ಹಾಸನಾಂಬ ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ಗುಡ್ ನ್ಯೂಸ್: ಹೆಲಿಕಾಪ್ಟರ್, ಬಸ್ ಪ್ರವಾಸ ಆಯೋಜಿಸಿದ ಜಿಲ್ಲಾಡಳಿತ
ನ.2ರಿಂದ ಆರಂಭವಾಗಲಿರುವ ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಹಾಸನ ಜಿಲ್ಲಾಡಳಿತದಿಂದ ವಿಶೇಷ ಪ್ಯಾಕೇಜ್‌ಗಳನ್ನು ಆಯೋಜನೆ ಮಾಡಲಾಗಿದೆ.

ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್
ಹಾಸನ (ಅ.30): ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನದ ಅಧಿದೇವತೆ ಹಾಸನಾಂಬೆ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ನವೆಂಬರ್ 2 ರಿಂದ 15 ವರೆಗೆ ಹಾಸನಾಂಬ ಉತ್ಸವ ಜರುಗಲಿದೆ. ಹಾಸನಾಂಬೆಯ ದರ್ಶನೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ನ.2ರಿಂದ ಆರಂಭವಾಗಲಿರುವ ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಹಾಸನ ಜಿಲ್ಲಾಡಳಿತದಿಂದ ವಿಶೇಷ ಪ್ಯಾಕೇಜ್‌ಗಳನ್ನು ಆಯೋಜನೆ ಮಾಡಲಾಗಿದೆ.
ಆದರೆ ಇದೇ ಮೊದಲ ಬಾರಿಗೆ ದೇವಿಯ ದರ್ಶನದ ಜೊತೆ ಜೊತೆಯಲ್ಲೇ ಹಲವು ರೀತಿಯ ಹೊಸ ಪ್ರಯೋಗ, ನವ ವಿಧಾನ ಅಳವಡಿಸಲಾಗುತ್ತಿದೆ. ವಿವಿಧೆಡೆಗಳಿಂದ ಬರುವ ಭಕ್ತರು, ಪ್ರವಾಸಿಗರಿಗೆ ಹಾಸನಾಂಬೆ ದರ್ಶನ ದರ್ಶನ ಮಾಡಿಸುವುದರ ಜೊತೆಗೆ ಅವರಿಗೆ ಹಾಸನ ಜಿಲ್ಲೆಯ ಐತಿಹಾಸಿಕ ಮಹತ್ವ, ಪ್ರಾಕೃತಿಕ ಸೊಬಗು, ಶಿಲ್ಪಕಲೆ ಹಾಗೂ ಸಾಂಸ್ಕೃತಿಕ ವೈಭವ ಪರಿಚಯಿಸುವುದರ ಜೊತೆಗೆ ಮನರಂಜನೆ, ಮನೋಲ್ಲಾಸ ಉಣ ಬಡಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಇದರ ಹಿಂದಿನ ರೂವಾರಿ ಜಿಲ್ಲೆಗೆ ಕೆಲ ತಿಂಗಳ ಹಿಂದಷ್ಟೇ ಜಿಲ್ಲಾಧಿಕಾರಿಯಾಗಿ ಬಂದಿರುವ ಸಿ.ಸತ್ಯಭಾಮ ಅವರಾಗಿದ್ದಾರೆ. ಯುವ ಉತ್ಸಾಹಿ ಎಸಿ ಮಾರುತಿ ಹಾಗೂ ತಮ್ಮ ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಇದೇ ಮೊದಲ ಬಾರಿಗೆ ಹಾಸನಾಂಬೆ ಹಬ್ಬಕ್ಕೆ ಹೊಸ ಸ್ಪರ್ಶ ನೀಡಲು ಅಣಿಯಾಗಿದ್ದಾರೆ. ಇದು ಯಶಸ್ಸಿಯಾದರೆ ಒಟ್ಟಾರೆ ಭಕ್ತರು ಹಾಗೂ ಜನಮಾನಸದಲ್ಲಿ ಉಳಿಯುವ ಉತ್ಸವ ಇದಾಗಲಿದೆ.
ಬೆಂಗಳೂರು ಮಾಲ್‌ನಲ್ಲಿ ಲೈಂಗಿಕ ಕಿರುಕುಳ ವಿಡಿಯೋ ವೈರಲ್: ಪೊಲೀಸರ ಕೈಗೂ ಸಿಗದ ಕಾಮುಕ ಎಲ್ಲಿದ್ದಾನೆ?
ಹಿಂದಿನಿಂದಲೂ ಹಾಸನಾಂಬ ಜಾತ್ರಾ ಮಹೋತ್ಸವದ ವೇಳೆ ಬ್ಯಾರಿಕೇಡ್ ಅಳವಡಿಕೆ, ಹೂವಿನ ಅಲಂಕಾರ, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಿ, ಬಂದ ಭಕ್ತರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂಬ ಹೇಳಿಕೆ, ಭರವಸೆ ಹೊರ ಬೀಳುತ್ತಿದ್ದರೂ ಗರ್ಭಗುಡಿಯ ಬಾಗಿಲು ತೆರೆದು ದರ್ಶನ ಶುರುವಾದ ಬಳಿಕ ಅದೇ ರಾಗ, ಅದೇ ಹಾಡು ಎಂಬಂತೆ ಆಗುತ್ತಿತ್ತು. ಆದರೆ ಈ ಬಾರಿಗೆ ಹಿಂದಿನ ಯಾವುದೇ ತಪ್ಪು, ತೊಂದರೆ ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಮತ್ತವರ ತಂಡ ಭರವಸೆ ನೀಡಿದೆ.
12 ದಿನ 24 ಗಂಟೆಯೂ ದರ್ಶನ: ಮೊದಲಿಗೆ ದೇವಿಯ ಗರ್ಭಗುಡಿ ಬಾಗಿಲು ತೆರೆಯುವ ನ.2 ಹಾಗೂ ಮುಚ್ಚುವ ನ.15 ಹೊರತು ಪಡಿಸಿ ಉಳಿದ 12 ದಿನಗಳ ಕಾಲ ದಿನದ 24 ಗಂಟೆಯೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದಾಗಿ ಡಿಸಿ ಸತ್ಯಭಾಮಾ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಬ್ಯಾರಿಕೇಡ್ ದೂರವನ್ನು 10.8 ಕಿಮೀ ಉದ್ದಕ್ಕೆ ಹಿಗ್ಗಿಸಲಾಗಿದೆ. ಭಕ್ತರಿಗೆ ಬಿಸಿಲು ಮಳೆಯಲ್ಲಿ ರಕ್ಷಣೆ ನೀಡಲು ಜರ್ಮನ್ ಟೆಂಟ್ ಅಳವಡಿಕೆ ಜೊತೆಗೆ ಸರತಿ ಸಾಲಿನಲ್ಲಿ ಕಾಲು ಸುಡದಂತೆ ಮ್ಯಾಟ್ ಹಾಸಲಾಗುತ್ತಿದೆ.
ಪಾಸ್ ದುರ್ಬಳಕೆಗೆ ತಡೆ: ಪ್ರತಿ ವರ್ಷ ಹಾಸನಾಂಬ ದರ್ಶನದ ಪಾಸ್‌ಗಳನ್ನು ದುರ್ಬಳಕೆ ಮಾಡಲಾಗುತ್ತದೆ ಆರೋಪ ಕೇಳಿ ಬಂದಿತ್ತು. ಆದರೆ ಈ ಸಲ 1,000 ಹಾಗೂ 300 ರೂ. ಪಾಸ್ ಹಾಗೂ ವಿವಿಐಪಿ ಪಾಸ್‌ಗಳಲ್ಲಿ ಕ್ಯು ಆರ್ ಬಾರ್ ಕೋಡ್ ಹಾಗೂ ಗೋಲ್ಡ್‌ಕೋಟ್ ಮಾದರಿ ಅಳವಡಿಸಲಾಗಿದೆ. ಇದನ್ನು ಒಮ್ಮೆ ಸ್ಕ್ಯಾನ್ ಮಾಡಿದರೆ, ಮತ್ತೊಮ್ಮೆ ಬಳಕೆ ಮಾಡುವಂತಿಲ್ಲ. ಇದರಿಂದ ಪಾಸ್ ದುರ್ಬಳಕೆ ನಿಲ್ಲಲಿದೆ. ಸ್ಕ್ಯಾನ್ ಮಾಡುವ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗೆ ವಹಿಸಲಾಗಿದೆ. 12 ದಿನಗಳ ಕಾಲ ಬರುವ ಎಲ್ಲಾ ಭಕ್ತರಿಗೆ ದೊನ್ನೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸಿಸಿ ಕ್ಯಾಮೆರಾ ವೀಕ್ಷಣೆಗೆ ವಾರ್ ರೂಮ್ ಸ್ಥಾಪನೆ ಜೊತೆಗೆ ಅವಲೋಕನ ಮಾಡಲು 36 ವಾಕಿ ಟಾಕಿ ವ್ಯವಸ್ಥೆ ಮಾಡಲಾಗುತ್ತಿದೆ. ಇದೂ ಕೂಡ ಪ್ರಥಮ ಪ್ರಯತ್ನವಾಗಿದೆ.
ರಾಕ್‌ಲೈನ್ ವೆಂಕಟೇಶ್ ತಮ್ಮನ ಮನೆಗೆ ಕನ್ನ ಹಾಕಿದ ಖದೀಮರು: 5 ಕೆ.ಜಿ. ಚಿನ್ನಾಭರಣ ಕದ್ದು ಪರಾರಿ
ಹಾಸನ ಜೊತೆಗೆ ಜಿಲ್ಲೆಯ ದರ್ಶನ: ಈ ಸಲದ ಉತ್ಸವದ ಮತ್ತೊಂದು ವಿಶೇಷತೆ ಎಂದರೆ ಆಗಸದಿಂದ ಹಾಸನ ಎಂಬ ವಿನೂತನ ವೈಮಾನಿಕ ವೀಕ್ಷಣೆ ಮಾಡಿರುವುದು. ನ.3 ರಿಂದ 6 ರವರೆಗೆ ಒಬ್ಬರು 4,300 ರೂ. ಪಾವತಿಸಿದರೆ 6-7 ನಿಮಿಷ ಆಗಸದಲ್ಲಿ ಹಾರಾಡಿ ಹಾಸನ ನಗರ, ಸೀಗೆಗುಡ್ಡ, ಮಳೆ ಮಲ್ಲೇಶ್ವರ ದೇವಾಲಯ, ಗೆಂಡೆಕಟ್ಟೆ ವನ್ಯಧಾಮವನ್ನು ಮೇಲಿಂದ ಕಣ್ತುಂಬಿಕೊಳ್ಳಬಹುದಾಗಿದೆ. ಹೆಲಿಕಾಪ್ಟರ್ ಸರ್ಕಾರಿ ಕಾಲೇಜು ಆವರಣದಿಂದ ಹೊರಟು ಅಲ್ಲೇ ಬಂದು ಇಳಿಯಲಿದೆ.
ಇಂದು ಒಂದಾದರೆ ಇಡೀ ನಗರದ ತುಂಬೆಲ್ಲಾ ಖಾಸಗಿ ಕಟ್ಟಡ ಸೇರಿದಂತೆ ಸರ್ಕಾರಿ ಕಟ್ಟಡ, ಪ್ರಮುಖ ರಸ್ತೆ ಹಾಗೂ ಜಿಲ್ಲಾದ್ಯಂತ ಎ ಮತ್ತು ಬಿ ಗ್ರೇಡ್ ದೇವಾಲಯಗಳಲ್ಲಿ ಅಲಂಕಾರ ಜೊತೆಗೆ ನಿತ್ಯ ಪೂಜೆ ಮಾಡಲು ಸೂಚಿಸಲಾಗಿದೆ.
ಗಮನಾರ್ಹ ಸಂಗತಿ ಎಂದರೆ ನಗರಕ್ಕೆ ಬರುವ ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣಗಳ ಸೌಂದರ್ಯ ಸವಿಯಲು ಸಕಲೇಶಪುರ ಮಾರ್ಗ, ಬೇಲೂರು-ಹಳೇಬೀಡು ಮಾರ್ಗ, ಅರಸೀಕೆರೆ ಮಾರ್ಗ, ಶ್ರವಣಬೆಳಗೊಳ ಹಾಗೂ ಸಕಲೇಶಪುರ ಪರಿಸರ ಪ್ರವಾಸ ಮಾರ್ಗ ಸೇರಿ ಕೆಎಸ್‌ಆರ್‌ಟಿಸಿ ಸಹಯೋಗದೊಂದಿಗೆ ಒಟ್ಟು 5 ಪ್ಯಾಕೇಜ್ ಮಾರ್ಗ ಸಿದ್ಧಪಡಿಸಲಾಗಿದೆ. 1 ಬಸ್ ನಲ್ಲಿ ಕನಿಷ್ಟ 20 ಮಂದಿ ಇರಬೇಕು. ವಯಸ್ಕರು-ಮಕ್ಕಳಿಗೆ ಒಂದೊಂದು ದರ ನಿಗದಿಪಡಿಸಲಾಗಿದೆ. ಸಕಲೇಶಪುರ ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಉಚಿತ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಒಟ್ಟಿನಲ್ಲಿ ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವ ಭಕ್ತಿ ಭಾವದ ಜೊತೆಗೆ ಸಂತೋಷ, ಸಂಭ್ರಮದ ಉನ್ಮಾದವನ್ನೂ ನೀಡುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇಂತಹ ನಾವಿನ್ಯ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಿರುವ ಡಿಸಿ ಸತ್ಯಭಾಮಾ ಹಾಗೂ ಎಸಿ ಮಾರುತಿ ಅವರ ತಂಡದ ಯೋಜನೆ ಜನ ಮೆಚ್ಚುಗೆಗೆ ಪಾತ್ರವಾಗಿದೆ.