಗೆ, ಕೆ.ಆರ್.ನಗರದ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಕೇಸಿನಲ್ಲಿ ಪ್ರಜ್ವಲ್ ಕೂಡ ಆರೋಪಿ ಆಗಿದ್ದು, ಈ ಕೇಸಿನ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ. ಈ ವೇಳೆ ಪ್ರಜ್ವಲ್ ಕೋರ್ಟ್ ನ್ಯಾಯಾಧೀಶರ ಮುಂದೆ ತಲೆ ತಗ್ಗಿಸಿ ಕಣ್ಣೀರು ಹಾಕಿದ ಘಟನೆ ನಡೆಯಿತು.

ಇದನ್ನೂ ಓದಿ: ಕಿಡ್ನಾಪ್‌ ಕೇಸ್‌ನಲ್ಲಿ ಭವಾನಿ ರೇವಣ್ಣಗೆ ಬಿಗ್ ರಿಲೀಫ್‌: ಹೈಕೋರ್ಟ್‌ ಜಾಮೀನು ಎತ್ತಿಹಿಡಿದ ಸುಪ್ರೀಂಕೋರ್ಟ್